ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ: ಈರುಳ್ಳಿ ಬೆಳೆಗಾರರ ಮನವೊಲಿಕೆಗೆ ಕಸರತ್ತು

ಆಡಳಿತಾರೂಢ ಪಕ್ಷದ ನೀತಿಗಳ ವಿರುದ್ಧ ರೈತರ ಸಿಟ್ಟು
Published 11 ಮೇ 2024, 13:54 IST
Last Updated 11 ಮೇ 2024, 13:54 IST
ಅಕ್ಷರ ಗಾತ್ರ

ನಾಸಿಕ್: ಮಹಾರಾಷ್ಟ್ರದ ಉತ್ತರ ಮತ್ತು ಪಶ್ಚಿಮ ಭಾಗಗಳು ಈರುಳ್ಳಿ ಬೆಳೆಗೆ ಪ್ರಸಿದ್ಧಿ ಪಡೆದಿವೆ. ಲೋಕಸಭಾ ಚುನಾವಣೆಯ ನಾಲ್ಕು ಮತ್ತು ಐದನೇ ಹಂತಗಳಲ್ಲಿ ‘ಈರುಳ್ಳಿ ವಲಯ’ದ 24 ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೈತರ ಸಂಕಷ್ಟವೇ ಮುಖ್ಯ ಚುನಾವಣಾ ವಿಷಯವಾಗಿದೆ.       

ರಾಜ್ಯದ 22 ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಅವುಗಳ ವ್ಯಾಪ್ತಿಯ 13 ಲೋಕಸಭಾ ಕ್ಷೇತ್ರಗಳ ರೈತರ ಮೇಲೆ ಕೇಂದ್ರದ ಈರುಳ್ಳಿಗೆ ಸಂಬಂಧಿಸಿದ ನೀತಿಗಳು ನೇರ ಪರಿಣಾಮ ಬೀರುತ್ತವೆ. ಅವುಗಳ ಪೈಕಿ ಸೋಲಾಪುರ, ಲಾತೂರ್, ಬಾರಾಮತಿ ಮತ್ತು ಉಸ್ಮಾನಾಬಾದ್ ಕ್ಷೇತ್ರಗಳ ಮತದಾನವು ಮೂರನೇ ಹಂತದಲ್ಲಿ ಮೇ 7ರಂದು ನಡೆದಿದೆ. 

ಈರುಳ್ಳಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಆಡಳಿತಾರೂಢ ಪಕ್ಷ ಮತ್ತು ವಿರೋಧ ಪಕ್ಷಗಳೂ ವಿಫಲವಾಗಿವೆ ಎಂದು ಮಹಾರಾಷ್ಟ್ರ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಸ್ಥಾಪಕ ಅಧ್ಯಕ್ಷ ಭರತ್ ದಿಘೋಲೆ ಹೇಳಿದರು. 

‘ಈರುಳ್ಳಿ ಬೆಳೆಗಾರರಲ್ಲಿ ತೀವ್ರವಾದ ಅಸಮಾಧಾನವಿದ್ದು, ಅದು ಮೇ 13 ಮತ್ತು ಮೇ 20ರಂದು ಇವಿಎಂ ಯಂತ್ರಗಳಲ್ಲಿ ಮತ ಚಲಾವಣೆ ಮೂಲಕ ವ್ಯಕ್ತವಾಗಲಿದೆ’ ಎಂದು ಅವರು ತಿಳಿಸಿದರು.

ಈ ಹಿಂದೆ ಕೇಂದ್ರ ಸರ್ಕಾರವು ದೇಶಿ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಈರುಳ್ಳಿ ರಫ್ತಿನ ಮೇಲೆ ಶೇ 14 ತೆರಿಗೆ ವಿಧಿಸಿತ್ತು. ಅದರ ವಿರುದ್ಧ ರೈತರು ಪ್ರತಿಭಟನೆ ನಡೆಸಿದ ನಂತರ ತೆರಿಗೆಯನ್ನು ಹಿಂಪಡೆದು, ಟನ್ ಈರುಳ್ಳಿಗೆ ಸುಮಾರು ₹71 ಸಾವಿರ ಬೆಂಬಲ ಬೆಲೆ ನಿಗದಿ ಮಾಡಿತ್ತು. ಆದರೂ ಬೆಂಬಲ ಬೆಲೆ ಸಾಲದು ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸರ್ಕಾರವು ಈರುಳ್ಳಿ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಹೇರಿತು. ನಿಷೇಧವನ್ನು ಮೇ 4ರಂದು ವಾಪಸ್ ಪಡೆದರೂ, ರಫ್ತಿನ ಮೇಲೆ ಶೇ 40 ತೆರಿಗೆ ವಿಧಿಸುವ ಮೂಲಕ ಟನ್‌ ಈರುಳ್ಳಿಗೆ ಸುಮಾರು ₹46 ಸಾವಿರ ಕನಿಷ್ಠ ರಫ್ತು ಬೆಲೆಯನ್ನು ನಿಗದಿಪಡಿಸಿತ್ತು. 

ವಿರೋಧ ಪಕ್ಷದ ವಿರುದ್ಧವೂ ದಿಘೋಲೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ‘ಚುನಾವಣೆಯಲ್ಲಿ ರೈತರ ಸಿಟ್ಟನ್ನು ಮತವಾಗಿ ಪರಿವರ್ತಿಸಿಕೊಳ್ಳಬಹುದು ಎಂದು ವಿರೋಧ ಪಕ್ಷಗಳು ರಫ್ತು ನಿಷೇಧ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಿಲ್ಲ’ ಎಂದು ಅವರು ಆರೋಪಿಸುತ್ತಾರೆ.

ಶಿವಸೇನಾ (ಯುಬಿಟಿ) ಉದ್ಧವ್ ಠಾಕ್ರೆ ಅವರಾಗಲಿ, ಕಾಂಗ್ರೆಸ್ ಆಗಲಿ ಈರುಳ್ಳಿ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಲಿಲ್ಲ ಎಂದು ದಿಘೋಲೆ ಹೇಳುತ್ತಾರೆ. ಸರ್ಕಾರವು ಈರುಳ್ಳಿ ಬೆಳೆಗಾರರಿಗೆ ಘೋಷಣೆ ಮಾಡಿದಂತೆ ಬೆಳೆಯನ್ನು ಕೊಂಡುಕೊಳ್ಳಲಿಲ್ಲ, ರಪ್ತು ಕೂಡ ಮಾಡಲಿಲ್ಲ. ಗ್ರಾಹಕರಿಗಾಗಿ ಈರುಳ್ಳಿ ಬೆಲೆ ಏರಿಕೆ ತಡೆಯಲು ಬೆಳೆಗಾರರನ್ನು ಆ ರೀತಿ ಸಂಕಷ್ಟಕ್ಕೀಡುಮಾಡುವ ಅಗತ್ಯವಿಲ್ಲ’ ಎನ್ನುವುದು ಅವರ ಅನಿಸಿಕೆ. 

..
..
..
..

ಈರುಳ್ಳಿ ಬೆಳೆಗಾರರ ಮತ ಯಾರಿಗೆ?

ಮಹಾರಾಷ್ಟ್ರದ ಧುಲೆ ದಿಂಡೋರಿ ಅಹಮದ್‌ನಗರ ಶಿರಡಿ ಶಿರೂರ್ ಬೀಡ್ ಮಾವಲ್ ನಂದೂರ್‌ಬಾರ್‌ ಮತ್ತು ದೇಶದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಲಾಸ್ಲಗಾಂವ್ ಇರುವ ನಾಸಿಕ್‌ ಕ್ಷೇತ್ರಗಳ ಈರುಳ್ಳಿ ಬೆಳೆಗಾರರು ಸರ್ಕಾರದ ನೀತಿಗಳಿಂದ ಬಾಧಿತರಾಗಿದ್ದಾರೆ. ಈ ಕ್ಷೇತ್ರಗಳ ಮತದಾನವು ಮುಂದಿನ ಎರಡು ಹಂತಗಳಲ್ಲಿ ನಡೆಯಲಿದೆ.  ‘ಮಹಾರಾಷ್ಟ್ರ ದೇಶದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಷ್ಟ್ರವಾಗಿದ್ದು ಒಟ್ಟು ಬೆಳೆಯಲ್ಲಿ ಶೇ 40ರಷ್ಟು ಇಲ್ಲಿ ಬೆಳೆಯಲಾಗುತ್ತದೆ. ರೈತವಿರೋಧಿ ನೀತಿಗಳ ಕಾರಣದಿಂದ ಗ್ರಾಮೀಣ ಭಾಗದಲ್ಲಿ ಆಡಳಿತ ವಿರೋಧಿ ಅಲೆಯನ್ನು ಕಾಣಬಹುದು’ ಎಂದು ನಾಸಿಕ್‌ನ ಹಿರಿಯ ಕಾಂಗ್ರೆಸ್ ಮುಖಂಡ ರಾಜಾರಾಮ್ ಪಂಗಾವ್ಣೆ ಹೇಳಿದರು. ‘ಈರುಳ್ಳಿ ರಫ್ತು ನಿಷೇಧ ಸಂಬಂಧ ರೈತರು ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದು ನಿಜ. ಆದರೆ ಈಗ ನಿಷೇಧ ಹಿಂಪಡೆಯಲಾಗಿದೆ. ಅದರಿಂದ ಅವರಿಗೆ ಲಾಭವಾಗಲಿದೆ. ನಾವು ಚುನಾವಣಾ ಪ್ರಚಾರದಲ್ಲಿ ಅದನ್ನೇ ಮುಖ್ಯವಾಗಿ ಪ್ರಸ್ತಾಪಿಸುತ್ತಿದ್ದೇವೆ’ ಎಂದು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಎನ್‌ಸಿಪಿ ಮುಖಂಡ ಛಗನ್ ಭುಜಬಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT