ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌, ಎಸ್ಪಿ ಗೆದ್ದರೆ ರಾಮ ಮಂದಿರದ ಮೇಲೆ ಬುಲ್ಡೋಜರ್: ಪ್ರಧಾನಿ ಮೋದಿ

Published 18 ಮೇ 2024, 3:24 IST
Last Updated 18 ಮೇ 2024, 3:24 IST
ಅಕ್ಷರ ಗಾತ್ರ

ಬಾರಾಬಂಕಿ/ಫತೇಪುರ/ಹಮೀರ್‌ಪುರ (ಉತ್ತರ ಪ್ರದೇಶ): ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ರಾಮ ಮಂದಿರದ ಮೇಲೆ ಬುಲ್ಡೋಜರ್ ಹರಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದ್ದಾರೆ. ‘ಎಲ್ಲಿ ಬುಲ್ಡೋಜರ್ ಹರಿಸಬೇಕು’ ಎಂಬುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಕಲಿಯುವಂತೆ ಸಲಹೆ ನೀಡಿದ್ದಾರೆ.

ಬಾರಾಬಂಕಿಯಲ್ಲಿ ಚುನಾವಣಾ ರ್‍ಯಾಲಿ ನಡೆಸಿದ ಅವರು, ‘ಎಸ್‌ಪಿ ಮುಖಂಡರೊಬ್ಬರು ರಾಮ ಮಂದಿರ ನಿಷ್ಪ್ರಯೋಜಕ ಎಂದು ರಾಮ ನವಮಿಯ ದಿನ ಹೇಳಿದ್ದರು. ಅದೇ ಹೊತ್ತಿಗೆ ರಾಮ ಮಂದಿರದ ಬಗೆಗಿನ ಸುಪ್ರೀಂ ಕೋರ್ಟ್ ತೀರ್ಪನ್ನು ಬದಲಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಎಸ್‌ಪಿ–ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅವರು ರಾಮ ಲಲ್ಲಾನನ್ನು ಮತ್ತೆ ಟೆಂಟ್‌ಗೆ ಕಳಿಸುತ್ತಾರೆ ಮತ್ತು ದೇವಸ್ಥಾನದ ಮೇಲೆ ಬುಲ್ಡೋಜರ್ ಹರಿಸುತ್ತಾರೆ’ ಎಂದು ಪ್ರತಿಪಾದಿಸಿದರು.

‘ಇಂಡಿಯಾ’ ಕೂಟವು ಅಸ್ಥಿರತೆ ಮೂಡಿಸುವ ಸಲುವಾಗಿ ಕಣದಲ್ಲಿದ್ದು, ಚುನಾವಣೆ ಮುಗಿಯುತ್ತಿದ್ದಂತೆಯೇ ಕುಸಿದು ಬೀಳಲಿದೆ’ ಎಂದು ಅಭಿಪ್ರಾಯಪಟ್ಟರು.

‘ಎಸ್‌ಪಿ–ಕಾಂಗ್ರೆಸ್ ಓಲೈಕೆಗೆ ಶರಣಾಗಿವೆ. ದೇಶಕ್ಕೆ ಸತ್ಯ ಏನು ಎನ್ನುವುದನ್ನು ಮೋದಿ ಹೇಳುತ್ತಿದ್ದರೆ, ಹಿಂದೂ–ಮುಸ್ಲಿಂ ವಿಭಜನೆ ಮಾಡುತ್ತಿರುವುದಾಗಿ ಆರೋಪಿಸುತ್ತಾರೆ. ಇವರು ಓಲೈಸಲು ಪ್ರಯತ್ನಿಸುತ್ತಿದ್ದ ಮತಬ್ಯಾಂಕ್‌ ಕೂಡ ಸತ್ಯವನ್ನು ಅರ್ಥಮಾಡಿಕೊಳ್ಳಲು ಆರಂಭಿಸಿದೆ. ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ತ್ರಿವಳಿ ತಲಾಖ್ ಕುರಿತ ಕಾನೂನಿನಿಂದ ಖುಷಿಯಾಗಿದ್ದು, ನಿರಂತರವಾಗಿ ಬಿಜೆಪಿಯನ್ನು ಆಶೀರ್ವದಿಸುತ್ತಿದ್ದಾರೆ’ ಎಂದು ಹೇಳಿದರು.

ಅಖಿಲೇಶ್ ಯಾದವ್ ಬಗ್ಗೆ ಲೇವಡಿ ಮಾಡಿದ ಮೋದಿ, ‘ರಾಯ್‌ಬರೇಲಿಯ ಜನ ಪ್ರಧಾನಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಅದನ್ನು ಕೇಳಿ ಸಮಾಜವಾದಿ ರಾಜಕುಮಾರನ ಹೃದಯ ಒಡೆದುಹೋಗಿದೆ. ಕಣ್ಣೀರು ಬಂದಿಲ್ಲ. ಆದರೆ, ಅವರ ಹೃದಯದ ಎಲ್ಲ ಆಸೆಗಳೂ ಕೊಚ್ಚಿಕೊಂಡುಹೋಗಿವೆ’ ಎಂದಿದ್ದಾರೆ.

ಫತೇಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೋದಿ, ‘ರಾಹುಲ್ ಗಾಂಧಿ ಅಮೇಠಿಯಿಂದ ಸ್ಪರ್ಧಿಸುವುದಿಲ್ಲ ಎಂದು ನಾನು ಭವಿಷ್ಯ ನುಡಿದಿದ್ದೆ. ಈಗ ಅದು ನಿಜವಾಗಿದೆ. ಮುಂದಿನ ಸುದ್ದಿ ಏನು ಅಂದರೆ, ತನ್ನ ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ ‘ಮಿಷನ್ 50’ ಆರಂಭಿಸಿದೆ. ಇಡೀ ದೇಶದಲ್ಲಿ ಹೇಗಾದರೂ ಮಾಡಿ 50 ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಗುರಿಯಾಗಿದೆ’ ಎಂದು ಹೇಳಿದರು.

ನಂತರ ಹಮೀರ್‌ಪುರದಲ್ಲಿ ಮಾತನಾಡಿದ ಪ್ರಧಾನಿ, ‘ಜನರ ಮತಗಳ ಮೂಲಕ ಅಧಿಕಾರಕ್ಕೆ ಬರುವ ಎಸ್‌ಪಿ–ಕಾಂಗ್ರೆಸ್ ಜನರ ಆಸ್ತಿಯ ಒಂದು ಪಾಲನ್ನು ವೋಟ್ ಜಿಹಾದ್ ಮಾಡಿದವರಿಗೆ ಕೊಡುಗೆಯಾಗಿ ನೀಡಲಿವೆ’ ಎಂದು ಆರೋಪಿಸಿದರು.

ತಾನು ಎಸ್‌ಪಿ ಮತ್ತು ಕಾಂಗ್ರೆಸ್ ವಿರುದ್ಧ ಎಚ್ಚರಿಕೆ ನೀಡಲು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.

‘ದಲಿತರ, ಹಿಂದುಳಿದವರ ಮೇಲೆ ಬುಲ್ಡೋಜರ್’

ನವದೆಹಲಿ: ‘ಎಲ್ಲಿ ಬುಲ್ಡೋಜರ್ ಹರಿಸಬೇಕು ಎಂಬುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಕಲಿಯಿರಿ’ ಎಂದು ಪ್ರಧಾನಿ ಮೋದಿ ನೀಡಿದ್ದ ಸಲಹೆಗೆ ಕಾಂಗ್ರೆಸ್‌ ತಿರುಗೇಟು ಕೊಟ್ಟಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯ ಬುಲ್ಡೋಜರ್ ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳ ಮೇಲೆ ಹರಿಯುತ್ತಿದೆ ಎಂದಿದೆ.

ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಯೋಗಿ ಆದಿತ್ಯನಾಥ ಅವರ ವೆಬ್‌ಸೈಟ್‌ನಲ್ಲಿರುವ ಲೇಖನವೊಂದನ್ನು ಉಲ್ಲೇಖಿಸಿ, ಅದು ಆರ್‌ಎಸ್‌ಎಸ್‌ನ ಮೀಸಲಾತಿ ವಿರೋಧಿ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಆರೋಪಿಸಿದ್ದಾರೆ.

‘ಮೀಸಲಾತಿ ಕುರಿತ ಆದಿತ್ಯನಾಥ ಅವರ ನಿಲುವುಗಳಿಂದಾಗಿ ಅವರನ್ನು ಬೆಂಬಲಿಸುತ್ತಿದ್ದೇನೆ ಎಂದು ಪ್ರಧಾನಿ ಸ್ಪಷ್ಟವಾಗಿ ಹೇಳಲಿ. ಇದೇ ಅವರ ‘ಚಾರ್ ಸೌ ಪಾರ್’ ಎನ್ನುವ ಘೋಷಣೆಯ ಹಿಂದಿನ ರಹಸ್ಯ. 400 ಸ್ಥಾನಗಳ ಬಹುಮತದೊಂದಿಗೆ ಅವರು ಸಂಸತ್ತಿನಲ್ಲಿ ಬಾಬಾ ಸಾಹೇಬರ ಸಂವಿಧಾನವನ್ನು ತಿದ್ದುಪಡಿ ಮಾಡಬಹುದಾಗಿದ್ದು, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳ ಮೀಸಲಾತಿ ಹಕ್ಕನ್ನು ಕಸಿಯಬಹುದಾಗಿದೆ’ ಎಂದು ಪ್ರತಿಪಾದಿಸಿದ್ದಾರೆ. ‘ಅಂಬೇಡ್ಕರ್ ಅವರ ಸಂವಿಧಾನ ಅಂತ್ಯಗೊಳಿಸಿ, ‘ಮನುವಾದಿ ಚಿಂತನೆ’ಯ ಆಧಾರದಲ್ಲಿ ಹೊಸ ಸಂವಿಧಾನವನ್ನು ರೂಪಿಸುವ ದಶಕಗಳ ಹಿಂದಿನ ಆರ್‌ಎಸ್‌ಎಸ್‌ ಪಿತೂರಿಯನ್ನು ಬಿಜೆಪಿಯು ಜಾರಿ ಮಾಡಲು ಹೊರಟಿದೆ’ ಎಂದು ಆರೋಪಿಸಿದ್ದಾರೆ.

‘ಅನುದಾನ ರದ್ದುಪಡಿಸಿದ್ದು ಏಕೆ?’

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ಪ್ರದೇಶಗಳ ಅನುದಾನ ನಿಧಿಯನ್ನು 2015ರಲ್ಲಿ ರದ್ದುಪಡಿಸಿದ್ದು ಏಕೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಹಿಂದಿನ ಯುಪಿಎ ಸರ್ಕಾರದ ದೂರದೃಷ್ಟಿಯ ಯೋಜನೆಯನ್ನು ಅತ್ಯಂತ ನಿರ್ದಯವಾಗಿ ಅಂತ್ಯಗೊಳಿಸಿದ್ದು ಏಕೆ ಎನ್ನುವುದನ್ನು ವಿವರಿಸಬೇಕು ಎಂದು ಒತ್ತಾಯಿಸಿದೆ.

‘ಭಾರತದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ ಜಾರಿಗೆ ತರಲಾಗಿದ್ದ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆಯನ್ನು ಮೋದಿ ಸರ್ಕಾರವು ರದ್ದು ಮಾಡಿದ್ದು ಏಕೆ? ಬಿಜೆಪಿಯು ಉತ್ತರ ಪ್ರದೇಶದ ಮೆಂತೆ ಬೆಳೆಯುವ ರೈತರನ್ನು ನಿರ್ಲಕ್ಷಿಸಿದ್ದೇಕೆ? ಬುಧ್ವಾಲ್ ಸಕ್ಕರೆ ಮಿಲ್ ಅನ್ನು ಪುನಾರಂಭಿಸುವ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸುಳ್ಳು ಹೇಳಿದ್ದು ಏಕೆ?’ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT