ಮುಂಬೈ: ದೇಸಿ ಹಸುಗಳನ್ನು ‘ರಾಜ್ಯಮಾತೆ–ಗೋಮಾತೆ’ ಎಂದು ಮಹಾರಾಷ್ಟ್ರ ಸರ್ಕಾರವು ಸೋಮವಾರ ಘೋಷಿಸಿದೆ. ವೇದಗಳ ಕಾಲದಿಂದಲೂ ಅವು ಹೊಂದಿರುವ ಮಹತ್ವ ಹಾಗೂ ಇತರ ಅಂಶಗಳನ್ನು ಪರಿಗಣಿಸಿ ಈ ಘೋಷಣೆ ಮಾಡಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಮನುಷ್ಯನಿಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸುವಲ್ಲಿ, ಆಯುರ್ವೇದದಲ್ಲಿ, ಪಂಚಗವ್ಯ ಚಿಕಿತ್ಸೆಯಲ್ಲಿ ದೇಸಿ ಹಸುಗಳ ಹಾಲಿಗೆ ಇರುವ ಮಹತ್ವ, ಸಾವಯವ ಕೃಷಿಯಲ್ಲಿ ದೇಸಿ ಹಸುಗಳ ಗೊಬ್ಬರದ ಬಳಕೆಯನ್ನು ಕೂಡ ಪರಿಗಣಿಸಲಾಗಿದೆ ಎಂದು ರಾಜ್ಯದ ಕೃಷಿ, ಹೈನುಗಾರಿಕೆ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಹೇಳಿದೆ. ರಾಜ್ಯ ವಿಧಾನಸಭೆಗೆ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದು ಹಸುಗಳ ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಒತ್ತಿಹೇಳುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜೆಪಿ, ಶಿವಸೇನಾ, ಎನ್‌ಸಿಪಿ ಮೈತ್ರಿ ಸರ್ಕಾರದ ತೀರ್ಮಾನವನ್ನು ಹಲವು ಬಲಪಂಥೀಯ ಸಂಘಟನೆಗಳು ಸ್ವಾಗತಿಸಿವೆ. ಆದರೆ ವಿರೋಧ ಪಕ್ಷಗಳ ಮೈತ್ರಿಕೂಟವಾದ ಮಹಾ ವಿಕಾಸ್ ಆಘಾಡಿ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.
ಹಸುವಿನ ಸಗಣಿಯಿಂದ ಕೃಷಿಗೆ ಆಗುವ ಪ್ರಯೋಜನ, ಅದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದು ಹಾಗೂ ಮನುಷ್ಯನಿಗೆ ಅಗತ್ಯವಿರುವ ಪೋಷಕಾಂಶಗಳು ಲಭ್ಯವಾಗುವುದರ ಬಗ್ಗೆಯೂ ಸರ್ಕಾರವು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ.
ಮುಖ್ಯಮಂತ್ರಿ ಏಕನಾಥ ಶಿಂದೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್ ಮತ್ತು ಅಜಿತ್ ಪವಾರ್ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯು, ದೇಸಿ ಹಸುಗಳ ಸಾಕಣೆಗೆ ಸಬ್ಸಿಡಿ ಯೋಜನೆ ರೂಪಿಸುವ ಬಗ್ಗೆಯೂ ಚರ್ಚೆ ನಡೆಸಿದೆ.
ಹಲವಾರು ಗೋಶಾಲೆಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅವುಗಳನ್ನು ಬಲಪಡಿಸಲು ತೀರ್ಮಾನಿಸಲಾಗಿದೆ. 2019ರಲ್ಲಿ ನಡೆದ 20ನೆಯ ಪ್ರಾಣಿ ಗಣತಿಯ ಪ್ರಕಾರ ರಾಜ್ಯದಲ್ಲಿ 46 ಲಕ್ಷಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ದೇಸಿ ಹಸುಗಳು ಇವೆ. 19ನೆಯ ಪ್ರಾಣಿ ಗಣತಿಯ ಸಂಖ್ಯೆಗೆ ಹೋಲಿಸಿದರೆ, ದೇಸಿ ಹಸುಗಳ ಸಂಖ್ಯೆಯಲ್ಲಿ ಶೇಕಡ 20.69ರಷ್ಟು ಇಳಿಕೆ ಕಂಡುಬಂದಿದೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
#WATCH | Mumbai: Maharashtra Deputy CM Devendra Fadnavis says, "Indigenous cows are a boon for our farmers. So, we have decided to grant this ('Rajya Mata') status to them. We have also decided to extend help for the rearing of indigenous cows at Goshalas." pic.twitter.com/ido9Z1RNmP
— ANI (@ANI) September 30, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.