ಮುಂಬೈ: ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೆ ವಾರ್ಷಿಕ ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಮಹಾರಾಷ್ಟ್ರ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ಆಯಾ ತರಗತಿಯ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ. ಇಲ್ಲವಾದರೆ ಮುಂದಿನ ತರಗತಿಗೆ ಅರ್ಹತೆಯನ್ನು ನಿರ್ಬಂಧಿಸಲಾಗಿದೆ. ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮರುಪರೀಕ್ಷೆಯ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿಯೂ ಅನುತ್ತೀರ್ಣರಾದರೆ ಹಾಲಿ ತರಗತಿಯಲ್ಲಿಯೇ ಅವರು ಮುಂದುವರಿಯಲಿದ್ದಾರೆ ಎಂದು ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದ್ದು, ಶುಕ್ರವಾರದಿಂದಲೇ ಇದು ಜಾರಿಗೆ ಬಂದಿದೆ.
ಆಯಾ ಶೈಕ್ಷಣಿಕ ವರ್ಷದ ಕೊನೆಯಲ್ಲಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ಬರೆಯಲು ಎರಡು ತಿಂಗಳ ಕಾಲ ಸೂಕ್ತ ಮಾರ್ಗದರ್ಶನವನ್ನೂ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
2019ರಲ್ಲಿ ಆರ್‌ಟಿಇ ಕಾಯ್ದೆಗೆ ತಂದಿರುವ ತಿದ್ದುಪಡಿ ಅನ್ವಯ ರಾಜ್ಯಗಳಿಗೆ ವಾರ್ಷಿಕ ಪರೀಕ್ಷೆಯನ್ನು ಮತ್ತೆ ನಡೆಸುವ ಅಧಿಕಾರ ಕಲ್ಪಿಸಲಾಗಿದೆ. ಇದರ ಅನ್ವಯ ಪರೀಕ್ಷೆ ನಡೆಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಆದರೆ, ಯಾವುದೇ ವಿದ್ಯಾರ್ಥಿ ಅನುತ್ತೀರ್ಣಗೊಂಡರೂ ಪ್ರಾಥಮಿಕ ಶಿಕ್ಷಣ ಮುಗಿಸುವವರೆಗೂ ಅವರನ್ನು ಶಾಲೆಯಿಂದ ಹೊರಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.