ಮುಂಬೈ: ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಮೊದಲು ನಿರ್ಧರಿಸಬೇಕಿದೆ ಎಂದು ಒತ್ತಾಯಿಸಿರುವ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, ‘ಕಾಂಗ್ರೆಸ್ ಮತ್ತು ಎನ್‌ಸಿಪಿ (ಎಸ್‌ಪಿ) ಯಾರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರೂ, ಅವರನ್ನು ಬೆಂಬಲಿಸುವುದಾಗಿ’ ಪ್ರತಿಪಾದಿಸಿದರು.
ವಿರೋಧ ಪಕ್ಷಗಳ ಮೈತ್ರಿಯಾದ ಎಂವಿಎ ಕಾರ್ಯಕರ್ತರನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ‘ಮೈತ್ರಿ ಪಕ್ಷಗಳಲ್ಲಿ ಯಾರು ಹೆಚ್ಚು ಸ್ಥಾನಗಳಿಸುತ್ತಾರೊ ಅವರಿಗೆ ಮುಖ್ಯಮಂತ್ರಿ ಸ್ಥಾನ ಎಂಬ ತರ್ಕ ಸರಿಯಲ್ಲ’ ಎಂದು ಹೇಳಿದರು.
‘ಲೋಕಸಭಾ ಚುನಾವಣೆಯು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದಕ್ಕಾಗಿ ನಡೆದಿದ್ದರೆ, ವಿಧಾನಸಭಾ ಚುನಾವಣೆಯು ಮಹಾರಾಷ್ಟ್ರದ ಸ್ವಾಭಿಮಾನವನ್ನು ಕಾಪಾಡುವ ಹೋರಾಟವಾಗಿದೆ’ ಎಂದು ಅವರು ಬಣ್ಣಿಸಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದ್ದು, ಎಂವಿಎ ಮೈತ್ರಿಯು ಶಿವಸೇನಾ (ಯುಬಿಟಿ), ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಮತ್ತು ಕಾಂಗ್ರೆಸ್ ಪಕ್ಷಗಳನ್ನು ಒಳಗೊಂಡಿದೆ.
ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಯಾರನೇ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದರೂ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಅವರು ಹೇಳಿದರು.
ಬಿಜೆಪಿ ಜತೆ ತಮ್ಮ ಹಿಂದಿನ ಮೈತ್ರಿಯನ್ನು ನೆನಪು ಮಾಡಿಕೊಂಡ ಅವರು, ‘ಸಂಖ್ಯಾಬಲ ಯಾರಿಗೆ ಹೆಚ್ಚಿದೆಯೊ ಅವರಿಗೆ ಮುಖ್ಯಮಂತ್ರಿ ಸ್ಥಾನ ಎನ್ನಲಾಗಿತ್ತು. ಆದರೆ ಆ ನೀತಿಯು ಹಾನಿಕಾರಕವಾದದ್ದು. ಏಕೆಂದರೆ ಮೈತ್ರಿಯಲ್ಲಿ ಮೇಲುಗೈ ಸಾಧಿಸಲು ಪರಸ್ಪರರ ಅಭ್ಯರ್ಥಿಗಳನ್ನು ಸೋಲಿಸಲು ಯತ್ನಿಸಬೇಕಾಗುತ್ತದೆ. ಆದ್ದರಿಂದ ಆ ನೀತಿ ಸರಿಯಲ್ಲ’ ಎಂದು ಅವರು ಹೇಳಿದರು.