ತಿರುವನಂತಪುರಂ: ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ತ್ರಿಶೂರ್ ಜಿಲ್ಲೆಯ ಚಾಲಕ್ಕುಡಿಯ ನಾಯರಂಗಡಿಯ ನಿವಾಸಿ ಸಂದೀಪ್ (36) ಉಕ್ರೇನ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಅಧಿಕೃತ ಸೂಚನೆಗಾಗಿ ಕಾಯಲಾಗುತ್ತಿದೆ. ರಷ್ಯಾದಲ್ಲಿರುವ ಮಲಯಾಳಿ ಸಂಘಟನೆಗಳು ಈ ಕುರಿತು ಮೃತರ ಕುಟುಂಬಸ್ಥರಿಗೆ ಭಾನುವಾರ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ರಷ್ಯಾದ ಹಲವು ಯೋಧರು ಕೂಡ ಮೃತಪಟ್ಟಿದ್ದಾರೆ.
ಸ್ಥಳೀಯರ ಪ‍್ರಕಾರ, ಸಂದೀಪ್ ಹಾಗೂ ಕೆಲವರನ್ನು ಮಾಸ್ಕೊದಲ್ಲಿರುವ ರೆಸ್ಟೋರೆಂಟ್‌ಗೆ ಉದ್ಯೋಗಕ್ಕಾಗಿ ನೇಮಕಾತಿ ಮಾಡಿಕೊಳ್ಳಲಾಗಿತ್ತು. ರಷ್ಯಾಕ್ಕೆ ತಲುಪಿದ ನಂತರ ಬಲವಂತದಿಂದ ಸೇನೆಗೆ ಸೇರ್ಪಡೆಗೊಳಿಸಲಾಯಿತು. ಸಂದೀಪ್ ರಷ್ಯಾದ ಪೌರತ್ವ ಕೂಡ ಪಡೆದಿದ್ದರು.
‘ಘಟನೆ ಕುರಿತಂತೆ ಇದುವರೆಗೂ ಅಧಿಕೃತ ಮಾಹಿತಿ ಬಂದಿಲ್ಲ. ರಷ್ಯಾದ ಭಾರತೀಯ ರಾಯಭಾರ ಕಚೇರಿಯು ‘ಅನೌಪಚಾರಿಕ’ವಾಗಿ ದೃಢಪಡಿಸಿದೆ’ ಎಂದು ಕೇರಳ ಸರ್ಕಾರದ ಅನಿವಾಸಿ ಕೇರಳ ಶ್ರೇಯಾಭಿವೃದ್ಧಿ ಸಂಸ್ಥೆಯ (ಎನ್‌ಆರ್‌ಕೆ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕೊಲ್ಲಶ್ಯೇರಿ ತಿಳಿಸಿದ್ದಾರೆ.
ಉದ್ಯೋಗ ನೀಡುವುದಾಗಿ ನಂಬಿಸಿ ಮಲಯಾಳಿಗಳು ಸೇರಿದಂತೆ ಭಾರತದ ಯುವಕರನ್ನು ಕರೆಸಿಕೊಳ್ಳುವ ಏಜೆಂಟರು ಅಲ್ಲಿಗೆ ತೆರಳಿದ ಬಳಿಕ ಯುವಕರನ್ನು ಬಲವಂತವಾಗಿ ರಷ್ಯಾ ಸೇನೆಗೆ ಸೇರ್ಪಡೆಗೊಳಿಸುತ್ತಿದ್ದಾರೆ. ಕೇರಳದ ಕೆಲವು ಯುವಕರು ಕೆಲವೇ ದಿನಗಳಲ್ಲಿ ಸ್ವದೇಶಕ್ಕೆ ಹಿಂತಿರುಗಿದ್ದು, ಇನ್ನೂ ಕೆಲವರು ಅಲ್ಲಿಯೇ ಉಳಿದಿದ್ದಾರೆ.
ರಷ್ಯಾ ಸೇನೆಯಲ್ಲಿರುವ ಭಾರತೀಯ ನಾಗರಿಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಮಾಸ್ಕೊಗೆ ಭೇಟಿ ನೀಡಿದ್ದ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದೆ ಪ್ರಸ್ತಾಪಿಸಿದ್ದರು. ಇದಕ್ಕೆ ಅಲ್ಲಿನ ಸರ್ಕಾರವು ಸಮ್ಮತಿ ಸೂಚಿಸಿತ್ತು.