ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಗ್ಗಟ್ಟು ಮತ್ತು ಶಿಸ್ತಿನಿಂದ ಮಾತ್ರ ವಿರೋಧಿಗಳನ್ನು ಮಣಿಸಲು ಸಾಧ್ಯ: ಖರ್ಗೆ

Published 17 ಸೆಪ್ಟೆಂಬರ್ 2023, 12:25 IST
Last Updated 17 ಸೆಪ್ಟೆಂಬರ್ 2023, 12:25 IST
ಅಕ್ಷರ ಗಾತ್ರ

ಹೈದರಾಬಾದ್‌: ‘ವೈಯಕ್ತಿಕ ಹಿತಾಸಕ್ತಿ ಮತ್ತು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಯಶಸ್ಸಿಗೆ ಅವಿರತವಾಗಿ ಶ್ರಮಿಸಬೇಕಿದೆ. ಒಗ್ಗಟ್ಟು ಮತ್ತು ಶಿಸ್ತಿನಿಂದ ಮಾತ್ರ ನಾವು ನಮ್ಮ ವಿರೋಧಿಗಳನ್ನು ಮಣಿಸಬಹುದು’ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇಂದು ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಮಾತನಾಡಿದ ಅವರು, ಶಿಸ್ತು, ಸಂಯಮ ಮತ್ತು ಒಗ್ಗಟ್ಟಿನ ಪ್ರಾಮುಖ್ಯತೆ ಕುರಿತು ಪಕ್ಷದ ಮುಖಂಡರಿಗೆ ಪಾಠ ಮಾಡಿದ್ದಾರೆ.

ಈ ವೇಳೆ ಕರ್ನಾಟಕದ ವಿಧಾನಸಭಾ ಚುನಾವಣೆಯ ಗೆಲುವನ್ನು ಪ್ರಸ್ತಾಪಿಸಿದ ಖರ್ಗೆ, ‘ಒಗ್ಗಟ್ಟು ಮತ್ತು ಶಿಸ್ತಿನಿಂದಲೇ ನಾವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದೇವೆ’ ಎಂದು ಒತ್ತಿ ಹೇಳಿದರು.

‘ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ಹಿತಾಸಕ್ತಿಗೋಸ್ಕರ ಅದನ್ನು ಬಿಡಬೇಕು. ಸ್ವಯಂ ಸಂಯಮವನ್ನು ಕಲಿಯುವುದು ಬಹಳ ಮುಖ್ಯವಾಗಿದೆ. ನಮ್ಮದೇ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಬಿಡಬೇಕಿದೆ’ ಎಂದು ಕಿವಿಮಾತು ಹೇಳಿದರು.

‘ಕಾಂಗ್ರೆಸ್‌ ಮುಂದೆ ಅನೇಕ ಸವಾಲುಗಳಿವೆ. ಈ ಸವಾಲುಗಳು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿಲ್ಲ. ಅವುಗಳು ಪ್ರಜಾಪ್ರಭುತ್ವದ ಉಳಿವು ಮತ್ತು ಭಾರತೀಯ ಸಂವಿಧಾನದ ಸಂರಕ್ಷಣೆಗೆ ಸಂಬಂಧಿಸಿವೆ’ ಎಂದರು.

‘ಐದು ರಾಜ್ಯಗಳ ಚುನಾವಣೆ ಇನ್ನೆರಡು ಮೂರು ತಿಂಗಳಲ್ಲಿ ನಡೆಯಲಿವೆ. ಲೋಕಸಭಾ ಚುನಾವಣೆಗೆ ಆರು ತಿಂಗಳು ಬಾಕಿಯಿದೆ. ಜಮ್ಮು–ಕಾಶ್ಮೀರದಲ್ಲಿಯೂ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಅದಕ್ಕೂ ಸಿದ್ದರಾಗಿರಬೇಕಾಗಿದೆ’ ಎಂದರು.

‘ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಸಾಮಾಜಿಕ ನ್ಯಾಯ ಮತ್ತು ಕಲ್ಯಾಣವಾದದ ಹೊಸ ಮಾದರಿಯನ್ನು ಪ್ರಾರಂಭಿಸಿದೆ. ಈ ಕಲ್ಯಾಣ ಯೋಜನೆಗಳನ್ನು ದೇಶಾದ್ಯಂತ ಪ್ರಚಾರ ಮಾಡಬೇಕಿದೆ’ ಎಂದು ಒತ್ತಾಯಸಿದರು.

ಚುನಾವಣಾ ಸಿದ್ದತೆಯ ಬಗ್ಗೆ ಮಾಹಿತಿ ಕೇಳಿದ ಖರ್ಗೆ

ಐದು ರಾಜ್ಯಗಳಲ್ಲಿ ಚುನಾವಣೆಗೆ ಸಿದ್ದತೆ ನಡೆಯುತ್ತಿದ್ದು, ಈ ಬಗ್ಗೆ ಸಭೆಯಲ್ಲಿದ್ದ ರಾಜ್ಯಾಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರನ್ನು ಖರ್ಗೆ ಪ್ರಶ್ನಿಸಿದ್ದಾರೆ. ‘ಮಂಡಲ, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ನಿಮ್ಮ ಸಮಿತಿಗಳು ಸಿದ್ಧವಾಗಿದೆಯೇ? ನೀವು ಅವರಿಗೆ ನಿಯಮಿತ ಕಾರ್ಯಕ್ರಮಗಳನ್ನು ನೀಡುತ್ತಿದ್ದೀರಾ? ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು ಪ್ರಾರಂಭಿಸಿದ್ದಿರಿಯೇ?’ ಎಂದು ಕೇಳಿದ್ದಾರೆ.

ಇದು ವಿಶ್ರಮಿಸುವ ಸಮಯವಲ್ಲ

‘ಕಳೆದ 10 ವರ್ಷಗಳಲ್ಲಿ ಬಿಜೆಪಿ ಆಡಳಿತದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸವಾಲುಗಳು ಹಲವು ಪಟ್ಟು ಹೆಚ್ಚಾಗಿದೆ. ಬಡವರು, ರೈತರು, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಮಯದಲ್ಲಿ ನಾವು ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸರ್ವಾಧಿಕಾರವನ್ನು ಉರುಳಿಸಲು ನಾವು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಜನರು ಪರ್ಯಾಯ ವ್ಯವಸ್ಥೆಯೊಂದನ್ನು ಹುಡುಕುತ್ತಿದ್ದಾರೆ ಎಂಬುವುದು ಕರ್ನಾಟಕ ಚುನಾವಣೆಯಿಂದ ಸ್ಪಷ್ಟವಾಗಿದೆ. 2024ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಇಳಿಸುವುದೇ ನಮ್ಮ ಗುರಿಯಾಗಬೇಕು. ಇದು ವಿಶ್ರಮಿಸುವ ಸಮಯವಲ್ಲ. ಶ್ರದ್ಧೆಯಿಂದ ಕೆಲಸ ಮಾಡಬೇಕಿದೆ’ ಎಂದರು.

‘ತೆಲಂಗಾಣದಲ್ಲಿ ಮಾತ್ರವಲ್ಲದೆ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಗೆಲ್ಲುವ ದೃಢ ಸಂಕಲ್ಪದೊಂದಿಗೆ ನಾವೆಲ್ಲ ಇಂದು ಹೈದರಾಬಾದ್‌ನಿಂದ ಹೊರಡುತ್ತಿದ್ದೇವೆ. ಬಿಜೆಪಿಯ ದುರಾಡಳಿತದ ಜನರನ್ನು ಮುಕ್ತಗೊಳಿಸುತ್ತೇವೆ’ ಎಂದು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT