ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ಗೆ ಸಿಬಿಐ ಸಮನ್ಸ್: ವಿಪಕ್ಷಗಳ ಒಗ್ಗಟ್ಟಿನ ಮೇಲೆ ಪರಿಣಾಮ?

Last Updated 15 ಏಪ್ರಿಲ್ 2023, 23:00 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸಿಬಿಐ ಸಮನ್ಸ್‌ ನೀಡಿದ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಜ್ರಿವಾಲ್‌ ಜೊತೆ ಮಾತುಕತೆ ನಡೆಸಿದ್ದಾರೆ.

‘ಉಭಯ ನಾಯಕರ ನಡುವೆ ನಡೆದ ಮಾತುಕತೆ ಕುರಿತು ಹೆಚ್ಚಿನ ವಿವರಗಳು ಬಹಿರಂಗಗೊಂಡಿಲ್ಲ. ಆದರೆ, ಸಿಬಿಐ ಸಮನ್ಸ್‌ ನೀಡಿರುವ ಹಿನ್ನೆಲೆಯಲ್ಲಿ ಮಾತುಕತೆಯ ಸ್ವರೂಪದಲ್ಲಿ ಬದಲಾವಣೆ ಇತ್ತು. ಇಷ್ಟವಿಲ್ಲದಿದ್ದರೂ, ಕಾಂಗ್ರೆಸ್‌ ಪಕ್ಷವು ಎಎಪಿ ಜೊತೆ ಮಾತುಕತೆ ನಡೆಸಿದಂತಾಗಿದೆ’ ಎಂದು ಮೂಲಗಳು ಹೇಳಿವೆ.

ಸಿಬಿಐ ಸಮನ್ಸ್‌ ಜಾರಿಗೊಳಿಸಿದ ನಂತರ, ಶುಕ್ರವಾರ ಸಂಜೆಯೇ ಖರ್ಗೆ ಅವರು ಕೇಜ್ರಿವಾಲ್‌ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು ಎಂದು ಇವೇ ಮೂಲಗಳು ಹೇಳಿವೆ.

ಖರ್ಗೆ ಅವರು ಕೇಜ್ರಿವಾಲ್‌ ಜೊತೆ ಮಾತುಕತೆ ನಡೆಸಿರುವ ವಿಷಯ ಬಹಿರಂಗಗೊಂಡ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕರಿಂದಲೇ ಅಪಸ್ವರ ಕೇಳಿಬಂತು. ಪಂಜಾಬ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಕಾಂಗ್ರೆಸ್‌ನ ಪ್ರತಾಪ್‌ಸಿಂಗ್ ಬಾಜ್ವಾ, ‘ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕೇಜ್ರಿವಾಲ್‌ಗೆ ಮಾತನಾಡುವ ಹಕ್ಕಿಲ್ಲ’ ಎಂದು ಟ್ವೀಟ್‌ ಮಾಡಿದರು. ಎಎಪಿ ನಾಯಕರಾದ ಮನೀಷ್‌ ಸಿಸೋಡಿಯಾ ಹಾಗೂ ಸತ್ಯೇಂದರ್‌ ಜೈನ್‌ ಅವರನ್ನು ಈಗಾಗಲೇ ಜೈಲಿನಲ್ಲಿರಿಸಿದ್ದನ್ನು ಅವರು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ದಿಢೀರ್‌ ಬೆಳವಣಿಗೆಯು, ಬಿಜೆಪಿ ವಿರುದ್ಧ ಒಗ್ಗಟ್ಟಾಗಬೇಕು ಎಂಬ ವಿರೋಧ ಪಕ್ಷಗಳ ಪ್ರಯತ್ನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

‘ವಿಪಕ್ಷಗಳ ಒಗ್ಗಟ್ಟು ಸಾಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಲಾಗಿದ್ದು, ಇನ್ನೂ ಹಲವು ಸುತ್ತಿನ ಮಾತುಕತೆ ನಡೆಯಬೇಕಿದೆ. ಹೀಗಾಗಿ, ಖರ್ಗೆ ಅವರು ಕೇಜ್ರಿವಾಲ್‌ ಜೊತೆ ನಡೆಸಿರುವ ಮಾತುಕತೆ ಬಗ್ಗೆ ಹೆಚ್ಚು ಪ್ರಾಮುಖ್ಯ ನೀಡುವ ಅಗತ್ಯವಿಲ್ಲ’ ಎಂದು ಕಾಂಗ್ರೆಸ್‌ ಹಿರಿಯ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಕೇಜ್ರಿವಾಲ್‌ ಅವರಿಗೆ ಸಿಬಿಐ ಸಮನ್ಸ್‌ ಜಾರಿ ಮಾಡಿರುವುದನ್ನು ಕಾಂಗ್ರೆಸ್‌ನ ದೆಹಲಿ ಘಟಕವು ಸ್ವಾಗತಿಸಿದೆ. ರಾಷ್ಟ್ರ ರಾಜಧಾನಿಯ ರಾಜಕೀಯ ಪರಿಸ್ಥಿತಿಯೇ ಬೇರೆ. ಹಾಗಾಗಿ, ಹಲವಾರು ವಿಷಯಗಳ ಕುರಿತು
ಎರಡೂ ಪಕ್ಷಗಳು ನಿರಂತರವಾಗಿ ಅಂತರ ಕಾಯ್ದುಕೊಂಡು ಬಂದಿವೆ.

ಸಂಸತ್‌ ಕಲಾಪದ ವೇಳೆ, ಎಎಪಿ ಹಾಗೂ ಕಾಂಗ್ರೆಸ್‌ ಜೊತೆಯಾಗಿಯೇ ಹೆಜ್ಜೆ ಹಾಕಿವೆ. ಆದರೆ, ಕಾಂಗ್ರೆಸ್‌ ಪ್ರಾಬಲ್ಯ ಇರುವ ರಾಜ್ಯಗಳಲ್ಲಿ ಅದರೊಂದಿಗೆ ವೇದಿಕೆ ಹಂಚಿಕೊಳ್ಳಲು ಎಎಪಿ ನಿರಾಕರಿಸುತ್ತಲೇ ಬಂದಿದೆ. ದೆಹಲಿ ಹಾಗೂ ಪಂಜಾಬ್‌ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಿದೆ. ಗುಜರಾತ್‌ ಹಾಗೂ ಗೋವಾದಲ್ಲಿ ಕಾಂಗ್ರೆಸ್‌ನ ನಿದ್ದೆಗೆಡಿಸಿದೆ.

ಹಲವು ಸಂದರ್ಭಗಳಲ್ಲಿ, ಆಮ್‌ ಆದ್ಮಿ ಪಾರ್ಟಿಯು ಬಿಜೆಪಿಯ ಬಿ–ಟೀಮ್‌ ಎಂದು ಕಾಂಗ್ರೆಸ್‌ ಟೀಕಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಕುರಿತ ಎಎಪಿಯ ನಿಲುವಿನಲ್ಲಿ ಬದಲಾವಣೆ ಕಾಣಬಹುದಾಗಿದೆ ಎಂದು ಹೇಳಲಾಗುತ್ತಿದೆ.

ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ರಾಹುಲ್‌ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ಮೊದಲು ಖಂಡಿಸಿದ್ದೇ ಎಎಪಿ.

ಆದರೆ, ಸ್ಥಳೀಯ ಮಟ್ಟದ ರಾಜಕೀಯ ಸನ್ನಿವೇಶಕ್ಕೆ ಸಂಬಂಧಿಸಿ ರಾಜ್ಯ ಮಟ್ಟದ ನಾಯಕರು ಪರಸ್ಪರರ ವಿರುದ್ಧ ಹೇಳಿಕೆಗಳನ್ನು ನೀಡುವುದರಲ್ಲಿ ತಪ್ಪಿಲ್ಲ. ರಾಷ್ಟ್ರ ಮಟ್ಟದಲ್ಲಿ ಇಂಥ ನಡೆಗಳನ್ನು ಒಪ್ಪಲಾಗದು ಎಂದು ಎರಡೂ ಪಕ್ಷಗಳ ನಾಯಕರು ಹೇಳುತ್ತಾರೆ.

‘ಸಂವಿಧಾನದ ಮೇಲೆ ಪ್ರಹಾರ’

ನವದೆಹಲಿ: ‘ಸಂವಿಧಾನದ ಮೇಲೆ ನಿತ್ಯವೂ ಪ್ರಹಾರ ನಡೆಯುತ್ತಿದೆ. ದೇಶದ ಒಕ್ಕೂಟ ವ್ಯವಸ್ಥೆಯೇ ಅಪಾಯದಲ್ಲಿದೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶನಿವಾರ ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರಿಗೆ ಬರೆದಿರುವ ಪತ್ರದಲ್ಲಿ ಕೇಜ್ರಿವಾಲ್‌ ಈ ಕಳವಳ ವ್ಯಕ್ತಪಡಿಸಿದ್ದಾರೆ.

‘ಸ್ವಾತಂತ್ರ್ಯ, ಸಮಾನತೆ, ಜಾತ್ಯತೀತತೆ ಅಥವಾ ಸಹೋದರತ್ವ ಸೇರಿದಂತೆ ಸಂವಿಧಾನದ ಪ್ರತಿಯೊಂದು ಆಶಯ–ತತ್ವದೊಂದಿಗೆ ರಾಜಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ‘ವಿರೋಧ ಪಕ್ಷ ಮುಕ್ತ ಭಾರತ’ ಬೇಕು: ಕಪಿಲ್ ಸಿಬಲ್

ನವದೆಹಲಿ: ಅರವಿಂದ ಕೇಜ್ರಿವಾಲ್ ಅವರಿಗೆ ಸಿಬಿಐ ಸಮನ್ಸ್ ನೀಡಿರುವ ಹಿನ್ನೆಲೆಯಲ್ಲಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ‘ಆಡಳಿತಾರೂಢ ಪಕ್ಷವು ವಿರೋಧ ಪಕ್ಷ ಮುಕ್ತ ಭಾರತವನ್ನು ಬಯಸುತ್ತದೆ. ತನ್ನ ವಿರುದ್ಧ ಮಾತನಾಡುವ ನಾಯಕರ ವರ್ಚಸ್ಸಿಗೆ ಮಸಿ ಬಳಿಯುವ ಕಾರ್ಯ ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.

‘ತನಿಖಾ ಸಂಸ್ಥೆಗಳ ದುರುಪಯೋಗದ ಕುರಿತು ಎಲ್ಲ ವಿರೋಧ ಪಕ್ಷಗಳು ಒಂದಾಗಿ ದನಿ ಎತ್ತಬೇಕು’ ಎಂದು ಒತ್ತಾಯಿಸಿರುವ ಸಿಬಲ್, ಎಲ್ಲ ಪಕ್ಷಗಳು ಒಟ್ಟಾಗದ ಹೊರತು ಬಿಜೆಪಿಯನ್ನು ಎದುರಿಸುವುದು ಕಷ್ಟ ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT