ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರ್ತ್ಯ ಸೆನ್‌ ಬೆ‌ನ್ನಿಗೆ ನಿಂತ ಮಮತಾ ಬ್ಯಾನರ್ಜಿ

Published 3 ಮೇ 2023, 12:20 IST
Last Updated 3 ಮೇ 2023, 12:20 IST
ಅಕ್ಷರ ಗಾತ್ರ

ಕೋಲ್ಕತ್ತ : ವಿಶ್ವಭಾರತಿ ವಿಶ್ವವಿದ್ಯಾಲಯವು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೆನ್‌ ಅವರಿಗೆ ನೋಟಿಸ್‌ ಜಾರಿ ಮಾಡಿರುವುದನ್ನು ವಿರೋಧಿಸಿ ಬೀರ್‌ಭೂಮ್‌ ಜಿಲ್ಲೆಯಲ್ಲಿರುವ ಸೆನ್‌ ಅವರ ನಿವಾಸದ ಎದುರು ಕುಳಿತು ಪ್ರತಿಭಟನೆ ನಡೆಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಸಚಿವರಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒತ್ತುವರಿ ಮಾಡಿಕೊಂಡಿರುವ ವಿಶ್ವವಿದ್ಯಾಲಯದ 5,662.8 ಚದರ ಅಡಿ ಜಾಗವನ್ನು ಮೇ 6ರ ಒಳಗೆ ತೆರವು ಮಾಡಬೇಕು ಎಂದು ವಿ.ವಿಯು ಏ.19ರಂದು ಸೆನ್‌ ಅವರಿಗೆ ನೋಟಿಸ್‌ ಕಳುಹಿಸಿತ್ತು.

ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಬ್ಯಾನರ್ಜಿ ಅವರು, ಸಚಿವ ಚಂದ್ರನಾಥ್‌ ಸಿನ್ಹಾ ಅವರಿಗೆ ಪ್ರತಿಭಟನೆಯನ್ನು ಮುನ್ನಡೆಸುವಂತೆ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಶಿಕ್ಷಣ ಸಚಿವ ಬ್ರಾತ್ಯ ಬಸು ಮತ್ತು ನಗರಾಭಿವೃದ್ಧಿ ಸಚಿವ ಫಿರ್ಹಾದ್‌ ಹಕಿಮ್‌ ಭಾಗವಹಿಸಲಿದ್ದಾರೆ.

‘ಕೇಂದ್ರೀಯ ವಿಶ್ವವಿದ್ಯಾಲಯದ ಅಧಿಕಾರಿಗಳು ಜಾಗ ಸ್ವಾಧೀನಪಡಿಸಿಕೊಳ್ಳಲು ಬುಲ್ಡೋಜರ್‌ ಕಳುಹಿಸಿದರೂ ಸ್ಥಳದಿಂದ ಒಂದಿಂಚೂ ಕದಲಬೇಡಿ. ಪ್ರತಿಭಟನಾ ಸ್ಥಳಕ್ಕೆ ಜಾನಪದ ಕಲಾವಿದರನ್ನು ಕೊಂಡೊಯ್ಯಿರಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಅವರು ಸೂಚಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆನ್‌ ಅವರು ವಿಶ್ವವಿದ್ಯಾಲಯದ ಆವರಣದ ಒಟ್ಟು 1.38 ಎಕರೆ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ 1.25 ಎಕರೆ ಪ್ರದೇಶವನ್ನು ಮಾತ್ರ ಕಾನೂನಾತ್ಮಕವಾಗಿ ಖರೀದಿಸಿದ್ದಾರೆ. ಉಳಿದ ಜಾಗವನ್ನು ಅವರು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ವಿಶ್ವವಿದ್ಯಾಲಯ ಆರೋಪಿಸಿದೆ. ಆದರೆ  ಅಮರ್ತ್ಯ ಸೆನ್‌ ಈ ಆರೋಪವನ್ನು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT