ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Election| ಕಾಂಗ್ರೆಸ್‌ಗೆ ಯಾವುದೇ ಸ್ಥಾನ ಬಿಟ್ಟುಕೊಡುವುದಿಲ್ಲ: ಮಮತಾ

Published 1 ಫೆಬ್ರುವರಿ 2024, 2:41 IST
Last Updated 1 ಫೆಬ್ರುವರಿ 2024, 2:41 IST
ಅಕ್ಷರ ಗಾತ್ರ

ಮಾಲ್ದಾ (ಪ.ಬಂಗಾಳ): ಸೀಟು ಹಂಚಿಕೆ ಸಂಬಂಧ ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದೊಂದಿಗೆ ಮುನಿಸಿಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯದಲ್ಲಿ ಕಾಂಗ್ರೆಸ್‌ಗೆ ಯಾವುದೇ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಇತ್ತೀಚೆಗಷ್ಟೇ ರಾಜ್ಯದಲ್ಲಿ ಕಾಂಗ್ರೆಸ್‌ ಜತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಮೈತ್ರಿ ಮಾಡಿಕೊಳ್ಳುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಮತಾ ಬ್ಯಾನರ್ಜಿ ಪ್ರಕಟಿಸಿದ್ದರು.

ಇದರಿಂದಾಗಿ 'ಇಂಡಿಯಾ' ಮೈತ್ರಿಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಮತ್ತೊಂದೆಡೆ ಮಮತಾ ಅವರನ್ನು ಮನವೊಲಿಸಲು ಕಾಂಗ್ರೆಸ್ ಯತ್ನಿಸಿತ್ತು.

'ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಯಾವುದೇ ಶಾಸಕರಿಲ್ಲ. ಹಾಗಿದ್ದರೂ ನಾನು ಅವರಿಗೆ (ಕಾಂಗ್ರೆಸ್) ಮಾಲ್ಡಾದಲ್ಲೇ ಎರಡು ಲೋಕಸಭಾ ಸ್ಥಾನಗಳ ಪ್ರಸ್ತಾಪವನ್ನು ಮುಂದಿಟ್ಟಿದ್ದೇನೆ. ಆದರೆ ಅವರು ಇನ್ನೂ ಹೆಚ್ಚು ಸ್ಥಾನಗಳನ್ನು ಬಯಸುತ್ತಾರೆ. ಅವರೊಂದಿಗೆ ನಾನು ಒಂದು ಸ್ಥಾನವನ್ನೂ ಹಂಚಿಕೊಳ್ಳುವುದಿಲ್ಲ. ಸಿಪಿಐ(ಎಂ) ಅವರ ನಾಯಕ' ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

'ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸಲು ಕಾಂಗ್ರೆಸ್ ಮತ್ತು ಸಿಪಿಐ(ಎಂ) ಮೈತ್ರಿ ಮಾಡಿಕೊಂಡಿವೆ. ತೃಣಮೂಲ ಕಾಂಗ್ರೆಸ್ ಪಕ್ಷ ಮಾತ್ರ ಬಿಜೆಪಿಯನ್ನು ನಿರಂತರವಾಗಿ ವಿರೋಧಿಸುತ್ತಿದೆ' ಎಂದು ಅವರು ಹೇಳಿದ್ದಾರೆ.

'ಕಾಂಗ್ರೆಸ್‌ನ ನಾಯಕ ಸಿಪಿಐ(ಎಂ) ಆಗಿದೆ. ನಾನು ಎಂದಿಗೂ ಸಿಪಿಐ(ಎಂ) ಅನ್ನು ಕ್ಷಮಿಸುವುದಿಲ್ಲ. ಸಿಪಿಐ(ಎಂ) ಬೆಂಬಲಿಸುವವರನ್ನೂ ಕ್ಷಮಿಸುವುದಿಲ್ಲ. ಅವರು ಮೊದಲು ಸಿಪಿಐ(ಎಂ) ತೊರೆಯಬೇಕು. ಸಿಪಿಐ(ಎಂ) ಜತೆ ಕೈಜೋಡಿಸಿ ಬಿಜೆಪಿಯನ್ನು ಬೆಂಬಲಿಸುತ್ತಾರೆ. ಕಳೆದ ಪಂಚಾಯಿತಿ ಚುನಾವಣೆಯಲ್ಲೂ ಅದನ್ನು ಕಂಡಿದ್ದೇನೆ' ಎಂದು ಮಮತಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT