ನವದೆಹಲಿ: ತೃಣಮೂಲ ಕಾಂಗ್ರೆಸ್ ನಾಯಕಿಗೆ ನುಸುಳುಕೋರರು ಮತ್ತು ನಿರಾಶ್ರಿತರ ನಡುವಿನ ವ್ಯತ್ಯಾಸವೇ ತಿಳಿದಿಲ್ಲ ಎಂದು ಹೇಳಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿರುವ ಮಮತಾ ಬ್ಯಾನರ್ಜಿ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ದೇಶದ ಭದ್ರತೆಗೆ ಸಂಬಂಧಿಸಿದ ಪ್ರಮುಖ ವಿಷಯದಲ್ಲಿ ನೀವು ರಾಜಕೀಯ ಮಾಡುತ್ತಿದ್ದೀರಿ. ಜನರು ನಿಮ್ಮ ಪರ ನಿಲ್ಲುವುದಿಲ್ಲ. ನಿರಾಶ್ರಿತರು ಮತ್ತು ನುಸುಳುಕೋರರ ನಡುವಿನ ವ್ಯತ್ಯಾಸವನ್ನು ನೀವು ಅರ್ಥ ಮಾಡಿಕೊಂಡಿಲ್ಲ ಎಂದು ಶಾ ಎಎನ್‌ಐಗೆ ತಿಳಿಸಿದ್ದಾರೆ.
"Mamata does not understand difference between refugees and infiltrators": Amit Shah
— ANI Digital (@ani_digital) March 14, 2024
Read @ANI Story | https://t.co/UAc7jrPwg1#MamataBanerjee #AmitShah #CAA pic.twitter.com/vBPo1pWnXo
‘ರಾಜಕೀಯ ಮಾಡುವುದಕ್ಕೆ ಸಾಕಷ್ಟು ವಿಚಾರಗಿವೆ, ದಯವಿಟ್ಟು ಈ ವಿಷಯದಲ್ಲಿ ರಾಜಕೀಯ ತರಬೇಡಿ. ಬಾಂಗ್ಲಾದೇಶದಿಂದ ಬಂದಿರುವ ಹಿಂದೂಗಳನ್ನು ದಯವಿಟ್ಟು ವಿರೋಧಿಸಬೇಡಿ. ನೀವೂ ಒಬ್ಬ ಬೆಂಗಾಲಿ. ನಾನು ನಿಮಗೊಂದು ಸವಾಲು ಹಾಕುತ್ತೇನೆ. ಪೌರತ್ವ ತಿದ್ದುಪಡಿ ಕಾಯ್ದೆಯ ಯಾವ ನಿಯಮವು ಯಾವುದೇ ಒಬ್ಬ ವ್ಯಕ್ತಿಯ ಪೌರತ್ವವನ್ನು ಕಸಿದುಕೊಳ್ಳುತ್ತದೆ ಎಂಬುದನ್ನು ಸಾಬೀತುಪಡಿಸಿ. ನೀವು ಕೇವಲ ವೋಟ್‌ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಜನರಲ್ಲಿ ಭಯ ಹುಟ್ಟು ಹಾಕಿ, ಹಿಂದೂ ಮತ್ತು ಮುಸ್ಲಿಮರ ನಡುವೆ ಕಂದಕ ಸೃಷ್ಟಿಸುತ್ತಿದ್ದೀರಿ’ ಎಂದು ಕಿಡಿ ಕಾರಿದ್ದಾರೆ.
ಇತ್ತೀಚೆಗೆ, ಕೇಂದ್ರ ಸರ್ಕಾರ ಜಾರಿಗೆ ತಂದ ಸಿಎಎಯು ಕೇವಲ ಗಿಮಿಕ್ ಎಂದು ಜರಿದಿದ್ದ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದಲ್ಲಿ ಅದರ ಜಾರಿಗೆ ಅವಕಾಶ ಕೊಡುವುದಿಲ್ಲ. ಈ ಕಾಯ್ದೆಯಡಿ ಯಾರೂ ಸಹ ಪೌರತ್ವಕ್ಕೆ ಅರ್ಜಿ ಹಾಕಬೇಡಿ. ಒಂದೊಮ್ಮೆ ಅರ್ಜಿ ಹಾಕಿದರೆ, ನೀವು ಅಕ್ರಮ ವಲಸಿಗರ ಸಾಲಿಗೆ ಸೇರುತ್ತೀರಿ. ಆಗ ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ ಎಂದು ಮಮತಾ ಹೇಳಿದ್ದರು.
ಸಿಎಎ ಕಾಯ್ದೆಯ ನಿರ್ಧಾರ ಅಪಾಯಕಾರಿಯಾಗಿದ್ದು, ಪಾಕಿಸ್ತಾನ, ಅಫ್ಗಾನಿಸ್ತಾನ, ಬಾಂಗ್ಲಾದೇಶದಿಂದ ಬಂದವರಿಗೆ ಮಾರಕವಾಗಿದೆ ಎಂಬ ದೆಹಲಿ ಸಿಎಂ ಕೇಜ್ರಿವಾಲ್ ಹೇಳಿಕೆಗೂ ತಿರುಗೇಟು ನೀಡಿದ ಶಾ, ಈ ದೇಶಗಳಿಂದ ವಲಸೆ ಬಂದವರು ಈಗಾಗಲೇ ಆಶ್ರಯ ಪಡೆದಿದ್ದಾರೆ. ಕೇಜ್ರಿವಾಲ್ ಅವರಿಗೆ ಇದು ತಿಳಿದೇ ಇಲ್ಲ. 2014ಕ್ಕೂ ಮುನ್ನ ಬಂದಿರುವವರಿಗೆ ಪೌರತ್ವ ಸಿಗಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.