ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ ರಾಜ್ಯಪಾಲರನ್ನು ಭೇಟಿಯಾದ ಇಂಡಿಯಾ ನಿಯೋಗ: ಅವಲೋಕನದ ವಿವರ ಸಲ್ಲಿಕೆ

Published 30 ಜುಲೈ 2023, 6:42 IST
Last Updated 30 ಜುಲೈ 2023, 6:42 IST
ಅಕ್ಷರ ಗಾತ್ರ

ಇಂಫಾಲ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಿದ್ದ ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಸಂಸದರು ಅಲ್ಲಿನ ರಾಜ್ಯಪಾಲರಾದ ಅನುಸೂಯ ಉಯಿಕೆಯವರನ್ನು ಭೇಟಿ ಮಾಡಿ ತಮ್ಮ ಅವಲೋಕನ ಕುರಿತ ಜ್ಞಾಪನಾಪತ್ರ ಸಲ್ಲಿಸಿದ್ದಾರೆ.

ಪರಿಶಿಷ್ಟ ಪಂಗಡದ ಸ್ಥಾನಮಾನ ಕುರಿತಂತೆ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಘರ್ಷಣೆಗಳು ನಡೆದ ನಂತರ ನಡೆಯುತ್ತಿರುವ ಹಿಂಸಾಚಾರ ತಡೆಯುವ ಕುರಿತಂತೆ ನಾಯಕರು ಚರ್ಚೆ ನಡೆಸಿದ್ದಾರೆ.

ಭೇಟಿ ಬಳಿಕ ಮಾತನಾಡಿದ ಕಾಂಗ್ರೆಸ್‌ನ ಅಧೀರ್ ರಂಜನ್ ಚೌಧರಿ ಅವರು, ‘ಇಂಡಿಯಾ ಮೈತ್ರಿಕೂಟದ ಸಂಸದರು ಮಣಿಪುರದ ರಾಜ್ಯಪಾಲರನ್ನು ಭೇಟಿಯಾಗಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಿದೆವು. ಎಲ್ಲರೂ ಒಟ್ಟಾಗಿ ಸಮಸ್ಯೆ ಪರಿಹರಿಸುವುದು ಅಗತ್ಯವಾಗಿದೆ ಎಂಬ ನಮ್ಮ ಮನವಿಯನ್ನು ಅವರು ಅಂಗೀಕರಿಸಿದರು. ಸಮುದಾಯದ ನಡುವಿನ ಅಪನಂಬಿಕೆಯನ್ನು ಹೋಗಲಾಡಿಸಲು ಜನರೊಂದಿಗೆ ಚರ್ಚೆ ನಡೆಸುವ ದೃಷ್ಟಿಯಿಂದ ಸರ್ವಪಕ್ಷ ನಿಯೋಗ ಮಣಿಪುರಕ್ಕೆ ಭೇಟಿ ನೀಡಬೇಕು’ಎಂದು ಹೇಳಿದರು. ಅಲ್ಲದೆ, ಇಲ್ಲಿನ ಅವಲೋಕನಗಳನ್ನು ಸಂಸತ್ತಿನಲ್ಲಿ ಮಂಡಿಸುವುದಾಗಿಯೂ ಅವರು ಹೇಳಿದರು.

ವಿಪಕ್ಷಗಳ ನಿಯೋಗ ನಿನ್ನೆ ಮಣಿಪುರಕ್ಕೆ ಆಗಮಿಸಿದ್ದು, ಇಂದು ರಾಜ್ಯಪಾಲರ ಭೇಟಿಗೂ ಮುನ್ನ ಜನರನ್ನು ಭೇಟಿ ಮಾಡಿದೆ.

‘ದಿನದಿಂದ ದಿನಕ್ಕೆ ಹದಗೆಡುತ್ತಿರುವ ಮಣಿಪುರ ಪರಿಸ್ಥಿತಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ವಿನಂತಿಸಿದ್ದೇವೆ. ಮಣಿಪುರ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸದಿದ್ದರೆ, ಅದು ದೇಶದ ಭದ್ರತೆಯ ಸಮಸ್ಯೆಯನ್ನು ಉಂಟುಮಾಡಬಹುದು’ ಎಂದು ಅಧೀರ್ ರಂಜನ್ ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಗೌರವ್‌ ಗೊಗೊಯಿ, ಟಿಎಂಸಿಯ ಸುಶ್ಮಿತಾ ದೇವ್‌, ಜೆಎಂಎಂನ ಮಹುವಾ ಮಜ್ಹಿ, ಡಿಎಂಕೆಯ ಕನಿಮೋಳಿ, ಎನ್‌ಸಿಪಿಯ ವಂದನಾ ಚೌಹಾಣ್, ಆರ್‌ಎಲ್‌ಡಿಯ ಜಯಂತ್‌ ಚೌದರಿ, ಆರ್‌ಜೆಡಿಯ ಮನೋಜ್‌ ಕುಮಾರ್‌, ಆರ್‌ಎಸ್‌ಪಿಯ ಎನ್‌. ಕೆ ಪ್ರೇಮಚಂದ್ರನ್‌ ಮತ್ತು ವಿಸಿಕೆಯ ತಿರುಮಾವಳನ್‌ ನಿಯೋಗದಲ್ಲಿ ಇದ್ದರು.

ಮೇ 4ರಂದು ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಕಿರುಕುಳ ನೀಡಿದ ವಿಡಿಯೊ ಜುಲೈ 19ರಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ದೇಶದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿರೋಧ ಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ. ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಮತ್ತು ಮಣಿಪುರ ಸರ್ಕಾರವನ್ನು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT