ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ಗೀತೆ ವಾಚನ

ಪಶ್ಚಿಮ ಬಂಗಾಳ: 1 ಲಕ್ಷ ಜನರಿಂದ ಭಗವದ್ಗೀತೆ ಪಠನ ಕಾರ್ಯಕ್ರಮ
Published 24 ಡಿಸೆಂಬರ್ 2023, 16:03 IST
Last Updated 24 ಡಿಸೆಂಬರ್ 2023, 16:03 IST
ಅಕ್ಷರ ಗಾತ್ರ

ಕೋಲ್ಕತ್ತ: ಇಲ್ಲಿಯ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ಭಾನುವಾರ ನಡೆದ ಭಗವದ್ಗೀತೆಯ ಶ್ಲೋಕಗಳ ಪಠನ ಕಾರ್ಯಕ್ರಮ ‘ಲೋಖೋ ಕೋಂತೆ ಗೀತ ಪಥ್‌’ವು ಬಿಜೆಪಿ ಮತ್ತು ಟಿಎಂಸಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರು ಭಾಗಿಯಾಗಿದ್ದರು. ಸಾಂಪ್ರದಾಯಕ ಉಡುಗೆಗಳನ್ನು ತೊಟ್ಟು ಬಂದಿದ್ದ ಅವರು ಒಟ್ಟಾಗಿ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು. ಪಶ್ಚಿಮ ಬಂಗಾಳ ಬಿಜೆಪಿ ಘಟಕ ಮತ್ತು ಆರ್‌ಎಸ್‌ಎಸ್‌ನ ಪ್ರಮುಖ ನಾಯಕರೂ ಇದರಲ್ಲಿ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಹಿಂದೂ ಒಗ್ಗಟ್ಟನ್ನು ತೋರುವಂತೆ ಬಿಜೆಪಿ ಕರೆನೀಡಿತ್ತು. ರಾಜಕೀಯ ಬಲಪ್ರದರ್ಶಿಸಲು ಈ ಕಾರ್ಯಕ್ರಮವನ್ನು ಬಿಜೆಪಿ ಬಳಸಿಕೊಂಡಿದೆ ಎಂದು ಆಡಳಿತಾರೂಢ ಟಿಎಂಸಿ ಆರೋಪಿಸಿದೆ.

ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್‌ ಅವರು, ‘ಭಗವದ್ಗೀತೆಯು ಭಾರತವು ಜಗತ್ತಿಗೆ ನೀಡಿರುವ ಅಮೂಲ್ಯ ಕೊಡುಗೆ. ಈ ಕಾರ್ಯಕ್ರಮವನ್ನು ಲೇವಡಿ ಮಾಡುತ್ತಿರುವವರಿಗೆ ಹಿಂದೂ ಧರ್ಮ ಮತ್ತು ಅದರ ಪರಂಪರೆ ಬಗ್ಗೆ ಗೌರವವಿಲ್ಲ. ಹಿಂದೂಗಳನ್ನು ಒಡೆಯಲು ಪ್ರಯತ್ನಿಸುತ್ತಿರುವವರು ತಮ್ಮ ಪ್ರಯತ್ನದಲ್ಲಿ ವಿಫಲರಾಗುತ್ತಾರೆ’ ಎಂದಿದ್ದಾರೆ.

‘ಇದು ಕೇವಲ ಭಗವದ್ಗೀತೆ ಪಠನ ಕಾರ್ಯಕ್ರಮವಾಗಿರಲಿಲ್ಲ. ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯಕ್ರಮವೂ ಆಗಿತ್ತು’ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಹೇಳಿದ್ದಾರೆ. 

ಬಿಜೆಪಿ ನಾಯಕರ ಹೇಳಿಕೆಗೆ ಟಿಎಂಸಿ ತಿರುಗೇಟು ನೀಡಿದೆ. ‘ನಮಗೆ ಗೀತೆ ಪಠನ ಕಾರ್ಯಕ್ರಮದ ಕುರಿತು ಯಾವುದೇ ರೀತಿಯ ವಿರೋಧವಿಲ್ಲ. ಆದರೆ, ಬಿಜೆಪಿ ನಾಯಕರು ಈ ಕಾರ್ಯಕ್ರಮವನ್ನು ತಮ್ಮ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ಬಳಸಬಾರದು. ಧರ್ಮವನ್ನು ರಾಜಕೀಯದ ಜೊತೆ ಬೆರೆಸುವ ಚಟ ಬಿಜೆಪಿಗಿದೆ’ ಎಂದು ಟಿಎಂಸಿ ವಕ್ತಾರ ಕುನಾಲ್‌ ಘೋಷ್‌ ಹೇಳಿದ್ದಾರೆ.

‘ಭಗವದ್ಗೀತೆ ಪಠನ ಬದಲಿಗೆ ಬಿಜೆಪಿಯು ಫುಟ್‌ಬಾಲ್‌ ಕ್ರೀಡಾಕೂಟ ಆಯೋಜಿಸಬಹುದಿತ್ತು’ ಎಂದು ರಾಜ್ಯ ಸಚಿವ ಉದಯನ್‌ ಗುಹಾ ಹೇಳಿದ್ದಾರೆ. 

ಮೋದಿ ಶುಭಹಾರೈಕೆ: ಭಗವದ್ಗೀತೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಹಾರೈಸಿದ್ದಾರೆ. ‘ಸಮಾಜದ ವಿವಿಧ ವರ್ಗಗಳಿಗೆ ಸೇರಿರುವ ಜನರು ಭಾರಿ ಸಂಖ್ಯೆಯಲ್ಲಿ ಒಗ್ಗೂಡಿ ಗೀತೆ ಪಠನ ಮಾಡುವುದು ಸಾಮಾಜಿಕ ಸಾಮರಸ್ಯಕ್ಕೆ ಉತ್ತೇಜನ ನೀಡುವುದಲ್ಲದೇ, ರಾಷ್ಟ್ರ ಬೆಳವಣಿಗೆಗೆ ಶಕ್ತಿಯನ್ನೂ ತುಂಬುತ್ತದೆ’ ಎಂದು ಮೋದಿ ಹೇಳಿದ್ದಾರೆ. 

ಮೋದಿ ಅವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಜುಂದಾರ್‌ ಅವರು ಬುಧವಾರ ಹೇಳಿದ್ದರು.

ಸಂವಿಧಾನ ಓದು: ಇದೇವೇಳೆ ಪಶ್ವಿಮ ಬಂಗಾಳ ಕಾಂಗ್ರೆಸ್‌ ನಾಯಕರು ಬ್ರಿಗೇಡ್‌ ಪರೇಡ್‌ ಮೈದಾನ ಬಳಿಯ ಬಿರ್ಲಾ ತಾರಾಲಯದಲ್ಲಿ ‘ಸಂವಿಧಾನ ಓದು’ ಕಾರ್ಯಕ್ರಮ ಆಯೋಜಿಸಿದ್ದರು. ‘ಸಮಾಜವನ್ನು ಒಡೆಯುವ ದಿಸೆಯಲ್ಲಿ ಕೆಲಸ ಮಾಡುವುದಕ್ಕಿಂತ, ಸಂವಿಧಾನದಲ್ಲಿ ಹೇಳಿರುವಂತೆ ಜಾತ್ಯತೀತ ಸಮಾಜ ರೂಪಿಸುವತ್ತ ಕೆಲಸ ಮಾಡಬೇಕು’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಈ ವೇಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT