ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಘಾಲಯ ಅತಂತ್ರ: ಸರ್ಕಾರ ರಚಿಸಲು ಎನ್‌ಪಿಪಿಯ ಸಂಗ್ಮಾಗೆ ಬೆಂಬಲ ಸೂಚಿಸಿದ ಬಿಜೆಪಿ

ಶಿಲ್ಲಾಂಗ್‌: ಮತಗಟ್ಟೆ ಸಮೀಕ್ಷೆಗಳು ಹೇಳಿದಂತೇ ಮೇಘಾಲಯ ವಿಧಾನಸಭೆ ಅತಂತ್ರಗೊಂಡಿದೆ. ಆದರೆ, 24 ಕ್ಷೇತ್ರಗಳನ್ನು ಗೆದ್ದು ಎರಡರಲ್ಲಿ ಮುನ್ನಡೆ ಸಾಧಿಸಿರುವ ಮುಖ್ಯಮಂತ್ರಿ ಕಾನ್ರಾಡ್‌ ಕೆ ಸಂಗ್ಮಾ ಅವರ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ (ಎನ್‌ಪಿಪಿ) ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದು, ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವುದು ನಿಚ್ಚಳವಾಗಿದೆ.

ಮೇಘಾಲಯದ ಒಟ್ಟು 60 ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಫೆಬ್ರುವರಿ 27 ರಂದು ಚುನಾವಣೆ ನಡೆದಿತ್ತು. ಶಿಲ್ಲಾಂಗ್‌ ವಿಧಾನಸಭಾ ಕ್ಷೇತ್ರದ ಯುನೈಟೆಡ್‌ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಎಚ್‌.ಡಿ.ಆರ್. ಲಿಂಗ್ಡೊ ಅವರು ಮೃತಪಟ್ಟಿರುವುದರಿಂದ ಆ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ.

59 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳ ಫಲಿತಾಂಶ ಗುರುವಾರ ರಾತ್ರಿ 7 ಗಂಟೆ ಹೊತ್ತಿಗೆ ಪ್ರಕಟವಾಗಿದ್ದು, ಎನ್‌ಪಿಪಿ 24ರಲ್ಲಿ ಗೆದ್ದು 2ರಲ್ಲಿ ಮುನ್ನಡೆ ಸಾಧಿಸಿದೆ. ಯುಡಿಪಿ 11, ಕಾಂಗ್ರೆಸ್‌ 5, ಟಿಎಂಸಿ 5, ಬಿಜೆಪಿ 2, ಎಚ್‌ಎಸ್‌ಪಿಡಿಪಿ 2, ಪಿಡಿಎಫ್‌ 2, ವಾಯ್ಸ್‌ ಆಫ್‌ ಪೀಪಲ್‌ ಪಾರ್ಟಿ 4, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಗೆದ್ದರೂ, ಸರ್ಕಾರ ರಚನೆಗೆ ಸಂಖ್ಯಾಬಲದ ಕೊರತೆ ಎದುರಿಸುತ್ತಿರುವ ಸಂಗ್ಮಾ ಬೆಂಬಲ ಕೋರಿ ಬಿಜೆಪಿಗೆ ಮನವಿ ಮಾಡಿದ್ದರು. ಈ ಮನವಿಯನ್ನು ಮನ್ನಿಸಿರುವ ಬಿಜೆಪಿಯು, ಸರ್ಕಾರ ರಚಿಸಲು ಸಂಗ್ಮಾಗೆ ನೆರವು ನೀಡುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಈ ವಿಚಾರವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಟ್ವೀಟ್‌ ಮಾಡಿ ಖಚಿತಪಡಿಸಿದ್ದಾರೆ.

2018ರಲ್ಲಿ 19 ಸ್ಥಾನಗಳಲ್ಲಿ ಗೆದ್ದಿದ್ದ ಎನ್‌ಪಿಪಿ ಸಣ್ಣ ಪಕ್ಷಗಳು ಮತ್ತು ಬಿಜೆಪಿಯ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿತ್ತು. ಕಾನ್ರಾಡ್‌ ಕೆ. ಸಂಗ್ಮಾ ಅವರು ಮುಖ್ಯಮಂತ್ರಿಯಾಗಿದ್ದರು. ಸದ್ಯ ಈ ಬಾರಿಯೂ ಅದೇ ಪರಿಸ್ಥಿತಿ ಮುಂದುವರಿಯುವುದು ಖಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT