ಶಿಲ್ಲಾಂಗ್: ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಧ್ಯಕ್ಷ ಕಾನ್ರಾಡ್ ಸಂಗ್ಮಾ ಅವರು ಶುಕ್ರವಾರ ಮೇಘಾಲಯ ರಾಜ್ಯಪಾಲ ಫಾಗು ಚೌಹಾಣ್ ಅವರನ್ನು ಭೇಟಿ ಮಾಡಿದ್ದಾರೆ.
ತಮಗೆ 32 ಶಾಸಕರ ಬೆಂಬಲವಿದ್ದು, ಮೇಘಾಲಯದಲ್ಲಿ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ಸಂಗ್ಮಾ ಹಕ್ಕು ಮಂಡಿಸಿದ್ದಾರೆ.
ಸಂಗ್ಮಾ ಅವರು ಬಿಜೆಪಿ, ಎಚ್‌ಎಸ್‌ಪಿಡಿಪಿ ಮತ್ತು ಇಬ್ಬರು ಪಕ್ಷೇತರ ಶಾಸಕರ ಬೆಂಬಲವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಅವರು ಇತರ ಪಕ್ಷಗಳೊಂದಿಗೆ ಸಂಪರ್ಕದಲ್ಲಿರುವುದರಿಂದ ಬೆಂಬಲಿಗರ ಸಂಖ್ಯೆ ಹೆಚ್ಚಾಗಲಿದೆ ಎಂದು ಪ್ರತಿಪಾದಿಸಿದ್ದಾರೆ.
ಮಾರ್ಚ್ 7ರಂದು ಬೆಳಿಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಗ್ಮಾ ಹೇಳಿದ್ದಾರೆ.
‘ನಾನು ವಿವಿಧ ಪಕ್ಷಗಳ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದೇನೆ. ಒಟ್ಟಾರೆಯಾಗಿ ನಮಗೆ 32 ಶಾಸಕರ ಬೆಂಬಲವಿದೆ. ಎನ್‌ಪಿಪಿಯ 26 ಶಾಸಕರನ್ನು ಹೊರತುಪಡಿಸಿ ಬಿಜೆಪಿ ಮತ್ತು ಎಚ್‌ಎಸ್‌ಪಿಡಿಪಿಯಿಂದ ತಲಾ ಇಬ್ಬರು ಹಾಗೂ ಇಬ್ಬರು ಪಕ್ಷೇತರ ಶಾಸಕರು ಬೆಂಬಲವಿದೆ. ಅವರೆಲ್ಲರೂ ಪತ್ರಕ್ಕೆ ಸಹಿ ಹಾಕಿದ್ದಾರೆ. ನಾವು ಇನ್ನೂ ಕೆಲವು ಪಕ್ಷಗಳು ಮತ್ತು ಅವರ ಶಾಸಕರೊಂದಿಗೆ ಸಂಪರ್ಕದಲ್ಲಿದ್ದೇವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸಂಗ್ಮಾ ತಿಳಿಸಿದ್ದಾರೆ.
‘ತಮ್ಮ ಪಕ್ಷದ ನೇತೃತ್ವದ ಸರ್ಕಾರವನ್ನು ಬೆಂಬಲಿಸಲು ವಿವಿಧ ಪಕ್ಷಗಳು ತಮ್ಮನ್ನು ಸಂಪರ್ಕಿಸಿವೆ. ಆದರೆ, ಹೊಸ ಮೈತ್ರಿಕೂಟದ ಹೆಸರನ್ನು ಇನ್ನೂ ನಿರ್ಧರಿಸಿಲ್ಲ ಎಂದು ಸಂಗ್ಮಾ ಹೇಳಿದ್ದಾರೆ.
ಮೇಘಾಲಯದ ಒಟ್ಟು 60 ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಫೆಬ್ರುವರಿ 27 ರಂದು ಚುನಾವಣೆ ನಡೆದಿತ್ತು. ಶಿಲ್ಲಾಂಗ್ ವಿಧಾನಸಭಾ ಕ್ಷೇತ್ರದ ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಎಚ್.ಡಿ.ಆರ್. ಲಿಂಗ್ಡೊ ಅವರು ಮೃತಪಟ್ಟಿರುವುದರಿಂದ ಆ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ.
59 ಕ್ಷೇತ್ರಗಳ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಎನ್‌ಪಿಪಿ 26 ಗೆಲುವು ಸಾಧಿಸಿದೆ. ಯುಡಿಪಿ 11, ಕಾಂಗ್ರೆಸ್ 5, ಟಿಎಂಸಿ 5, ಬಿಜೆಪಿ, ಎಚ್‌ಎಸ್‌ಪಿಡಿಪಿ, ಪಿಡಿಎಫ್ ತಲಾ 2, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.