ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ಆಸ್ಪತ್ರೆಗಳಿಗೆ ಕಳಪೆ ಔಷಧ ಪೂರೈಕೆ: ಸಿಬಿಐ ತನಿಖೆಗೆ ಆದೇಶ

Published 5 ಜನವರಿ 2024, 15:46 IST
Last Updated 5 ಜನವರಿ 2024, 15:46 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಸರ್ಕಾರದ ಆಸ್ಪತ್ರೆಗಳಿಗೆ ಕಳಪೆ ಗುಣಮಟ್ಟದ ಔಷಧಗಳ ಪೂರೈಕೆ ಹಾಗೂ ಮೊಹಲ್ಲಾ ಕ್ಲಿನಿಕ್‌ಗಳ ಮೂಲಕವು ಇವೇ ಔಷದಗಳನ್ನು ಪೂರೈಸಲಾಗಿದೆಯೇ ಎಂಬ ಆರೋಪ ಕುರಿತು ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿದೆ.

ದೆಹಲಿಯ ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಡಿಸೆಂಬರ್ ತಿಂಗಳಲ್ಲಿ ಈ ಸಂಬಂಧ ಶಿಫಾರಸು ಮಾಡಿದ್ದರು. ತನಿಖೆಗೆ ಆದೇಶಿಸಿ ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ಆದೇಶ ಹೊರಡಿಸಿದೆ.

ಗುಣಮಟ್ಟದ ಪರೀಕ್ಷೆಯನ್ನು ನಡೆಸಿದಾಗ ಈ ಔಷಧಗಳು ಕಳಪೆ ದರ್ಜೆಯವು ಹಾಗೂ ದೆಹಲಿ ಸರ್ಕಾರದ ಆಸ್ಪತ್ರೆಗಳಲ್ಲಿ ಜನರ ಜೀವಕ್ಕೆ ಕುಂದು ತರಬಹುದು ಎಂದು ಗೊತ್ತಾಗಿದೆ ಎಂದು ಲೆಫ್ಟಿನಂಟ್‌ ಗವರ್ನರ್ ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.

ದೆಹಲಿ ಸರ್ಕಾರದ ಗುಪ್ತದಳ ನಿರ್ದೇಶನಾಲಯವೂ ತನಿಖೆಗೆ ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು.

ಗುಣಮಟ್ಟದ ಔಷಧ ‍ಪೂರೈಕೆಯಾಗಿಲ್ಲ ಎಂಬುದರ ತನಿಖೆಯು ಸಿಪಿಎ ಕಾರ್ಯವ್ಯಾಪ್ತಿಗಷ್ಟೇ ಸೀಮಿತವಾಗಬಾರದು. ಇಡೀ ಔಷಧ ಪೂರೈಕೆ ವ್ಯವಸ್ಥೆ ಕುರಿತು ತನಿಖೆ ಆಗಬೇಕು. ಉತ್ಪಾದಕರಿಂದ ಖರೀದಿಸುವ ಪೂರೈಕೆದಾರರ ಪಾತ್ರವು ತನಿಖೆಗೊಳಪಡಬೇಕು ಎಂದು ದೆಹಲಿಯ ಗುಪ್ತದಳ ನಿರ್ದೇಶನಾಲಯವು ತನ್ನ ಪತ್ರದಲ್ಲಿ ಉಲ್ಲೇಖಿಸಿತ್ತು.

ಕೇಂದ್ರ ಖರೀದಿ ಏಜೆನ್ಸಿಯು (ಸಿಪಿಎ) ಖರೀದಿಸಿದ್ದ ಔಷಧಗಳನ್ನೇ ಮೊಹಲ್ಲಾ ಕ್ಲಿನಿಕ್‌ಗಳ ಮೂಲಕವೂ ರೋಗಿಗಳಿಗೆ ನೀಡಲಾಗಿದೆಯೇ, ಇಲ್ಲವೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಕೋರಲಾಗಿತ್ತು.

ಅಧಿಕಾರಿಗಳನ್ನು ಬೆದರಿಸಲು ಕೇಂದ್ರದ ಬಿಜೆಪಿ ಸರ್ಕಾರ ತನಿಖೆಗಳನ್ನು ನಡೆಸುತ್ತಿದೆ. ಇಂತಹ ನಕಲಿ ತನಿಖೆಗಳ ಮೂಲಕ ರಾಷ್ಟ್ರ ರಾಜಧಾನಿಯ ವಿಶ್ವದರ್ಜೆ ಗುಣಮಟ್ಟದ ಆರೋಗ್ಯ ಚಿಕಿತ್ಸಾ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ.
–ಅತಿಷಿ, ದೆಹಲಿ ಸರ್ಕಾರದ ಸಚಿವೆ 

ಆರೋಗ್ಯ ಇಲಾಖೆ ಕಾರ್ಯದರ್ಶಿ ಅಮಾನತುಪಡಿಸಿ: ಸಚಿವ

ದೆಹಲಿಯ ಸರ್ಕಾರಿ ಆಸ್ಪತ್ರೆಗೆ ಕಳಪೆ ಗುಣಮಟ್ಟದ ಔಷಧಗಳ ಪೂರೈಕೆ ಕುರಿತು ಸಿಬಿಐ ತನಿಖೆಗೆ ಆದೇಶಿಸಿರುವುದನ್ನು ದೆಹಲಿಯ ಆರೋಗ್ಯ ಸಚಿವ ಸೌರಭ್‌ ಬಾರಧ್ವಾಜ್‌ ಅವರು ಸ್ವಾಗತಿಸಿದ್ದಾರೆ.

‘ಅಧಿಕಾರ ವಹಿಸಿಕೊಂಡ ಬಳಿಕ ಪೂರೈಕೆಯಾಗಿರುವ ಔಷಧಗಳ ಲೆಕ್ಕಪರಿಶೋಧನೆ ಆಗಬೇಕು ಎಂದು ನಾನು ನಿರ್ದೇಶನ ನೀಡಿದ್ದೆ. ಆದರೆ ಆರೋಗ್ಯ ಇಲಾಖೆ ಕಾರ್ಯದರ್ಶಿ ನನ್ನ ನಿರ್ದೇಶನ ಪಾಲಿಸಿಲ್ಲ. ತನಿಖೆಗೆ ಸ್ವಾಗತ. ಆದರೆ ಕೇಂದ್ರ ಸರ್ಕಾರ ಅಧಿಕಾರಿಯನ್ನು ಏಕೆ ರಕ್ಷಿಸಬೇಕು. ಕೂಡಲೇ ಕಾರ್ಯದರ್ಶಿಯನ್ನು ಅಮಾನತುಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಗುಣಮಟ್ಟದ್ದಲ್ಲ: ದೆಹಲಿ ಆಸ್ಪತ್ರೆಗಳಿಗೆ ಪೂರೈಸಿದ್ದ ಔಷಧಗಳಲ್ಲಿ ಪರೀಕ್ಷೆಗೆ 43 ಮಾದರಿಗಳನ್ನು ಸಂಗ್ರಹಿಸಿದ್ದು ಇವಗಳಲ್ಲಿ ಐದು ಮಾತ್ರ ಗುಣಮಟ್ಟದ್ದಲ್ಲ (ಎನ್‌ಎಸ್‌ಕ್ಯೂ) ಎಂದು ಸಾಬೀತಾಗಿದೆ ಎಂದು ಸಚಿವ ಸೌರಭ್‌ ಬಾರಧ್ವಾಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅವರು ಅಧಿಕೃತ ವರದಿಯಲ್ಲಿ ಎನ್‌ಎಸ್‌ಕ್ಯೂ ಅಥವಾ ‘ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ’ ಪದವನ್ನು ಹಲವು ಬಾರಿ ಬಳಕೆಯಾಗಿದೆ. ಆದರೆ ಈ ಔಷಧಗಳು ನಕಲಿ ವಿಷಕಾರಕ ಕಲುಷಿತ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಇಲ್ಲದ್ದನ್ನು ಅಧಿಕೃತವಾಗಿ ಬರೆಯಲಾಗದು ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT