ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ಕೆಟಿಆರ್‌ ನಂಟು: ಸಚಿವೆ ಕೊಂಡಾ ಸುರೇಖಾ

Published : 2 ಅಕ್ಟೋಬರ್ 2024, 15:38 IST
Last Updated : 2 ಅಕ್ಟೋಬರ್ 2024, 15:38 IST
ಫಾಲೋ ಮಾಡಿ
Comments

ಹೈದರಾಬಾದ್: ‘ತೆಲುಗು ನಟ ಅಕ್ಕಿನೇನಿ ನಾಗಚೈತನ್ಯ ಹಾಗೂ ನಟಿ ಸಮಂತಾ ರುತ್‌ ಪ್ರಭು ಅವರು ವಿಚ್ಛೇದನ ಪಡೆದುಕೊಳ್ಳಲು ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮ ರಾವ್‌ (ಕೆಟಿಆರ್‌) ಕಾರಣ’ ಎಂಬ ತೆಲಂಗಾಣ ಅರಣ್ಯ ಮತ್ತು ಪರಿಸರ ಸಚಿವೆ ಕೊಂಡಾ ಸುರೇಖಾ ಅವರು ಬುಧವಾರ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಸಚಿವೆ ಸುರೇಖಾ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಕೂಡಲೇ ಈ ಹೇಳಿಕೆ ಹಿಂಪಡೆಯಬೇಕು ಎಂದು ನಾಗಚೈತನ್ಯ ತಂದೆ ಹಾಗೂ ಜನಪ್ರಿಯ ನಟ ನಾಗಾರ್ಜುನ ಆಗ್ರಹಿಸಿದ್ದಾರೆ.

ಸಚಿವೆ ಸುರೇಖಾ ಹೇಳಿದ್ದೇನು?: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಸುರೇಖಾ, ‘ಕೆ.ಟಿ.ರಾಮ ರಾವ್‌ ಡ್ರಗ್ ವ್ಯಸನಿ. ಚಿತ್ರರಂಗದ ಖ್ಯಾತನಾಮರಿಗೆ ಆತ ರೇವ್‌ ಪಾರ್ಟಿ ಆಯೋಜಿಸುತ್ತಿದ್ದರು. ಅವರ ದೌರ್ಜನ್ಯ ಸಹಿಸದೇ ಅನೇಕ ನಟಿಯರು ನಟನೆಯನ್ನೇ ಬಿಟ್ಟಿದ್ದಾರೆ. ಕೆಲವರು ಮದುವೆಯಾಗಿ, ಚಿತ್ರರಂಗದಿಂದ ದೂರ ಉಳಿದಿದ್ದಾರೆ‘ ಎಂದು ಹೇಳಿದ್ದಾರೆ.

‘ನಾಗಾರ್ಜುನ ಒಡೆತನದ ಎನ್‌–ಕನ್ವೆನ್ಷನ್‌ ಸೆಂಟರ್‌ ನೆಲಸಮಗೊಳಿಸುವುದು ಬೇಡ ಎಂದಾದಲ್ಲಿ, ತನ್ನ ಬಳಿ ಸಮಂತಾ ಅವರನ್ನು ಕಳುಹಿಸುವಂತೆ ರಾಮ ರಾವ್‌, ಬೇಡಿಕೆ ಇಟ್ಟಿದ್ದರು. ರಾಮ ರಾವ್‌ ಬಳಿ ಹೋಗುವಂತೆ ಸಮಂತಾ ಅವರಿಗೆ ನಾಗಾರ್ಜುನ ಬಲವಂತ ಮಾಡಿದಾಗ, ಅದನ್ನು ಅಕೆ ಒಪ್ಪಿಕೊಂಡಿರಲಿಲ್ಲ. ಈ ವಿಚಾರವೇ ವಿಚ್ಛೇದನಕ್ಕೆ ಕಾರಣವಾಯಿತು‘ ಎಂದು ಸಚಿವೆ ಸುರೇಖಾ ಹೇಳಿದ್ದಾರೆ.

‘ಕೆ.ಟಿ.ರಾಮ ರಾವ್ ಅನೇಕರಿಗೆ ತೊಂದರೆ ಕೊಟ್ಟಿದ್ದು, ಬ್ಲ್ಯಾಕ್‌ಮೇಲ್‌ ಕೂಡ ಮಾಡಿದ್ದಾರೆ’ ಎಂದೂ ಹೇಳಿದ್ದಾರೆ.

ಖಂಡನೆ: ‘ಸಚಿವೆ ಕೊಂಡಾ ಸುರೇಖಾ ಅವರ ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ರಾಜಕೀಯದಿಂದ ದೂರ ಇರುವ ಚಿತ್ರ ತಾರೆಯರನ್ನು ನಿಮ್ಮ ವಿರೋಧಿಗಳನ್ನು ಟೀಕಿಸುವುದಕ್ಕಾಗಿ ಬಳಸಿಕೊಳ್ಳಬೇಡಿ’ ಎಂದು ನಾಗಚೈತನ್ಯ ತಂದೆ, ನಟ ನಾಗಾರ್ಜುನ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಬೇರೆಯವರ ಖಾಸಗಿತನವನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿ ಒಬ್ಬ ಮಹಿಳೆಯಾಗಿ ನಮ್ಮ ಕುಟುಂಬದ ವಿರುದ್ಧದ ನಿಮ್ಮ ಹೇಳಿಕೆಗಳು ಹಾಗೂ ಆರೋಪಗಳು ಅಸಂಬದ್ಧ ಹಾಗೂ ಸುಳ್ಳು. ಕೂಡಲೇ ಈ ಹೇಳಿಕೆಗಳನ್ನು ಹಿಂಪಡೆಯುವಂತೆ ನಿಮ್ಮಲ್ಲಿ ಮನವಿ ಮಾಡುವೆ’ ಎಂದೂ ಹೇಳಿದ್ದಾರೆ.

ಮಾಜಿ ಸಚಿವ ಹಾಗೂ ಬಿಆರ್‌ಎಸ್‌ ನಾಯಕ ಟಿ.ಹರೀಶ್‌ ರಾವ್ ಕೂಡ ಸಚಿವೆ ಸುರೇಖಾ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

‘ಸಚಿವೆ ಸುರೇಖಾ ನೀಡಿರುವ ಈ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸುತ್ತೇನೆ. ಕೂಡಲೇ ಅವರು ಬೇಷರತ್ತಾಗಿ ಕ್ಷಮೆ ಯಾಚಿಸಬೇಕು‘ ಎಂದು ಆಗ್ರಹಿಸಿದ್ದಾರೆ.

ನಾಗಚೈತನ್ಯ
ನಾಗಚೈತನ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT