ನವದೆಹಲಿ: ಸಂಸತ್ತಿನಲ್ಲಿ ಗೃಹ ಸಚಿವಾಲಯ (ಎಂಎಚ್‌ಎ) ಮತ್ತು ರಕ್ಷಣಾ ಸಚಿವಾಲಯದ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಹಿಂದೇಟು ಹಾಕುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಯಾನ್ ವಾಗ್ದಾಳಿ ನಡೆಸಿದ್ದಾರೆ.
‘ಜೂನ್ 4ರ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಮೋದಿಯ 56 ಇಂಚಿನ ಎದೆಯ ಗಾತ್ರ ಇಳಿಕೆಯಾಗಿದೆ ಎಂಬುದು ಸ್ಪಷ್ಟ. ಗೃಹ ಇಲಾಖೆ, ರಕ್ಷಣಾ ಸಚಿವಾಲಯ ಸೇರಿದಂತೆ ನಾಲ್ಕು ಸಚಿವಾಲಯಗಳ ಕಾರ್ಯವೈಖರಿ ಕುರಿತ ಚರ್ಚೆಗೆ 15 ವಿರೋಧ ಪಕ್ಷಗಳು ಮನವಿ ಮಾಡಿದರೂ ಸರ್ಕಾರ ಚರ್ಚೆಗೆ ಸಿದ್ಧವಿಲ್ಲ. ಇದು ಪ್ರಧಾನಿ ಮೋದಿಯವರ ಚಡಪಡಿಕೆಯನ್ನು ತೋರಿಸುತ್ತದೆ’ ಎಂದು ಅವರು ಕಿಡಿಕಾರಿದ್ದಾರೆ.
ರಕ್ಷಣಾ ಸಚಿವಾಲಯದ ವಿಚಾರಕ್ಕೆ ಬರುವುದಾದರೇ ಭಾರತ–ಚೀನಾ ಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ವಿಪಕ್ಷಗಳು ಬಯಸಿದ್ದರೂ ಕೇಂದ್ರ ಸರ್ಕಾರ ಚರ್ಚೆಗೆ ಸಿದ್ಧವಿಲ್ಲ ಎಂದು ಅವರು ಗುಡುಗಿದ್ದಾರೆ.
‘ನರೇಂದ್ರ ಮೋದಿ ಅವರೇ, ನೀವು ಕೇವಲ ಗುಜರಾತ್ ಜಿಮ್ಖಾನಾವನ್ನು ನಡೆಸುತ್ತಿಲ್ಲ. ಬದಲಾಗಿ ರಾಷ್ಟ್ರವನ್ನು ಮುನ್ನಡೆಸುತ್ತಿದ್ದೀರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಯಾವುದೇ ವಿಚಾರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳವಾಗ ಚರ್ಚೆ ನಡೆಸುವ ಸಂಪ್ರದಾಯ ರೂಢಿಸಿಕೊಳ್ಳಿ’ ಎಂದು ಕುಟುಕಿದ್ದಾರೆ.
ಗೃಹ ಇಲಾಖೆ ಸೇರಿದಂತೆ ನಾಲ್ಕು ಸಚಿವಾಲಯಗಳ ಕಾರ್ಯವೈಖರಿ ಕುರಿತ ಚರ್ಚೆಗೆ ವಿರೋಧ ಪಕ್ಷಗಳು ಮಾಡಿದ್ದ ಜಂಟಿ ಹಕ್ಕೊತ್ತಾಯ ತಿರಸ್ಕೃತಗೊಂಡ ಬೆನ್ನಲ್ಲೇ ಅವರು ರಾಜ್ಯಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್ ಹಾಗೂ ಬಿಆರ್‌ಎಸ್ ಹೊರತುಪಡಿಸಿ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ 15 ಪಕ್ಷಗಳು ಮತ್ತು ಬಿಜೆಡಿ ಈ ಒತ್ತಾಯಕ್ಕೆ ಸಹಿ ಮಾಡಿದ್ದವು.