ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಲಿಂಪಿಕ್ಸ್ ತಂಡದೊಂದಿಗೆ ಮೋದಿ ಮಾತುಕತೆ: ಪಿಸ್ತೂಲ್ ಕುರಿತು ವಿವರಿಸಿದ ಮನು ಭಾಕರ್

ಹರ್ಮನ್ ಬಳಗದಿಂದ ಹಾಕಿ ಸ್ಟಿಕ್ ಉಡುಗೊರೆ
Published : 15 ಆಗಸ್ಟ್ 2024, 12:41 IST
Last Updated : 15 ಆಗಸ್ಟ್ 2024, 12:41 IST
ಫಾಲೋ ಮಾಡಿ
Comments

ನವದೆಹಲಿ: ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಿ ಬಂದ ಭಾರತದ ಕ್ರೀಡಾಪಟುಗಳಿಗೆ ಸ್ವಾತಂತ್ರ್ಯೋತ್ಸವ ದಿನವಾದ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ನಿವಾಸದಲ್ಲಿ ಸಂವಾದ ನಡೆಸಿದರು.  ಈ ಸಂದರ್ಭದಲ್ಲಿ ಮನು ಭಾಕರ್ ಅವರ ಪಿಸ್ತೂಲ್‌ ಕುರಿತು ವಿವರಣೆ ಆಲಿಸಿದ ಮೋದಿ ಅವರು, ಕಂಚು ಗೆದ್ದ ಹಾಕಿ ತಂಡದಿಂದ ಸ್ಪಿಕ್ ಕಾಣಿಕೆಯನ್ನೂ ಸ್ವೀಕರಿಸಿದರು. 

ಶೂಟಿಂಗ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್,  ಪಿಸ್ತೂಲ್ ಕಾರ್ಯನಿರ್ವಹಣೆಯ ಕುರಿತು  ವಿವರಿಸಿದರು. ಮೋದಿಯವರು ಮನು ಅವರ ಪದಕಗಳನ್ನೂ ತಮ್ಮ ಕೈಗೆ ತೆಗೆದುಕೊಂಡು ನೋಡಿದರು.  10 ಮೀ ಏರ್‌ ಪಿಸ್ತೂಲ್ ವಿಭಾಗದಲ್ಲಿ ಮನು ಅವರಿಗೆ ಪಾರ್ಟನರ್ ಆಗಿದ್ದ ಸರಬ್ಜೋತ್ ಸಿಂಗ್ ಅವರೊಂದಿಗೂ ಮೋದಿಯವರು ಮಾತನಾಡಿದರು.

ಪುರುಷರ 50 ಮಿ ತ್ರೀ ಪೊಸಿಷನ್ ರೈಫಲ್‌ನಲ್ಲಿ ಕಂಚು ಗೆದ್ದ ಸ್ವಪ್ನಿಲ್ ಕುಸಾಳೆ ಅವರೊಂದಿಗೂ ಕೆಲಹೊತ್ತು ಮಾತುಕತೆ ನಡೆಸಿದರು. ಪುರುಷರ 57 ಕೆ.ಜಿ. ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಜಯಿಸಿದ ಅಮನ್‌ ಸೆಹ್ರಾವತ್ ಅವರು ತಮ್ಮ ಹಸ್ತಾಕ್ಷರ ಇರುವ ಪೋಷಾಕನ್ನು ಮೋದಿಯವರಿಗೆ ಉಡುಗೊರೆ ನೀಡಿದರು.

ಸತತ ಎರಡನೇ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ ಭಾರತ ಪುರುಷರ ಹಾಕಿ ತಂಡದ ಎಲ್ಲ ಆಟಗಾರರು ಹಸ್ತಾಕ್ಷರ ಹಾಕಿದ ಸ್ಟಿಕ್ ಅನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರು ಮೋದಿಯವರಿಗೆ ಕಾಣಿಕೆ ನೀಡಿದರು.  ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಮತ್ತು ಸಹ ಆಟಗಾರರು ಈ ಸಂದರ್ಭದಲ್ಲಿ ಹಾಜರಿದ್ದರು.

ಆದರೆ ಬೆಳ್ಳಿ ಪದಕ ವಿಜೇತ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ಅವರು ಗೈರುಹಾಜರಾಗಿದ್ದರು. ನೀರಜ್ ಅವರು ಪ್ಯಾರಿಸ್‌ನಿಂದ ಜರ್ಮನಿಗೆ ತೆರಳಿದ್ದಾರೆ. ತಮ್ಮ ಗಾಯದ ಚಿಕಿತ್ಸೆಗಾಗಿ ಅವರು ಜರ್ಮನಿಯ ವೈದ್ಯರಿಂದ ಸಲಹೆ ಪಡೆಯಲಿದ್ದು ಕೆಲವು ದಿನಗಳ ನಂತರ ಭಾರತಕ್ಕೆ ಮರಳುವ ಸಾಧ್ಯತೆ ಇದೆ. 

ಈ ಬಾರಿ ಅಲ್ಪ ಅಂತರದಲ್ಲಿ ಪದಕ ಕೈತಪ್ಪಿಸಿಕೊಂಡ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್, ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಹಾಗೂ ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಅವರೊಂದಿಗೂ ಪ್ರಧಾನಿ ಮೋದಿಯವರು ಮಾತುಕತೆ ನಡೆಸಿರು. 

ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಮನ್ಸುಕ್ ಮಾಂಡವೀಯ ಮತ್ತು ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಪಿ.ಟಿ. ಉಷಾ ಹಾಜರಿದ್ದರು. 

ಈ ಸಮಾರಂಭಕ್ಕೂ ಮುನ್ನ ಭಾರತ ತಂಡದ ಕ್ರೀಡಾಪಟುಗಳು ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ‘ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳನ್ನು ಭೇಟಿಯಾಗಿರುವುದು ಸಂತಸ ನೀಡಿದ್ದು, ಅವರ ಅನುಭವ, ಕ್ರೀಡಾ ಕ್ಷೇತ್ರದಲ್ಲಿ ಅವರ ಸಾಧನೆಗಳನ್ನು ಕೇಳಿ ಶ್ಲಾಘಿಸಿರುವುದಾಗಿ’ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಪ್ಯಾರಿಸ್‌ಗೆ ಹೋದ ಪ್ರತಿಯೊಬ್ಬ ಆಟಗಾರನೂ ಚಾಂಪಿಯನ್. ಭಾರತ ಸರ್ಕಾರವು ಕ್ರೀಡೆಗಳನ್ನು ಬೆಂಬಲಿಸುವುದನ್ನು ಮುಂದುವರಿಸುತ್ತದೆ ಮತ್ತು ಉನ್ನತ ಗುಣಮಟ್ಟದ ಕ್ರೀಡಾ ಮೂಲಸೌಕರ್ಯವನ್ನು ನಿರ್ಮಿಸಲಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT