ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಬಳಕೆ ಇಳಿಕೆ: ಕೇಂದ್ರ ಆರೋಗ್ಯ ಸಚಿವಾಲಯ ಕಳವಳ

Last Updated 11 ಡಿಸೆಂಬರ್ 2021, 4:48 IST
ಅಕ್ಷರ ಗಾತ್ರ

ನವದೆಹಲಿ: ಜೂನ್‌ ಮತ್ತು ಡಿಸೆಂಬರ್‌ ನಡುವಣ ಅವಧಿಯಲ್ಲಿ ಜನರಲ್ಲಿ ಮಾಸ್ಕ್‌ ಧರಿಸುವ ಪ್ರವೃತ್ತಿ ಕಡಿಮೆ ಆಗಿರುವುದರ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ಕಳವಳ ವ್ಯಕ್ತಪಡಿಸಿದೆ. ಕೊರೊನಾ ವೈರಾಣು ರೂಪಾಂತರದ ಹೊಸ ತಳಿಯು ಕಾಣಿಸಿಕೊಂಡ ಸಂದರ್ಭದಲ್ಲಿ, ಮಾಸ್ಕ್‌ ಬಳಕೆ ಮತ್ತು ಲಸಿಕೆ ಹಾಕಿಸಿಕೊಳ್ಳುವಿಕೆಯ ಮಹತ್ವವನ್ನು ಸಚಿವಾಲಯವು ಮತ್ತೊಮ್ಮೆ ಸಾರಿದೆ.

ಜೂನ್‌ನಲ್ಲಿ ಶೇ 80ಕ್ಕೂ ಹೆಚ್ಚು ಜನರು ಮಾಸ್ಕ್‌ ಧರಿಸಿದ್ದರು. ಆದರೆ, ನವೆಂಬರ್‌ ಹೊತ್ತಿಗೆ ಶೇ 60ಕ್ಕಿಂತಲೂ ಕಡಿಮೆ ಜನರು ಮಾತ್ರ ಮಾಸ್ಕ್ ಬಳಸಿದ್ದರು ಎಂದು ವಾಷಿಂಗ್ಟನ್‌ನ ಇನ್ಸ್‌ಟಿಟ್ಯೂಟ್‌ ಆಫ್‌ ಹೆಲ್ತ್‌ ಮೆಟ್ರಿಕ್ಸ್‌ ಎಂಡ್‌ ಇವ್ಯಾಲುಯೇಷನ್‌ ಇತ್ತೀಚೆಗೆ ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿ ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್‌ ಹೇಳಿದ್ದಾರೆ. ಮಾಸ್ಕ್‌ ಧರಿಸುವ ಪ್ರವೃತ್ತಿಯು ಜುಲೈನಲ್ಲಿ ಕುಸಿಯಲು ಆರಂಭವಾಯಿತು. ಹೊಸ ರೂಪಾಂತರ ತಳಿ ಕಾಣಿಸಿಕೊಂಡರೂ ಮಾಸ್ಕ್‌ ಬಳಕೆ ಹೆಚ್ಚಲಿಲ್ಲ.

‘ನಾವು ಅಪಾಯದ ವಲಯವನ್ನು ಪ್ರವೇಶಿಸಿದ್ದೇವೆ. ಮಾಸ್ಕ್‌ ಧರಿಸುವಿಕೆಯು ಸ್ವೀಕಾರಾರ್ಹವೇ ಅಲ್ಲದ ಕೆಳ ಮಟ್ಟಕ್ಕೆ ಕುಸಿದಿದೆ. ಎರಡನೇ ಅಲೆ ತೀವ್ರಗೊಳ್ಳುವುದಕ್ಕಿಂತ ಹಿಂದೆ ಇದ್ದ ಸ್ಥಿತಿಗೆ ತಲುಪಿದ್ದೇವೆ’ ಎಂದು ಪಾಲ್‌ ಹೇಳಿದ್ದಾರೆ. ಕೋವಿಡ್‌–19ಕ್ಕೆ ಸಂಬಂಧಿಸಿ ಸರ್ಕಾರದ ಪ್ರಧಾನ ಸಲಹೆಗಾರರಲ್ಲಿ ಪಾಲ್‌ ಅವರೂ ಒಬ್ಬರು.

ಬಾಂಗ್ಲಾದೇಶದ ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್‌ ಬಳಕೆಯ ಕುರಿತ ಅಧ್ಯಯನವನ್ನು ಇತ್ತೀಚೆಗೆ ನಡೆಸಲಾಗಿತ್ತು. ಅಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಜನರು ಮಾಸ್ಕ್‌ ಧರಿಸುವುದನ್ನು ಹೆಚ್ಚಿಸಿದ್ದರಿಂದ ಕೋವಿಡ್‌ ಹರಡುವಿಕೆ ಕಡಿಮೆಯಾಗಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿತ್ತು.

ಬಾಂಗ್ಲಾದೇಶದ 600 ಗ್ರಾಮಗಳ 3.4 ಲಕ್ಷ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. 2020ರ ನವೆಂಬರ್‌ನಿಂದ 2021ರ ಏಪ್ರಿಲ್‌ ಅವಧಿಯಲ್ಲಿ ಸಮೀಕ್ಷೆ ನಡೆದಿತ್ತು.

ಭಾರತದದಲ್ಲಿ ಮಾಸ್ಕ್‌ ಬಳಕೆ ಕಡಿಮೆ ಆದದ್ದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ 2020ರ ಡಿಸೆಂಬರ್‌ನಲ್ಲಿ ಕಳವಳ ವ್ಯಕ್ತಪಡಿಸಿತ್ತು. ಲಸಿಕೆ ಹಾಕಿಸುವಿಕೆ ಹೆಚ್ಚಾಗಿದ್ದರೂ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಮಾಸ್ಕ್‌ ಬಳಕೆ ಕಡಿಮೆ ಆಗಿದೆ ಎಂದು ಹೇಳಿತ್ತು.

ಓಮೈಕ್ರಾನ್‌ ವಿರುದ್ಧ ಲಸಿಕೆ: ಐಸಿಎಂಆರ್‌ ಅಧ್ಯಯನ
ಓಮೈಕ್ರಾನ್‌ ತಳಿಯ ವಿರುದ್ಧ ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳು ಪರಿಣಾಮಕಾರಿಯೇ ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್‌) ಅಧ್ಯಯನ ನಡೆಸುತ್ತಿದೆ. ‘ರಾಷ್ಟ್ರೀಯ ವೈರಾಣು ಸಂಸ್ಥೆಯು ಪ್ರಯೋಗಾಲಯದಲ್ಲಿ ಓಮೈಕ್ರಾನ್‌ ವೈರಾಣು ತಳಿಯನ್ನು ಸೃಷ್ಟಿಸಲು ಯತ್ನಿಸುತ್ತಿದೆ. ವೈರಾಣು ಸೃಷ್ಟಿಯಾದರೆ, ಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಪರಿಣಾಮಕಾರಿಯೇ ಎಂಬುದನ್ನು ಕಂಡುಕೊಳ್ಳಬಹುದು’ ಎಂದು ಐಸಿಎಂಆರ್‌ ಮಹಾ ನಿರ್ದೇಶಕ ಬಲರಾಂ ಭಾರ್ಗವ ಹೇಳಿದ್ದಾರೆ.

ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್‌ ನೀಡಿಕೆ ಮತ್ತು ಮಕ್ಕಳಿಗೆ ಕೋವಿಡ್‌ ಲಸಿಕೆ ಹಾಕಿಸುವಿಕೆಯ ಬಗ್ಗೆ ಯಾವುದೇ ನಿರ್ಧಾರ ಇನ್ನೂ ಆಗಿಲ್ಲ ಎಂದು ಪಾಲ್‌ ಮತ್ತು ಭಾರ್ಗವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT