ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈ: ಕ್ಯಾಬ್‌ನಲ್ಲಿ ಬಿಟ್ಟುಹೋಗಿದ್ದ ₹25 ಲಕ್ಷದ ಚಿನ್ನಾಭರಣ ಮರಳಿ ಪಡೆದ ಕುಟುಂಬ

Published 16 ಆಗಸ್ಟ್ 2024, 8:03 IST
Last Updated 16 ಆಗಸ್ಟ್ 2024, 8:03 IST
ಅಕ್ಷರ ಗಾತ್ರ

ಮುಂಬೈ: ಇಲ್ಲಿನ ಕುಟುಂಬವೊಂದು ಕ್ಯಾಬ್‌ನಲ್ಲಿ ಬಿಟ್ಟುಹೋಗಿದ್ದ ಸುಮಾರು ₹ 25 ಲಕ್ಷ ಮೌಲ್ಯದ ಚಿನ್ನವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ.

ಚಿನ್ನ ಇದ್ದ ಬ್ಯಾಗ್‌ ಕಳೆದುಕೊಂಡಿರುವುದಾಗಿ ಉದ್ಯಮಿ ನಜೀರ್‌ ಉಲ್‌ ಹಸನ್‌ ಎಂಬವರು ಒಶಿವಾರ ಪೊಲೀಸ್ ಠಾಣೆಗೆ ಆಗಸ್ಟ್‌ 10ರಂದು ದೂರು ನೀಡಿದ್ದರು.

'ಹಸನ್‌ ಅವರ ಕುಟುಂಬ ಪಾಲ್ಘರ್‌ ಜಿಲ್ಲೆಯ ವಸೈನಿಂದ ಜೋಗೇಶ್ವರಿಗೆ ಆಗಸ್ಟ್ 9ರಂದು ಉಬರ್‌ ಕ್ಯಾಬ್‌ನಲ್ಲಿ ಪ್ರಯಾಣಿಸಿತ್ತು. ಅಲ್ಲಿನ ಆದರ್ಶ ನಗರದಲ್ಲಿ ಇಳಿದ ನಂತರ ತಮ್ಮ ಬ್ಯಾಗ್‌ಗಳನ್ನು ತೆಗೆದುಕೊಂಡಿದ್ದರು. ಆದರೆ, ಒಂದು ಬ್ಯಾಗ್‌ ಕಾರಿನಲ್ಲೇ ಉಳಿದಿರುವುದು ಸ್ವಲ್ಪಹೊತ್ತಿನ ಬಳಿಕ ಗೊತ್ತಾಗಿತ್ತು. ಕೂಡಲೇ ಚಾಲಕನಿಗೆ ಕರೆ ಮಾಡಿ ತಿಳಿಸಿದ್ದರಾದರೂ, ಆತ ಸರಿಯಾಗಿ ಸ್ಪಂದಿಸಲಿಲ್ಲ. ನಂತರ ಕರೆ ಸ್ವೀಕರಿಸುವುನ್ನೂ ನಿಲ್ಲಿಸಿದ್ದ' ಎಂದು ಹಸನ್‌ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

'ತನಿಖೆಯ ಭಾಗವಾಗಿ, ಕ್ಯಾಬ್ ಚಾಲಕನ ಹೆಂಡತಿಯನ್ನು ಫೋನ್ ಮೂಲಕ ಸಂಪರ್ಕಿಸಿದೆವು. ಆಗ ಅವರು ಬ್ಯಾಗ್‌ ತಮ್ಮ ಬಳಿ ಇರುವುದಾಗಿ ಒಪ್ಪಿಕೊಂಡರು. ನಂತರ, ವಸೈನಲ್ಲಿರುವ ಆಕೆಯ ಮನೆಗೆ ತೆರಳಿ ₹ 25 ಲಕ್ಷ ಮೌಲ್ಯದ 350 ಗ್ರಾಂ ಚಿನ್ನಾಭರಣ ಇದ್ದ ಬ್ಯಾಗ್‌ ಅನ್ನು ವಶಕ್ಕೆ ಪಡೆದು, ಹಸನ್‌ ಅವರಿಗೆ ಹಸ್ತಾಂತರಿಸಿದ್ದೇವೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT