‘ಓ ಪಾಪ ಲಾಲಿ... ಜನ್ಮಕೆ ಲಾಲಿ ಪ್ರೇಮಕೆ ಲಾಲಿ...’ ಎಂಬ ತೆಲುಗು ಉಲಿ ಚಿಣ್ಣರಿಂದ ಚೆನ್ನರವರೆಗಿನವರಿಗೆ ಲಾಲಿಯೇ. ‘ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೇಕೆ...’ ಎನ್ನುತ್ತಾ ಕಣ್ಣಲ್ಲೇ ಕಾಳುಹಾಕುವ ಪಡ್ಡೆಗಳು ಇಂದಿಗೂ ಇದ್ದಾರೆ. ‘ಮೇರೆ ರಂಗ್ ಮೇ ರಂಗನೆವಾಲಿ ಪರೀ ಹೋ ಯಾಹೋ...’ ಎಂದು ಕಣ್ಣುಗಳ ಸಣ್ಣಮಾಡಿ ನಾಯಕಿಯ ಮುದ್ದುಮಾಡಿದ ಹಿಂದಿ ನಟ ಸಲ್ಮಾನ್ ಖಾನ್ ಮುಖ ಮರೆಯದ ಮನಸ್ಸುಗಳು ಅಸಂಖ್ಯ. ‘ಕಾದಲ್ ರೋಜಾವೇ’ ಎಂಬ ರೋಜಾ ತಮಿಳು ಸಿನಿಮಾದ ಹಾಡಿನ ಪಲುಕುಗಳು ಎದೆತಂತಿಯ ಮೀಟದಿರಲು ಸಾಧ್ಯವೇ?

ಹೀಗೆ ಸಂದರ್ಭಗಳಿಗೆ ಒಗ್ಗಿಸುತ್ತಾ ಹಾಡುಗಳ ಪಟ್ಟಿ ಮಾಡುತ್ತಾ ಹೋದರೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಪದೇ ಪದೇ ಕಾಡತೊಡಗುತ್ತಾರೆ. ಸಿನಿಮಾ ಜನಪ್ರಿಯ ಸಂಗೀತದ ಚಾವಡಿಯಲ್ಲಿ ಎಸ್‌ಪಿಬಿ ಎನ್ನುವುದು ಒಂದು ಕೇಂದ್ರಬಿಂದು. 1960ರ ದಶಕದಿಂದ 2020ರ ವರೆಗಿನ ಸುದೀರ್ಘಾವಧಿಯ ಅವರ ಗಾಯನಪಯಣವೀಗ ಮುಗಿದಿದೆ. ಭೌತಿಕವಾಗಿ ಅವರಿಲ್ಲ; ಹಾಡುಗಳ ಮೂಲಕ ಸದಾ ಬದುಕಲಿದ್ದಾರೆ.

ಎಸ್‌ಪಿಬಿ, ಎಸ್.ಪಿ. ಬಾಲು, ಬಾಲು ಎಂದೆಲ್ಲ ಅಭಿಮಾನಿಗಳಿಂದ ಕರೆಸಿಕೊಂಡ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ 1946ರ ಜೂನ್ 4ರಂದು ಆಂಧ್ರದ ನೆಲ್ಲೂರಿನಲ್ಲಿ ಹುಟ್ಟಿದ್ದು. ತಂದೆ ಎಸ್.ಪಿ. ಸಾಂಬಮೂರ್ತಿ; ರಂಗಭೂಮಿಯ ನಂಟೂ ಇದ್ದವರು. ತಾಯಿ ಶಕುಂತಲಮ್ಮ ಸಹೃದಯಿ. ಐವರು ಸೋದರಿಯರು, ಇಬ್ಬರು ಸೋದರರ ತುಂಬು ಕುಟುಂಬದಲ್ಲಿ ಎಸ್.ಪಿ.ಬಿ ಸಂಸ್ಕಾರದಲ್ಲಿ ಅದ್ದಿ ತೆಗೆದಂತೆ ಬೆಳೆದರು. ಪತ್ನಿ ಸಾವಿತ್ರಿ, ಮಗಳು ಪಲ್ಲವಿ, ಮಗ ಎಸ್.ಪಿ.ಚರಣ್ ಕೂಡ ಗಾಯಕ.

ಅನಂತಪುರದ ಜೆಎನ್‌ಟಿವಿ ಎಂಜಿನಿಯರಿಂಗ್ ಕಾಲೇಜಿಗೆ ಸೇರುವವರೆಗೂ ಒಂದು ಮಟ್ಟಕ್ಕೆ ಕುಡುಮಿಯಂತೆಯೇ ಇದ್ದ ಬಾಲು, ದಿಢೀರನೆ ಓದಿಗೆ ತಿಲಾಂಜಲಿ ಇಡಲು ನಿರ್ಧರಿಸಿದ್ದು ಅಚ್ಚರಿ. ಬಾಲ್ಯದಿಂದಲೂ ಪ್ರೀತಿಸುತ್ತಿದ್ದ ಗಾನ ಸರಸ್ವತಿ ಅವರನ್ನು ನಿದ್ದೆಯಲ್ಲೂ ಎಬ್ಬಿಸುತ್ತಿದ್ದಳು.

‘ಗಾನಲೋಕದ ಬಾಲಕ’: 1964ರಲ್ಲಿ ಮದ್ರಾಸ್‌ನ ತೆಲುಗು ಸಾಂಸ್ಕೃತಿಕ ಸಂಘವೊಂದು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಹಾಡಿ ಮೊದಲ ಬಾರಿಗೆ ಬಹುಮಾನ ಪಡೆದರು ಬಾಲು. ಸಂಗೀತದಿಗ್ಗಜರೆನಿಸಿದ್ದ ಎಸ್.ಪಿ.ಕೋದಂಡಪಾಣಿ ಹಾಗೂ ಘಂಟಸಾಲ ತೀರ್ಪುಗಾರರಾಗಿದ್ದ ಇನ್ನೊಂದು ಪ್ರಮುಖ ಸ್ಪರ್ಧೆಯಲ್ಲಿ ಗೆದ್ದಮೇಲೆ ಈ ಗಾನಪ್ರತಿಭೆಯ ಮೇಲೆ ಕೆಲವರ ದೃಷ್ಟಿ ಹರಿಯಿತು. ಹಾಗೆಂದು ಸಿನಿಮಾಗೆ ಹಾಡುವ ಅವಕಾಶಗಳೇನೂ ಸಿಗಲಿಲ್ಲ. ಅವರಿವರ ಬಳಿಗೆ ಎಡತಾಕಿ ಅವಕಾಶಕ್ಕಾಗಿ ಅಂಗಲಾಚಿದ್ದೇ ಬಂತು. ‘ನಿಲವೆ ಎನ್ನಿಡಂ ನೇರುಂಗಡೆ’ ಎಂಬ ತಮಿಳು ಹಾಡಿಗೆ ಮೊದಲು ಎಸ್‌ಪಿಬಿ ಆಡಿಷನ್ ಕೊಟ್ಟದ್ದು. ಆ ಹಾಡನ್ನು ಪಿ.ಬಿ. ಶ್ರೀನಿವಾಸ್ ಹಾಗೂ ಪಿ. ಸುಶೀಲಾ ಸುಮಧುರವಾಗಿ ಹಾಡಿದರು. ಅದನ್ನು ಕೇಳಿದಮೇಲೆ ಬಾಲು ತಾನಿನ್ನೂ ಗಾನಲೋಕದ ಬಾಲಕ ಎಂದು ಆಪ್ತರಲ್ಲಿ ಹೇಳಿಕೊಂಡಿದ್ದು ಅವರ ವಿನಯಕ್ಕೆ ಹಿಡಿದ ಕನ್ನಡಿ.

‘ಶ್ರೀ ಶ್ರೀ ಮರ್ಯಾದಾರಾಮಣ್ಣ’ ತೆಲುಗು ಸಿನಿಮಾದ ‘ಹರಿಹರ ನಾರಾಯಣೋ’ ಎಸ್ಪಿ ಹಿನ್ನೆಲೆ ಗಾಯಕರಾದ ಮೊದಲ ಗೀತೆ. ಎಸ್.ಪಿ. ಕೋದಂಡಪಾಣಿ ಅವರೇ ಸಂಯೋಜಿಸಿದ್ದ ಹಾಡು ಅದು. ಅದಾಗಿ ಎಂಟೇ ದಿನಗಳಲ್ಲಿ ‘ನಕ್ಕರೆ ಅದೇ ಸ್ವರ್ಗ’ ಕನ್ನಡ ಸಿನಿಮಾ ಗೀತೆಯನ್ನೂ ಹಾಡುವ ಅವಕಾಶ ಒಲಿದುಬಂತು. ಪಿ. ಸುಶೀಲಾ ಜತೆಗೆ ಮೊದಮೊದಲು ಎಸ್ಪಿಬಿ ಡ್ಯುಯೆಟ್‌ಗಳನ್ನು ಹಾಡಿದರು.

ಇಳಯರಾಜಾ ಸ್ವರ ಸಂಯೋಜಕರಾಗಿ ಚಿತ್ರರಂಗಕ್ಕೆ ಕಾಲಿಡುವ ಮೊದಲೇ ಎಸ್ಪಿಬಿ ಅಲ್ಲಿ ಗುರುತಾಗಿದ್ದರು. ಆದರೆ, ಇಬ್ಬರಿಗೂ ಅದಕ್ಕೂ ಮೊದಲೇ ಪರಿಚಯ. ಲಘು ಸಂಗೀತದ ತಂಡದಲ್ಲಿ ಬಾಲು ಹಾಡಿದರೆ, ಇಳಯರಾಜಾ ಹಾರ್ಮೋನಿಯಂ ಅಥವಾ ಗಿಟಾರ್ ನುಡಿಸುತ್ತಿದ್ದರು. ಇಳಯರಾಜಾ ಸಂಯೋಜನೆಗೆ ಇಳಿದ ಮೇಲೆ 1970–80ರ ದಶಕದಲ್ಲಿ ಸಾಕಷ್ಟು ಹಿಟ್ ಗೀತೆಗಳು ಇಬ್ಬರ ಕಾಂಬಿನೇಷನ್‌ನಲ್ಲಿ ಹೊಮ್ಮಿದವು. ಎಸ್. ಜಾನಕಿ ಅಮ್ಮನ ಕಂಠಮಾಧುರ್ಯ ಜತೆಗಿದ್ದುದು ಬೋನಸ್ಸು. ‘ಸಾಗರ ಸಂಗಮಂ’ (ತಕಿಟ ತಧಿಮಿ, ನಾದವಿನೋದಮು), ‘ಸ್ವಾತಿ ಮುತ್ಯಂ’ (ಸುವ್ವಿ ಸುವ್ವಿ ಸುವ್ವಾಲಮ್ಮ), ‘ರುದ್ರವೀಣ’ ಎಲ್ಲ ಸಿನಿಮಾಗೀತೆಗಳಲ್ಲೂ ಬಾಲು ಕಂಠದ ರುಜು.

ಸ್ವರ ಸಂಯೋಜಕ ಉಪೇಂದ್ರಕುಮಾರ್ ಮೊದಲು ಕನ್ನಡ ಚಿತ್ರಗೀತೆಗಳಲ್ಲಿ ಬಾಲು ಕಂಠವನ್ನು ಭದ್ರವಾಗಿ ಹಿಡಿದುಕೊಂಡರು. 1981ರ ಫೆಬ್ರುವರಿ 8ರಂದು ಒಂದೇ ದಿನ 21 ಹಾಡುಗಳನ್ನು ಅವರು ಬಾಲು ಕಂಠದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು ‘ರೆಕಾರ್ಡೇ’. ತಮಿಳಿನಲ್ಲೂ ಒಂದೇ ದಿನ 16 ಹಾಡುಗಳನ್ನು ರೆಕಾರ್ಡ್ ಮಾಡಿದ ಎಸ್ಪಿಬಿ, ಹಿಂದಿ ಸಿನಿಮಾರಂಗಕ್ಕೆ ಕಾಲಿಟ್ಟಮೇಲೆ ಅಲ್ಲೂ ಒಂದೇ ದಿನ 16 ಗೀತೆಗಳಿಗೆ ದನಿ ನೀಡಿ, ನಡುರಾತ್ರಿ ವಿಮಾನ ಹತ್ತಿಕೊಂಡು ಮುಂಬೈನಿಂದ ಚೆನ್ನೈಗೆ ಮರಳಿದ್ದರು.

ಕನ್ನಡದಲ್ಲಿ ಆಮೇಲೆ ಬಾಲು ಕಂಠಕ್ಕೆ ಸುವರ್ಣ ಚೌಕಟ್ಟು ತೊಡಿಸಿದ್ದು ಹಂಸಲೇಖ. ‘ಪ್ರೇಮಲೋಕ’ ಸಿನಿಮಾ ಬಂದ ನಂತರ ‘ಹಂಸ’ತೂಲಿಕ ತಲ್ಪದ ಮೇಲೆ ಬಾಲು ಭಾವಪಯಣ ಸಲೀಸಾಗಿ ವರ್ಷಗಟ್ಟಲೆ ಸಾಗಿತು. ವಿಷ್ಣುವರ್ಧನ್, ಶಂಕರ್‌ನಾಗ್‌ಗೆ ಒಂದು ರೀತಿ, ಅಂಬರೀಷ್‌ಗೆ ಇನ್ನೊಂದು ರೀತಿ ದನಿ ಬದಲಿಸಿ ಹಾಡುತ್ತಿದ್ದ ಎಸ್ಪಿಬಿ, ರವಿಚಂದ್ರನ್ ತುಂಟತನದ ರುಜುವಿನೊಟ್ಟಿಗೂ ಬೆರೆತದ್ದು ಸೋಜಿಗ. ‘ಕೂರಕ್ ಕುಕ್ರಳ್ಳಿ ಕೆರೆ’ ಎಂದು ಹದಿಹರೆಯದ ಈ ಕಾಲದ ಹುಡುಗರೂ ಕಾಲಾಡಿಸುವಂತೆ ಮಾಡಿದ ಕಂಠ ಅವರದ್ದು.

ಆನಂದ್–ಮಿಲಿಂದ್ ಹಿಂದಿ ಚಿತ್ರರಂಗದಲ್ಲಿ ಅವರನ್ನು ಮೆರೆಸಿದರು. ‘ಏಕ್ ದೂಜೆ ಕೇ ಲಿಯಾ’ ಚಿತ್ರದ ‘ಮೇರೆ ಜೀವನ್ ಸಾಥಿ’ ಗೀತೆ ಬಾಲುವಿನದ್ದೇ ಸ್ಥಾಯಿಯ ಸಾಕ್ಷ್ಯ. ‘ಮೈನೆ ಪ್ಯಾರ್ ಕಿಯಾ’ದ ಬಹುತೇಕ ಗೀತೆಗಳು, ‘ಹಮ್ ಆಪ್ಕೆ ಹೈ ಕೌನ್’ನ ‘ದಿಲ್ ದೀವಾನ ಬಿನ್ ಸಜ್ನಾ ಕೆ’ ಹಾಡುಗಳು ಮರೆಯಲಾರದಂಥವು. ಇವೆಲ್ಲವುಗಳ ಸುದೀರ್ಘ ಪಯಣದ ನಂತರ, ಎ.ಆರ್. ರೆಹಮಾನ್ ಅವರ ಧ್ವನಿಸ್ಪಷ್ಟತೆಗೆ ವಾದ್ಯಸಂಯೋಜನೆಯ ಇನ್ನೊಂದು ಮೆರುಗು ಕೊಟ್ಟರು.

‘ಶಂಕರಾಭರಣಂ’ ತೆಲುಗು ಸಿನಿಮಾಗೆ ಸ್ವರ ಸಂಯೋಜಿಸಿದ ಮಹದೇವನ್, ಬಾಲು ಒಳಗಿದ್ದ ಶಾಸ್ತ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಆ ಸಿನಿಮಾ ಹಾಡುಗಳು ಹಿಟ್ ಆಗಿದ್ದರಿಂದ ಅನೇಕ ಶಾಸ್ತ್ರೀಯ ರಾಗದ ಚಿತ್ರಗೀತೆಗಳು ಹೊಮ್ಮಿದವು. ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರದ ‘ಉಮಂಡು ಘುಮಂಡು’ ಹಿಂದೂಸ್ತಾನಿ ರಾಗ ಆಧರಿಸಿದ ಹಾಡು ಬಾಲು ಕಂಠದ ರೇಂಜ್‌ಗೆ ಉದಾಹರಣೆ. ಅದಕ್ಕೆ ರಾಷ್ಟ್ರಪ್ರಶಸ್ತಿಯೂ ಒಲಿಯಿತು.

ಹದಿನಾರು ಭಾಷೆಗಳು, ನಲುವತ್ತುಸಾವಿರಕ್ಕೂ ಹೆಚ್ಚು ಹಾಡುಗಳು, ಆರು ರಾಷ್ಟ್ರಪ್ರಶಸ್ತಿಗಳು, 25 ನಂದಿ–6 ಫಿಲ್ಮ್‌ಫೇರ್ ಪ್ರಶಸ್ತಿ ಇವೆಲ್ಲವುಗಳೂ ಅವರ ಬುಟ್ಟಿಗೆ ಸಂದವು. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕಾರಗಳು ಒಲಿದವು. 2016ರಲ್ಲಿ ಭಾರತೀಯ ಚಿತ್ರರಂಗದ ವರ್ಷದ ಶ್ರೇಷ್ಠ ವ್ಯಕ್ತಿ ಗೌರವವೂ ಸಂದಿತು.

ಡಬ್ಬಿಂಗ್ ಕಲಾವಿದರೂ ಆಗಿದ್ದ ಬಾಲು, ಕಮಲ ಹಾಸನ್, ರಜನೀಕಾಂತ್, ವಿಷ್ಣುವರ್ಧನ್, ಅನಿಲ್ ಕಪೂರ್, ಭಾಗ್ಯರಾಜ್, ಅರ್ಜುನ್ ಸರ್ಜಾ, ರಘುನಂದನ್ ಮೊದಲಾದ ನಟರ ಸಿನಿಮಾಗಳು ಅನ್ಯಭಾಷೆಗಳಿಗೆ ಡಬ್ ಆದಾಗ ಕಂಠದಾನ ಮಾಡಿದ್ದಾರೆ.

ದೇವ ಅವರು ಸ್ವರ ಸಂಯೋಜನೆ ಮಾಡಿದ್ದ ‘ಅಮೃತ ವರ್ಷಿಣಿ’ ಸಿನಿಮಾದಲ್ಲಿನ ‘ಈ ಸುಂದರ ಬೆಳದಿಂಗಳ’ ಹಾಡಾಗಲೀ, ‘ನೀನು ನೀನೇ ಇಲ್ಲಿ ನಾನು ನಾನೇ’ ಎಂಬ ಶಾಸ್ತ್ರೀಯ ಗೀತೆಯಾಗಲೀ, ‘ನಾ ಹಾಡಲು ನೀವು ಆಡಬೇಕು’ ಎಂಬ ಕುಣಿಸುವ ಭಾವಗೀತೆಯಾಗಲೀ, ‘ಪ್ರೇಮದ ಹೂಗಾರ’ ತತ್ತ್ವಪದವಾಗಲೀ... ಕೇಳಿದರೆ ಬಾಲು ಬದುಕಿರುವುದು ಸತ್ಯವೆನ್ನಿಸುತ್ತದೆ. ‘ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ’ ಎಂದು ಅವರೇ ಅಲ್ಲವೇ ಹಾಡಿದ್ದು...ಅವರು ಹೀಗೆ ಕಂಠದ ನೆನಪಿನ ಮೂಲಕ ಬದುಕಿಯೇ ಇದ್ದಾರೆ.

ದಾಖಲೆ: ಸ್ವರ ಸಂಯೋಜಕ ಉಪೇಂದ್ರಕುಮಾರ್ ಮೊದಲು ಕನ್ನಡ ಚಿತ್ರಗೀತೆಗಳಲ್ಲಿ ಬಾಲು ಕಂಠವನ್ನು ಭದ್ರವಾಗಿ ಹಿಡಿದುಕೊಂಡರು. 1981ರ ಫೆಬ್ರುವರಿ 8ರಂದು ಒಂದೇ ದಿನ 21 ಹಾಡುಗಳನ್ನು ಅವರು ಬಾಲು ಕಂಠದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು ‘ರೆಕಾರ್ಡೇ’. ತಮಿಳಿನಲ್ಲೂ ಒಂದೇ ದಿನ 16 ಹಾಡುಗಳನ್ನು ರೆಕಾರ್ಡ್ ಮಾಡಿದ ಎಸ್ಪಿಬಿ , ಹಿಂದಿ ಸಿನಿಮಾರಂಗಕ್ಕೆ ಕಾಲಿಟ್ಟಮೇಲೆ ಅಲ್ಲೂ ಒಂದೇ ದಿನ 16 ಗೀತೆಗಳಿಗೆ ದನಿ ನೀಡಿ, ನಡುರಾತ್ರಿ ವಿಮಾನ ಹತ್ತಿಕೊಂಡು ಮುಂಬೈನಿಂದ ಚೆನ್ನೈಗೆ ಮರಳಿದ್ದರು.

ಇನ್ನಷ್ಟು...

*ಕನ್ನಡ, ತೆಲುಗು, ತಮಿಳಿನ 75 ಸಿನಿಮಾಗಳಿಗೆ ಬಣ್ಣ ಹಚ್ಚಿದ್ದ ಎಸ್ಪಿಬಿ

*Photos: ಕನ್ನಡ ನಾಡಿನಲ್ಲಿ ಗಾಯಕ ಎಸ್ಪಿಬಿ

*ಕನ್ನಡದಲ್ಲಿ 4 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾದ ಎಸ್ಪಿಬಿ

*ಗಾಯನ ಕ್ಷೇತ್ರದ ದಿಗ್ಗಜ ಎಸ್. ಪಿ. ಬಾಲಸುಬ್ರಹ್ಮಣ್ಯಂ ನಿಧನ

*ಹುಬ್ಬಳ್ಳಿಯಲ್ಲಿ ಎಸ್ಪಿಬಿ ಕೇಳಿದ ಪ್ರಶ್ನೆ: 'ನನ್ನನ್ನೇಕೆ ಇಷ್ಟು ಪ್ರೀತಿಸ್ತೀರಿ'

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.