ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಸೇನಾ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ?

ವಿರೋಧ ಪಕ್ಷಗಳ ಸುಳಿವು: ಊಹಾಪೋಹಗಳನ್ನು ತಳ್ಳಿ ಹಾಕಿದ ಆಡಳಿತಾರೂಢ ಸರ್ಕಾರ
Published 24 ಏಪ್ರಿಲ್ 2023, 14:34 IST
Last Updated 24 ಏಪ್ರಿಲ್ 2023, 14:34 IST
ಅಕ್ಷರ ಗಾತ್ರ

ಮುಂಬೈ: ‘ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ–ಶಿವಸೇನಾ ಮೈತ್ರಿ ಸರ್ಕಾರದಲ್ಲಿ ಸದ್ಯದಲ್ಲೇ ನಾಯಕತ್ವ ಬದಲಾವಣೆಯಾಗಲಿದೆ’ ಎಂದು ವಿರೋಧ ಪಕ್ಷಗಳು ಸೋಮವಾರ ಸುಳಿವು ನೀಡಿವೆ. 

ಏಕನಾಥ ಶಿಂದೆ ನೇತೃತ್ವದ ಆಡಳಿತಾರೂಢ ಸರ್ಕಾರವು ಈ ಊಹಾಪೋಹಗಳನ್ನು ತಳ್ಳಿ ಹಾಕಿದ್ದು, ಸರ್ಕಾರ ಸುಭದ್ರವಾಗಿದೆ ಎಂದು ಪ್ರತಿಪಾದಿಸಿದೆ. 

ತಮ್ಮ ಬೆಂಬಲಿಗ ಶಾಸಕರೊಂದಿಗೆ ಶಿವಸೇನಾ ತೊರೆದಿದ್ದ ಶಿಂದೆ ಅವರು ಬಿಜೆಪಿ ಜೊತೆ ಕೈಜೋಡಿಸಿದ್ದರು. ಆ ಮೂಲಕ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ಬಳಿಕ ಬಿಜೆಪಿ–ಸೇನಾ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿತ್ತು. ಆಗ ಶಿಂದೆ ಮುಖ್ಯಮಂತ್ರಿ ಗಾದಿ ಏರಿದ್ದರು. ಬಿಜೆಪಿಯ ದೇವೇಂದ್ರ ಫಡಣವೀಸ್‌ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 

ಮೈತ್ರಿ ಸರ್ಕಾರ ರಚನೆಯಾಗಿ ಸುಮಾರು 10 ತಿಂಗಳು ಕಳೆದಿದ್ದು, ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಹರಿದಾಡುತ್ತಿದೆ.  

ಶಿಂದೆ ಹಾಗೂ ಫಡಣವೀಸ್‌ ಸರ್ಕಾರವು ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯವೇ ನಾಯಕತ್ವ ಬದಲಾವಣೆಯಾಗಲಿದೆ ಎಂದು ಶಿವಸೇನಾ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ ಬಣ) ಸಂಸದ ಸಂಜಯ್‌ ರಾವುತ್‌ ಕೆಲ ದಿನಗಳಿಂದ ಹೇಳುತ್ತಲೇ ಇದ್ದಾರೆ. 

‘ಇನ್ನು 15–20 ದಿನಗಳಲ್ಲಿ ಶಿಂದೆ ನೇತೃತ್ವದ ಸರ್ಕಾರ ಪತನಗೊಳ್ಳಲಿದೆ. ಈ ಸರ್ಕಾರದ ‘ಡೆತ್‌ ವಾರಂಟ್‌’ ಕೂಡ ಹೊರಡಿಸಲಾಗಿದೆ. ಅದಕ್ಕೆ ಯಾರು ಸಹಿ ಮಾಡುತ್ತಾರೆ ಎಂಬುದಷ್ಟೇ ನಿರ್ಧಾರವಾಗಬೇಕಿದೆ’ ಎಂದು ರಾವುತ್‌ ಹೇಳಿದ್ದಾರೆ.

‘ಈ ಸರ್ಕಾರದಲ್ಲಿ ಮುಂದುವರಿಯುವುದಕ್ಕೆ ಬಿಜೆಪಿಗೆ ಆಸಕ್ತಿ ಇಲ್ಲ. ಈ ಸರ್ಕಾರದಿಂದಾಗಿ ಆ ಪಕ್ಷದ ಘನತೆಗೆ ಕುಂದುಂಟಾಗಿದೆ. ಮುಖ್ಯಮಂತ್ರಿ ಬದಲಾವಣೆಯ ಬೆನ್ನಲ್ಲೇ ಸರ್ಕಾರವೂ ಬದಲಾಗಲಿದೆ’ ಎಂದು ತಿಳಿಸಿದ್ದಾರೆ.

‘ಶಿಂದೆ ಸೇರಿದಂತೆ 16 ಬಂಡಾಯ ಶಾಸಕರ ಅನರ್ಹತೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿದೆ. ನ್ಯಾಯಾಲಯವು ಬಂಡಾಯ ಶಾಸಕರನ್ನು ಅನರ್ಹಗೊಳಿಸಿದರೆ ಆಡಳಿತಾರೂಢ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ’ ಎಂದು ಎನ್‌ಸಿಪಿ ಹಿರಿಯ ನಾಯಕ ಛಗನ್‌ ಭುಜಬಲ್‌ ಹೇಳಿದ್ದಾರೆ.

‘ಶಿಂದೆ ಹಾಗೂ ಫಡಣವೀಸ್‌ ಅವರ ಹುದ್ದೆ ಬದಲಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ನಿಟ್ಟಿನಲ್ಲಿ ದೆಹಲಿಯಲ್ಲೂ ಗೋಪ್ಯ ಸಭೆಗಳು ನಡೆಯುತ್ತಿವೆ’ ಎಂದು ಎನ್‌ಸಿಪಿ ರಾಷ್ಟ್ರೀಯ ವಕ್ತಾರ ಕ್ಲೈಡ್‌ ಕ್ರಾಸ್ಟೊ ತಿಳಿಸಿದ್ದಾರೆ.

ರಾವುತ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಹಾಗೂ ಶಿಂದೆ ಬಣದ ವಕ್ತಾರ ದೀಪಕ್‌ ಕೇಸರ್‌ಕರ್‌ ‘ರಾವುತ್‌ ಅವರು ಸುಳ್ಳು ಹೇಳುವ ಜ್ಯೋತಿಷಿ’ ಎಂದಿದ್ದಾರೆ. 

‘ರಾವುತ್‌ ಹೇಳಿಕೆಯು ಅವರು ಹಗಲು ಕನಸು ಕಾಣುತ್ತಿರುವುದಕ್ಕೆ ಸಾಕ್ಷಿಯಂತಿದೆ’ ಎಂದು ಬಿಜೆಪಿ ಶಾಸಕ ರಾಮ್‌ ಕದಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT