ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ರಾಜ್ಯಸಭೆ ಬಿಜೆಪಿ ಸಂಸದ ನಾರಾಯಣ್ ರಾಣೆ ಸೋಮವಾರ ಮಹಾರಾಷ್ಟ್ರ ರಾಜ್ಯಪಾಲ ಬಿ. ಎಸ್. ಕೋಶಿಯಾರಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
Former Maharashtra CM and BJP leader Narayan Rane met Governor Bhagat Singh Koshyari today and demanded that President's Rule be imposed in the state. pic.twitter.com/3Ava55SMbh
‘ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಕೊರೊನಾ ವೈರಸ್ ಅನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬ ಅಂಶವನ್ನು ಪರಿಗಣಿಸಿ ರಾಜ್ಯಪಾಲರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು,’ ಎಂದು ಅವರು ಮನವಿ ಸಲ್ಲಿಸಿದರು.
‘ಈ ಬಿಕ್ಕಟ್ಟಿನ ಸಮಯದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಆಡಳಿತಾತ್ಮಕ ವ್ಯವಹಾರಗಳನ್ನು ಗೊಂದಲಕ್ಕೀಡು ಮಾಡಿವೆ,’ ಎಂದು ರಾಣೆ ಸುದ್ದಿಗಾರರಿಗೆ ತಿಳಿಸಿದರು.
‘ಇವರಿಗೆ ಸರ್ಕಾರ ನಡೆಸುವ ಸಾಮರ್ಥ್ಯವಿಲ್ಲ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅನನುಭವಿ. ಆಡಳಿತ ಮತ್ತು ಪೊಲೀಸ್ ಇಲಾಖೆಯನ್ನು ಪರಿಣಾಮಕಾರಿಯಾಗಿ ನಡೆಸಲು ಅವರಿಗೆ ಸಾಧ್ಯವಿಲ್ಲ. ಮಹಾರಾಷ್ಟ್ರವನ್ನು ರಾಷ್ಟ್ರಪತಿಗಳ ಆಡಳಿತದಲ್ಲಿಡಬೇಕು. ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಬೇಕು" ಎಂದು ಅವರು ಹೇಳಿದರು.
‘ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಆಸ್ಪತ್ರೆಗಳ ಸ್ಥಿತಿ ರಾಜ್ಯದಲ್ಲಿ ಕರುಣಾಜನಕವಾಗಿದೆ. ಮಿಲಿಟರಿ ಈ ಕಾರ್ಯಗಳ ಉಸ್ತುವಾರಿ ವಹಿಸಿಕೊಳ್ಳಬೇಕು ಮತ್ತು ಆರೋಗ್ಯ ರಕ್ಷಣೆಯ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡಬೇಕು,’ ಎಂದೂ ಅವರು ಇದೇ ವೇಳೆ ಹೇಳಿದರು.
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಕೇಂದ್ರಬಿಂದುವಾಗಿರುವ ಮಹಾರಾಷ್ಟ್ರದಲ್ಲಿ ಇದುವರೆಗೆ 52,667 ಸೋಂಕು ಪ್ರಕರಣಗಳು ಮತ್ತು 1,695 ಸಾವುಗಳು ವರದಿಯಾಗಿವೆ. ಇದು ದೇಶದಲ್ಲೇ ಅತಿ ಹೆಚ್ಚು.