ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ವದಂತಿ ಅಲ್ಲಗಳೆದ ಜೆಡಿಯು ನಾಯಕ ಲಲನ್‌ ಸಿಂಗ್‌

Published 28 ಡಿಸೆಂಬರ್ 2023, 16:17 IST
Last Updated 28 ಡಿಸೆಂಬರ್ 2023, 16:17 IST
ಅಕ್ಷರ ಗಾತ್ರ

ನವದೆಹಲಿ: ಜನತಾದಳ (ಸಂಯುಕ್ತ) ಅಧ್ಯಕ್ಷ ಸ್ಥಾನಕ್ಕೆ ತಾವು ರಾಜೀನಾಮೆ ನೀಡಬಹುದೆಂಬ ವರದಿಗಳನ್ನು ಲಲನ್‌ ಸಿಂಗ್‌ ಎಂದೇ ಜನಪ್ರಿಯರಾಗಿರುವ ರಾಜೀವ್‌ ರಂಜನ್‌ ಸಿಂಗ್‌ ಗುರುವಾರ ಅಲ್ಲಗಳೆದರು. ಆಡಳಿತಾರೂಢ ಬಿಜೆಪಿ ಪರ ಮಾಧ್ಯಮದವರು ಹೆಣೆದಿರುವ ಕಟ್ಟು ಕತೆ ಇದು ಎಂದು ಅವರು ಹೇಳಿದರು.

ಜೆಡಿ (ಯು) ಪಕ್ಷದ ರಾಷ್ಟ್ರದ ಕಾರ್ಯಕಾರಿಣಿ ಸಭೆಗೆ ಮೊದಲು ಪಕ್ಷದ ಅಧ್ಯಕ್ಷ ಸ್ಥಾನದಿಂದ ಅವರು ಕೆಳಗಿಳಿಯಬಹುದೆಂಬ ವದಂತಿಗಳ ನಡುವೆಯೇ ಅವರು, ಸಭೆ ವಾಡಿಕೆಯಂತೆ ನಡೆಯಲಿದೆ. ಪಕ್ಷದ ಸದಸ್ಯರು ಒಗ್ಗಟ್ಟಿನಿಂದಿದ್ದಾರೆ ಎಂದರು.

‘ನೀವು ಕತೆ ಕಟ್ಟಲು ಯತ್ನಿಸುತ್ತಿದ್ದೀರಿ. ಜೆಡಿ (ಯು) ಒಗ್ಗಟ್ಟಿನಿಂದಿದೆ ಮತ್ತು ಹಾಗೆಯೇ ಇರುತ್ತದೆ’ ಎಂದರು.

ಇದಕ್ಕೂ ಮೊದಲು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು, ‘ದೆಹಲಿಯಲ್ಲಿ ಎರಡು ದಿನಗಳವರೆಗೆ ನಡೆಯುತ್ತಿರುವ ಪಕ್ಷದ ಸಭೆಯು ಪ್ರತಿ ವರ್ಷ ವಾಡಿಕೆಯಂತೆ ನಡೆಯುವಂಥದ್ದು. ಅದರಲ್ಲಿ ವಿಶೇಷವೇನೂ ಇಲ್ಲ ಎಂದು ಹೇಳಿದರು. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿ (ಯು) ರಾಷ್ಟ್ರೀಯ ಪದಾಧಿಕಾರಿಗಳು ಗುರುವಾರ ಇಲ್ಲಿ ಸಭೆ ಸೇರುತ್ತಿದ್ದಾರೆ. ಶುಕ್ರವಾರ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ರಾಷ್ಟ್ರೀಯ ಮಂಡಳಿ ಸಭೆ ನಡೆಯಲಿದೆ.

ಆರ್‌ಜೆಡಿ ಜತೆ ಒಡನಾಟ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿರುವ ಲಲನ್‌ಸಿಂಗ್‌ ಅವರಿಗೆ ಪಕ್ಷದ ಸ್ಥಾನ ತ್ಯಜಿಸಲು ಸೂಚಿಸಲಾಗುತ್ತದೆ ಎಂಬ ವದಂತಿ ಹಬ್ಬಿದ್ದವು. 

ಪದಾಧಿಕಾರಿಗಳ ಸಭೆ

ಗುರುವಾರ ಇಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ನಿತೀಶ್‌ ಕುಮಾರ್‌ ಮತ್ತು ಲಲನ್‌ ಸಿಂಗ್‌ ಪಾಲ್ಗೊಂಡರು.

ಸಭೆಯ ಬಳಿಕ, ಪಕ್ಷದ ಮುಖ್ಯ ವಕ್ತಾರ ಕೆ.ಸಿ. ತ್ಯಾಗಿ ಅವರು, ಬಿಜೆಪಿ ನೇತೃತ್ವದ ಎನ್‌ಡಿಎಗೆ ಮುಖ್ಯಮಂತ್ರಿ ಸೇರುತ್ತಾರಾ ಎಂಬ ಪ್ರಶ್ನೆಗೆ, ‘ನಾವು ಎನ್‌ಡಿಎ ಸೇರುವುದಿಲ್ಲ’ ಎಂದರು.

ಶುಕ್ರವಾರದ ಸಭೆಗೆ ರಾಜಕೀಯ ಅಜೆಂಡಾದ ವಸ್ತು ವಿಷಯ ಕುರಿತು ಪದಾಧಿಕಾರಿಗಳು ಚರ್ಚಿಸಿದರು. ಸಂಘಟನೆಯೊಳಗೆ ಯಾವುದೇ ಬದಲಾವಣೆ ಕುರಿತು ಯಾವ ಚರ್ಚೆಯೂ ಆಗಲಿಲ್ಲ ಎಂದು ಪಕ್ಷದ ಮತ್ತೊಬ್ಬ ವಕ್ತಾರ ರಾಜೀವ್‌ ರಂಜನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT