ಸಾಂಗ್ಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮೋದಿ ಅವರ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ನನ್ನ 40 ವರ್ಷಗಳ ರಾಜಕೀಯ ವೃತ್ತಿಯಲ್ಲಿ ಇದುವರೆಗೆ ನಾನು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಲ್ಲ’ ಎಂದು ಹೇಳಿದ್ದಾರೆ.
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾದ ಅವರನ್ನು ಅಭಿನಂದಿಸಲು, ಮಹಾರಾಷ್ಟ್ರ ಕಾಂಗ್ರೆಸ್ ಘಟಕವು ಸಾಂಗ್ಲಿಯಲ್ಲಿ ಆಯೋಜಿಸಿದ್ದ ಕನ್ನಡ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿತ್ತು’ ಎಂದು ಆರೋಪಿಸಿದರು.
‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಸುಳ್ಳುಗಳನ್ನು ಹೇಳುವ ಪ್ರಧಾನಿಯನ್ನು ನಾನು ಎಂದೂ ನೋಡಲಿಲ್ಲ. 2014ರಲ್ಲಿ ಮೋದಿ ಅವರು ಜನಸಾಮಾನ್ಯರ ಬ್ಯಾಂಕ್ ಖಾತೆಗಳಿಗೆ ₹ 15 ಲಕ್ಷ ಹಾಕುವುದಾಗಿ ಹೇಳಿದ್ದರು. ಅಂತೆಯೇ, ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸಿ ಒಳ್ಳೆಯ ದಿನಗಳನ್ನು ತರುವುದಾಗಿಯೂ ಹೇಳಿದ್ದರು. ಆದರೆ, ಇಂದು ಈ ರೀತಿ ಏನಾದರೂ ಆಗಿದೆಯೇ?’ ಎಂದು ಮೋದಿ ಅವರನ್ನು ಗುರಿಯಾಗಿಸಿಕೊಂಡು ಅವರು ವಾಗ್ದಾಳಿ ನಡೆಸಿದ ಅವರು, ‘ಮೋದಿ ನೇತೃತ್ವದ ಸರ್ಕಾರವನ್ನು ಸೋಲಿಸಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಜವಾಬ್ದಾರಿ’ ಎಂದು ಕರೆ ನೀಡಿದರು.
ಇದನ್ನೂ ಓದಿ... ರಾಷ್ಟ್ರಪತಿ ಚುನಾವಣೆ: ಮೊಬೈಲ್ ಕರೆ ಸ್ವೀಕರಿಸದೇ ಫಜೀತಿ ತಂದಿಟ್ಟಿದ್ದ ದ್ರೌಪದಿ ಮುರ್ಮು!
‘ನಾನು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ನಡೆದ ಶೇ 40ರ ಭ್ರಷ್ಟಾಚಾರದ ಕುರಿತು ರಾಜ್ಯದ ಮೂಲೆಮೂಲೆಗೂ ಹೋಗಿ ಜನರಿಗೆ ತಿಳಿಸಿದೆವು. ಬಿಜೆಪಿ ಅಂದರೆ ಭ್ರಷ್ಟಾಚಾರ. ಭ್ರಷ್ಟಾಚಾರ ಅಂದರೆ ಬಿಜೆಪಿ. ಕರ್ನಾಟಕದ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಜನಾದೇಶದಿಂದ ಅಲ್ಲ. ಬದಲಿಗೆ ಶಾಸಕರಿಗೆ ಹಣದ ಆಮಿಷ ಒಡ್ಡುವ ‘ಆಪರೇಷನ್ ಕಮಲ’ದ ಮೂಲಕ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
‘ಮಹಾರಾಷ್ಟ್ರದಲ್ಲಿ ಏಕನಾಥ ಶಿಂದೆ– ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರವು ಕೂಡಾ ಭ್ರಷ್ಟಾಚಾರದಿಂದ ಕೂಡಿದೆ ಎಂಬ ಬಗ್ಗೆ ಖಾತ್ರಿಯಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಸೋಲಿಸುವುದು ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಉದ್ದೇಶವಾಗಬೇಕು. ದೇಶ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವೆಲ್ಲರೂ ಮತ್ತೊಂದು ಸ್ವಾತಂತ್ರ್ಯ ಹೋರಾಟವನ್ನು ನಡೆಸಬೇಕಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಕಾರಣದಿಂದಲೇ ನಾನಿಂದು ಮುಖ್ಯಮಂತ್ರಿಯಾಗಿದ್ದೇನೆ’ ಎಂದು ಹೇಳಿದರು.
‘ಜಾತಿ, ಧರ್ಮ, ಪ್ರದೇಶ ಮತ್ತು ಭಾಷೆಗಳ ಆಧಾರದಲ್ಲಿ ಬಿಜೆಪಿಯು ಜನರನ್ನು ವಿಭಜಿಸುತ್ತಿದೆ’ ಎಂದೂ ಅವರು ಆರೋಪಿಸಿದರು.
‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ತಕ್ಷಣ ಪ್ರಾರಂಭವಾಗಬೇಕಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದಂತೆ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಕೇಂದ್ರ ಸರ್ಕಾರವು ತಡೆಯೊಡ್ದಿದೆ ಎಂದು ಆರೋಪಿಸಿದ ಅವರು, ‘ಮೊದಲ ಸಚಿವ ಸಂಪುಟ ಸಭೆಯಲ್ಲಿ ನಾವು ನಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ನಿರ್ಣಯಿಸಿದೆವು. ಅದರಲ್ಲಿ ಅನ್ನಭಾಗ್ಯವೂ ಒಂದಾಗಿದೆ. ಆದರೆ, ಈ ಯೋಜನೆಯನ್ನು ಅನುಷ್ಠಾನಕ್ಕೆ ಬರಲು ಕೇಂದ್ರ ಸರ್ಕಾರವು ಅಡ್ಡಿಯುಂಟು ಮಾಡುತ್ತಿದೆ’ ದೂರಿದರು.
‘ಕರ್ನಾಟಕದ ವಿಧಾನಸಭಾ ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಅನ್ನು ಸೋಲಿಸಲು ಅನೇಕ ದಿನಗಳ ಕಾಲ ರಾಜ್ಯದಲ್ಲಿ ಪ್ರಚಾರ ನಡೆಸಿದರು. ಆದರೆ, ಜನರು ಅವರನ್ನೇ ಸೋಲಿಸಿದರು. ಮೋದಿ ಪ್ರಚಾರ ಮಾಡಿದ ಕ್ಷೇತ್ರಗಳಲ್ಲೇ ಬಿಜೆಪಿ ಸೋತಿದೆ. ಇದರರ್ಥ ಮೋದಿ ಅವರ ಜನಪ್ರಿಯತೆ ಕ್ಷೀಣಿಸುತ್ತಿದೆ’ ಎಂದೂ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.