ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರದಲ್ಲಿ ಆಪರೇಷನ್‌: ಅಲ್ಪಮತಕ್ಕೆ ಕುಸಿದ ಬಿಜೆಪಿ ಸರ್ಕಾರ

Last Updated 18 ಜೂನ್ 2020, 9:03 IST
ಅಕ್ಷರ ಗಾತ್ರ

ಇಂಪಾಲ: ಮಣಿಪುರದಲ್ಲಿ ದಿಢೀರ್‌ ರಾಜಕೀಯ ಬೆಳವಣಿಗೆ ಸಂಭವಿಸಿದೆ. 9 ಶಾಸಕರು ಬಿಜೆಪಿ ಸರ್ಕಾರದಿಂದ ಹೊರ ನಡೆದಿದ್ದು, ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ.

ಬಿಜೆಪಿಯ ಮೂವರು ಶಾಸಕರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದರೆ, ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (ಎನ್‌ಪಿಪಿ)ಯ ನಾಲ್ವರು ಶಾಸಕರು, ಪಕ್ಷೇತರ ಶಾಸಕ ಮತ್ತು ಟಿಎಂಸಿ ಶಾಸಕರು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಸದ್ಯದಲ್ಲೇ ಅವಿಶ್ವಾಸ ಮತ ನಿರ್ಣಯ ಮಂಡಿಸುವುದಾಗಿ ಕಾಂಗ್ರೆಸ್‌ ಹೇಳಿದೆ.

ಬಿಜೆಪಿ ಶಾಸಕರಾದ ಹೆಂಗ್ಲೆಪ್ ವಿಧಾನಸಭಾ ಕ್ಷೇತ್ರದ ಟಿ.ತಂಗ್ಜಲಂ ಹಾಕಿಪ್, ತಮೆಂಗ್ಲಾಂಗ್ ವಿಧಾನಸಭಾ ಕ್ಷೇತ್ರದ ಸ್ಯಾಮ್ಯುಯೆಲ್ ಜೆಂಡೈ ಮತ್ತು ನವೋರಿಯಾ ಪಖಂಗ್ಲಕ್ಪಾ ವಿಧಾನಸಭಾ ಕ್ಷೇತ್ರದ ಎಸ್.ಸುಭಾಷ್‌ ಚಂದ್ರ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ತೊರೆದಿದ್ದಾರೆ.

ಇದಲ್ಲದೇ, ರಾಷ್ಟ್ರೀಯ ಪೀಪಲ್ಸ್‌ ಪಾರ್ಟಿ(ಎನ್‌ಪಿಪಿ)ಯ ಶಾಸಕ, ಉಪ ಮುಖ್ಯಮಂತ್ರಿ ವೈ. ಜಾಯ್‌ಮಾರ್ ಸಿಂಗ್, ಎಲ್. ಜಯ ಜಯಂತಕುಮಾರ್ ಸಿಂಗ್, ಎನ್. ಕಾಯಿಸಿ ಮತ್ತು ಲೆಟ್ಪಾವೊ ಹಾಕಿಪ್ ಮಂತ್ರಿ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಪಕ್ಷ ನೀಡಿದ್ದ ಬೆಂಬಲವನ್ನೂ ಹಿಂತೆಗೆದುಕೊಂಡಿದ್ದಾರೆ.

ಟಿಎಂಸಿ ಶಾಸಕ ಟಿ. ರೋಬಿಂದ್ರೊ ಸಿಂಗ್ ಮತ್ತು ಪಕ್ಷೇತರ ಶಾಸಕ ಆಶಾಬುದ್ದೀನ್ ಕೂಡ ಬಿಜೆಪಿ ಸರ್ಕಾರದಿಂದ ದೂರ ಸರಿದಿದ್ದಾರೆ.
60 ಸದಸ್ಯ ಬಲದ ಮಣಿಪುರ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆ ವೇಳೆ ಕಾಂಗ್ರೆಸ್‌ 28 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 21 ಸ್ಥಾನ ಗಳಿಸಿತ್ತು. ಎನ್‌ಪಿಪಿ–4, ಎನ್‌ಪಿಎಫ್‌–4, ಟಿಂಎಂಸಿ–1, ಪಕ್ಷೇತರರೊಬ್ಬರು ಸೇರಿದಂತೆ ಇತರರು 11 ಸ್ಥಾನಗಳಿಸಿದ್ದರು.

ಮಣಿಪುರದಲ್ಲಿ 8 ಕಾಂಗ್ರೆಸ್‌ ಶಾಸಕರು ಇದಕ್ಕೂ ಹಿಂದೆಯೇ ಪಕ್ಷ ತೊರೆದಿದ್ದಾರೆ. ಅದರಲ್ಲಿ ಒಬ್ಬರು ಅನರ್ಹಗೊಂಡಿದ್ದು, ಉಳಿದ 7 ಶಾಸಕರ ಅನರ್ಹತೆ ಅರ್ಜಿ ವಿಚಾರಣೆ ಹಂತದಲ್ಲಿದೆ. ಅವರು ವಿಧಾನಸಭೆಗೆ ಪ್ರವೇಶಿಸಬಾರದು ಎಂದೂ ಮಣಿಪುರ ಹೈಕೋರ್ಟ್‌ ಇತ್ತೀಚೆಗೆ ಆದೇಶ ಹೊರಡಿಸಿದೆ.

ಈ ಎಲ್ಲ ಬೆಳವಣಿಗೆಗಳಿಂದಾಗಿ ಮಣಿಪುರದ ಬಿಜೆಪಿ ಸರ್ಕಾರವು ಅಲ್ಪಮತಕ್ಕೆ ಕುಸಿದಿದ್ದು, ಸರ್ಕಾರ ಪತನಗೊಳ್ಳುವ ಅಂಚಿಗೆ ತಲುಪಿದೆ.

ಸರ್ಕಾರ ರಚಿಸಲು ಹಕ್ಕು ಮಂಡಿಸುತ್ತೇವೆ: ಕಾಂಗ್ರೆಸ್‌

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಇಬೋಬಿ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಬಹುಮತ ಸಾಬೀತು ಮಾಡುವಂತೆ ನಾವು ಒತ್ತಾಯಿಸುತ್ತೇವೆ. ಅಲ್ಲದೆ, ಸರ್ಕಾರ ರಚನೆಗಾಗಿ ಹಕ್ಕು ಮಂಡಿಸುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯಸಭೆ ಚುನಾವಣೆಗೂ ಮೊದಲೇ ಅಪರೇಷನ್‌

ವಿಧಾನಸಭೆಯಿಂದ ರಾಜ್ಯಸಭೆಗೆ ಇದೇ 19ರಂದು ಚುನಾವಣೆ ನಿಗಧಿಯಾಗಿರುವ ನಡುವೆಯೇ ಈ ರಾಜಕೀಯ ಬೆಳವಣಿಗೆ ನಡೆದಿರುವುದು ಗಮನಾರ್ಹ.

ಎನ್ ಬಿರೆನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದಿಂದ ಹೊರ ಬಂದಿರುವ ಎಲ್ಲ ಶಾಸಕರು ಅಜ್ಞಾತ ಸ್ಥಳವೊಂದರಲ್ಲಿ ಕಾಂಗ್ರೆಸ್‌ನ ಆತಿಥ್ಯದಲ್ಲಿದ್ದಾರೆ ಎಂಬುದು ತಿಳಿದು ಬಂದಿದೆ. ಮಣಿಪುರ ಕಾಂಗ್ರೆಸ್‌ ಅಧ್ಯಕ್ಷ ಎಂ. ಒಕೆಂಡ್ರೊ ಸಿಂಗ್, ಕಾಂಗ್ರೆಸ್‌ ನಾಯಕರಾದ ಒಕ್ರಮ್ ಇಬೋಬಿ ಸಿಂಗ್, ಜಿ. ಗೈಖಂಗಂ, ಟಿ.ಎನ್. ಹಾಕಿಪ್ ಮತ್ತು ಕಾಂಗ್ರೆಸ್ ಶಾಸಕರು ಇದರ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT