ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ ಪಾದ ಮುಟ್ಟಿ ಬಿಹಾರಕ್ಕೆ ಅವಮಾನ ಮಾಡಿದ ನಿತೀಶ್ ಕುಮಾರ್: ಪ್ರಶಾಂತ್ ಕಿಶೋರ್

Published 15 ಜೂನ್ 2024, 4:39 IST
Last Updated 15 ಜೂನ್ 2024, 4:39 IST
ಅಕ್ಷರ ಗಾತ್ರ

ಭಾಗಲ್ಪುರ: ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸುವ ಮೂಲಕ ಬಿಹಾರಕ್ಕೆ ಮುಜುಗರ ಉಂಟುಮಾಡಿದ್ದಾರೆ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಟೀಕಿಸಿದ್ದಾರೆ.

ತಮ್ಮ ‘ಜನ್‌ ಸುರಾಜ್’ ಅಭಿಯಾನದ ಅಂಗವಾಗಿ ಭಾಗಲ್ಪುರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ನಿತೀಶ್ ಕುಮಾರ್ ಜೊತೆ ಕೆಲಸ ಮಾಡಿದ್ದ ನಾನು ಈಗ ಏಕೆ ಅವರನ್ನು ಟೀಕಿಸುತ್ತಿದ್ದೇನೆ ಎಂದು ಜನರು ಕೇಳುತ್ತಾರೆ. ಆಗ ಅವರ ವ್ಯಕ್ತಿತ್ವ ಬೇರೆಯದೇ ಆಗಿತ್ತು. ಅವರು ಆತ್ಮಸಾಕ್ಷಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ’ ಎಂದು ಹೇಳಿದರು. ಕಿಶೋರ್‌ ಅವರು 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್‌ ಅವರ ಜೆಡಿಯು ಪರ ಕೆಲಸ ಮಾಡಿದ್ದರು.

‘ಒಂದು ರಾಜ್ಯದ ಮುಖ್ಯಮಂತ್ರಿ ಅಲ್ಲಿನ ಜನರ ಹೆಮ್ಮೆ ಎನಿಸಿಕೊಳ್ಳುವರು. ಆದರೆ, ನಿತೀಶ್ ಅವರು ಮೋದಿ ಅವರ ಪಾದಗಳನ್ನು ಮುಟ್ಟಿ, ಬಿಹಾರಕ್ಕೆ ಅವಮಾನ ತಂದರು’ ಎಂದು ಕಳೆದ ವಾರ ನವದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯನ್ನು ಉಲ್ಲೇಖಿಸಿ ಅವರು ಟೀಕಿಸಿದರು. 

‘ಮೋದಿ ಅಧಿಕಾರಕ್ಕೆ ಮರಳಲು ನಿತೀಶ್ ಕುಮಾರ್ ವಹಿಸಿದ ಪಾತ್ರದ ಬಗ್ಗೆ ಹೆಚ್ಚಿನ ಮಾತುಗಳು ಕೇಳಿಬರುತ್ತಿವೆ. ಆದರೆ ಬಿಹಾರದ ಮುಖ್ಯಮಂತ್ರಿ, ಕೇಂದ್ರ ಸರ್ಕಾರದಲ್ಲಿ ತಾವು ಹೊಂದಿರುವ ಪ್ರಭಾವವನ್ನು ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ? ರಾಜ್ಯಕ್ಕೆ ಅನುಕೂಲ ಮಾಡಿಕೊಡಲು ಅವರು ತಮ್ಮ ಪ್ರಭಾವವನ್ನು ಬಳಸುತ್ತಿಲ್ಲ. 2025ರ ವಿಧಾನಸಭಾ ಚುನಾವಣೆಯ ಬಳಿಕವೂ ಬಿಜೆಪಿ ಬೆಂಬಲದೊಂದಿಗೆ ಅಧಿಕಾರದಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಅವರು ಪಾದಗಳನ್ನು ಮುಟ್ಟುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT