ನವದೆಹಲಿ: ಧಾರ್ಮಿಕ ಸ್ಥಳಗಳನ್ನು, ಅದರಲ್ಲೂ ಮುಖ್ಯವಾಗಿ ಮಸೀದಿಗಳು ಹಾಗೂ ದರ್ಗಾಗಳನ್ನು, ತಮ್ಮ ವಶಕ್ಕೆ ತೆಗೆದುಕೊಳ್ಳುವ ಕೋರಿಕೆ ಇರುವ ಹೊಸ ಅರ್ಜಿಗಳನ್ನು ದೇಶದ ನ್ಯಾಯಾಲಯಗಳು ಮುಂದಿನ ಸೂಚನೆಯವರೆಗೆ ಕೈಗೆತ್ತಿಕೊಳ್ಳುವಂತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.

ಅಲ್ಲದೆ, ಬಾಕಿ ಇರುವ ಅರ್ಜಿಗಳ ವಿಚಾರವಾಗಿ ಮಧ್ಯಂತರ ಅಥವಾ ಅಂತಿಮ ಆದೇಶವನ್ನು ನೀಡುವಂತೆ ಇಲ್ಲ ಎಂದು ಕೂಡ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ‘ಈ ವಿಚಾರವು ಈ ನ್ಯಾಯಾಲಯದ ಪರಿಶೀಲನೆಯಲ್ಲಿದೆ. ಈ ನ್ಯಾಯಾಲಯದ ಮುಂದಿನ ಆದೇಶ ಬರುವತನಕ ಹೊಸದಾಗಿ ಅರ್ಜಿಗಳನ್ನು ದಾಖಲಿಸಿಕೊಳ್ಳುವಂತಿಲ್ಲ ಹಾಗೂ ವಿಚಾರಣೆ ನಡೆಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ತ್ರಿಸದಸ್ಯ ಪೀಠವು ಸೂಚಿಸಿದೆ.

ಈ ಸೂಚನೆಯ ಪರಿಣಾಮವಾಗಿ, ವಾರಾಣಸಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹಿ ಈದ್ಗಾ ಮಸೀದಿ, ಸಂಭಲ್ನ ಶಾಹಿ ಜಾಮಾ ಮಸೀದಿ ಸೇರಿದಂತೆ 10 ಮಸೀದಿಗಳ ಮೂಲ ಸ್ವರೂಪವನ್ನು ಅರಿಯಲು ಸಮೀಕ್ಷೆ ನಡೆಸಬೇಕು ಎಂಬ ಕೋರಿಕೆಯೊಂದಿಗೆ ವಿವಿಧ ಹಿಂದೂ ಗುಂಪುಗಳು ಸಲ್ಲಿಸಿರುವ ಸರಿಸುಮಾರು 18 ಅರ್ಜಿಗಳ ವಿಚಾರಣೆಯು ನಡೆಯುವುದಿಲ್ಲ.

ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ – 1991ರ ವಿವಿಧ ಅಂಶಗಳನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ ಸೇರಿ ಹಲವರು ಸಲ್ಲಿಸಿರುವ ಆರು ಅರ್ಜಿಗಳ ವಿಚಾರಣೆಯನ್ನು ತ್ರಿಸದಸ್ಯ ಪೀಠವು ನಡೆಸುತ್ತಿದೆ. ಯಾವುದೇ ಪೂಜಾ ಸ್ಥಳದ ಸ್ವರೂಪದಲ್ಲಿ ಬದಲಾವಣೆ ತರುವುದನ್ನು ಈ ಕಾಯ್ದೆಯು ನಿಷೇಧಿಸಿದೆ. ಹಾಗೆಯೇ, ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪವು 1947ರ ಆಗಸ್ಟ್ 15ರಂದು ಹೇಗಿತ್ತೋ ಅದೇ ರೀತಿಯಲ್ಲಿ ಇರಬೇಕು ಎಂದು ಕಾಯ್ದೆಯು ಹೇಳುತ್ತದೆ.

ಆದರೆ, ರಾಮ ಜನ್ಮಭೂಮಿ – ಬಾಬರಿ ಮಸೀದಿಗೆ ಸಂಬಂಧಿಸಿದ ವಿವಾದವನ್ನು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿರಿಸಲಾಗಿತ್ತು.

1991ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂಬ ಕೋರಿಕೆ ಇರುವ ಹಲವು ಅರ್ಜಿಗಳು ಇವೆ. ದೇಶದಲ್ಲಿ ಕೋಮು ಸೌಹಾರ್ದವನ್ನು ಕಾಪಾಡಲು ಹಾಗೂ ಹಿಂದೂ ಗುಂಪುಗಳು ಕೇಳುತ್ತಿರುವ ಮಸೀದಿಗಳನ್ನು ಈಗಿರುವ ಸ್ಥಿತಿಯಲ್ಲೇ ಉಳಿಸಿಕೊಳ್ಳಲು ಇದು ಅಗತ್ಯ ಎಂದು ಅರ್ಜಿಗಳು ಹೇಳುತ್ತವೆ.

1991ರ ಕಾಯ್ದೆಯು ಎಷ್ಟರಮಟ್ಟಿಗೆ ಕಾನೂನುಬದ್ಧ, ಅದರ ಮಿತಿಗಳು ಏನು ಮತ್ತು ವ್ಯಾಪ್ತಿ ಏನು ಎಂಬುದನ್ನು ತಾನು ಪರಿಶೀಲನೆ ನಡೆಸುವುದಾಗಿ ತ್ರಿಸದಸ್ಯ ಪೀಠವು ಹೇಳಿದೆ. ಹೀಗಾಗಿ, ತಾನು ಮುಂದಿನ ಸೂಚನೆ ನೀಡುವವರೆಗೆ ಇತರ ನ್ಯಾಯಾಲಯಗಳು ಈ ವಿಚಾರವಾಗಿ ಮಧ್ಯಪ್ರವೇಶ ಮಾಡಬಾರದು ಎಂದು ಹೇಳಬೇಕಾಗಿದೆ ಎಂಬುದನ್ನು ಕೂಡ ಪೀಠವು ಸ್ಪಷ್ಟಪಡಿಸಿದೆ.

ಕಕ್ಷಿದಾರರು ಅರ್ಜಿಗಳ ವಿಚಾರದಲ್ಲಿ ಒತ್ತಾಯ ಮಾಡಿದರೆ, ವಿಷಯವನ್ನು ಹೈಕೋರ್ಟ್ಗೆ ರವಾನಿಸಬಹುದು ಎಂದು ಹೇಳಿದೆ.

‘ಬಾಕಿ ಇರುವ ಅರ್ಜಿಗಳ ವಿಚಾರದಲ್ಲಿ ನ್ಯಾಯಾಲಯಗಳು ಪರಿಣಾಮ ಉಂಟುಮಾಡುವಂತಹ ಮಧ್ಯಂತರ ಅಥವಾ ಅಂತಿಮ ಆದೇಶ ನೀಡಬಾರದು. ಮುಂದಿನ ಸೂಚನೆ ಬರುವವರೆಗೆ ಸಮೀಕ್ಷೆ ನಡೆಸಲೂ ಆದೇಶಿಸಬಾರದು’ ಎಂದು ಪೀಠವು ಸ್ಪಷ್ಟಪಡಿಸಿದೆ.

ವಕೀಲರ ವಿರೋಧ

ಸಿಜೆಐ ಸಮರ್ಥನೆ ಹಿಂದೂ ಕಕ್ಷಿದಾರರೊಬ್ಬರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಜೆ. ಸಾಯಿ ದೀಪಕ್ ಅವರು ತ್ರಿಸದಸ್ಯ ಪೀಠದ ಸೂಚನೆಯನ್ನು ವಿರೋಧಿಸಿದರು. ಇಂತಹ ಸೂಚನೆ ನೀಡುವ ಮೊದಲು ಪೀಠವು ಸಂಬಂಧಪಟ್ಟ ಎಲ್ಲರ ವಾದ ಆಲಿಸಬೇಕಿತ್ತು ಎಂದರು. ಆದರೆ ಇದನ್ನು ಒಪ್ಪದ ಸಿಜೆಐ ವಿಸ್ತೃತವಾದ ವಿಚಾರವೊಂದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿರುವಾಗ ಅದರ ಬಗ್ಗೆ ಯಾವುದೇ ಆದೇಶ ನೀಡಬಾರದು ಎಂದು ಇತರ ನ್ಯಾಯಾಲಯಗಳಿಗೆ ಸೂಚಿಸುವುದು ಸಹಜ ಎಂದು ಹೇಳಿದರು. ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಇಲ್ಲದೆ ಈ ಅರ್ಜಿಯ ಬಗ್ಗೆ ಕೋರ್ಟ್ ತೀರ್ಪು ಹೇಳಲು ಆಗದು ಎಂದು ಹೇಳಿದ ಪೀಠವು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಕೇಂದ್ರಕ್ಕೆ ಸೂಚನೆ ನೀಡಿತು.

‘ಸೆಕ್ಷನ್ 3 ಮತ್ತು 4ರ ಬಗ್ಗೆ ಪ್ರಶ್ನೆ’

ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯ ಸೆಕ್ಷನ್ 3 ಮತ್ತು ಸೆಕ್ಷನ್ 4ರ ವಿಚಾರವಾಗಿ ಸಮಸ್ಯೆ ಇದೆ ಎಂದು ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ತ್ರಿಸದಸ್ಯ ಪೀಠ ಹೇಳಿದೆ. ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪದಲ್ಲಿ ಬದಲಾವಣೆ ತರುವಂತೆ ಇಲ್ಲ ಎಂದು ಸೆಕ್ಷನ್ 3ರಲ್ಲಿ ಹೇಳಲಾಗಿದೆ. ಪೂಜಾ ಸ್ಥಳಗಳ ಧಾರ್ಮಿಕ ಸ್ವರೂಪ ಹೇಗಿರಬೇಕು ಎಂಬುದರ ಬಗ್ಗೆ ವಿವರಣೆ ಸೆಕ್ಷನ್ 4ರಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.