ಲಖನೌ: ಇಂದಿನಿಂದ ಆರಂಭವಾಗಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯತ್ವ ಅಭಿಯಾನದಿಂದ ಯಾವುದೇ ವ್ಯಕ್ತಿ ಅಥವಾ ಮನೆ ಹೊರಗುಳಿದಿಲ್ಲ ಎಂಬುದನ್ನು ಕಾರ್ಯಕರ್ತರು ಖಾತ್ರಿಪಡಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೋಮವಾರ ಕರೆ ನೀಡಿದ್ದಾರೆ.
ಈ ಕುರಿತು ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಯೋಗಿ ಆದಿತ್ಯನಾಥ, 'ಇಂದಿನಿಂದ ಆರಂಭವಾಗಿರುವ ಬಿಜೆಪಿ ಸದಸ್ಯತ್ವ ಅಭಿಯಾನವು ಅಭಿವೃದ್ಧಿ ಹೊಂದಿದ ಭಾರತಕ್ಕಾಗಿನ ದೂರದೃಷ್ಟಿ, ಅಂತ್ಯೋದಯದ ಪ್ರತಿಜ್ಞೆ, ಜನರ ಸೇವೆಗಾಗಿ ಶಪಥ ಮತ್ತು ದೇಶ ಮೊದಲು ಎಂಬ ಉತ್ಸಾಹದೊಂದಿಗೆ ಪ್ರತಿಯೊಬ್ಬರನ್ನೂ ತಲುಪುವ ಚಳವಳಿಯಾಗಿದೆ' ಎಂದಿದ್ದಾರೆ.
'ಬನ್ನಿ, ಬಿಜೆಪಿ ಕಾರ್ಯಕರ್ತರಾದ ನಾವೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ 'ಎಲ್ಲರ ಜೊತೆ, ಎಲ್ಲರ ಅಭಿವೃದ್ಧಿ, ಎಲ್ಲರ ವಿಶ್ವಾಸ ಮತ್ತು ಪ್ರತಿಯೊಬ್ಬರ ಪ್ರಯತ್ನ' ಎಂಬ ಮಂತ್ರವನ್ನು ಮೈಗೂಡಿಸಿಕೊಂಡು ಈ ರಾಷ್ಟ್ರೀಯ ಕಾರ್ಯಭಾರದ ಯಶಸ್ಸಿಗಾಗಿ ಪೂರ್ಣ ಉತ್ಸಾಹ ಮತ್ತು ಬದ್ಧತೆಯಿಂದ ಪಾಲ್ಗೊಳ್ಳೋಣ' ಎಂದು ಕರೆ ನೀಡಿದ್ದಾರೆ.
'ನೆನಪಿರಲಿ, ಯಾವುದೇ ಮನೆ, ವ್ಯಕ್ತಿ ಅಥವಾ ಯಾವುದೇ ವರ್ಗವೂ ಈ ಅಭಿಯಾನದಿಂದ ಹೊರಗುಳಿಯಬಾರದು' ಎಂದು ಒತ್ತಿ ಹೇಳಿದ್ದಾರೆ.