ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿಗೆ ಮೆಟ್ರೊ ನಗರ ಸ್ಥಾನದ ಪ್ರಸ್ತಾವ ಇಲ್ಲ: ಕೇಂದ್ರ

Published 8 ಆಗಸ್ಟ್ 2024, 16:15 IST
Last Updated 8 ಆಗಸ್ಟ್ 2024, 16:15 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿಗೆ ‘ಮೆಟ್ರೊ ನಗರ’ ಸ್ಥಾನಮಾನ ನೀಡುವ ಯಾವುದೇ ಯೋಜನೆ ಮತ್ತು ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ರಾಜ್ಯಸಭೆಯಲ್ಲಿ ತಿಳಿಸಿದರು.

‘ಹೆಚ್ಚಿನ ನಗರಗಳಿಗೆ ಮೆಟ್ರೊ ನಗರಗಳ ಸ್ಥಾನಮಾನ ನೀಡುವುದು ಮತ್ತು ಆ ನಗರಗಳಿಗೆ ಮನೆ ಬಾಡಿಗೆ ಭತ್ಯೆಯ (ಎಚ್‌ಆರ್‌ಎ) ಮೇಲೆ ಹೆಚ್ಚಿನ ವಿನಾಯಿತಿ ಮಿತಿಯ ಲಾಭವನ್ನು ವಿಸ್ತರಿಸುವುದು ನೀತಿಗೆ ವಿರುದ್ಧವಾಗಿದೆ’ ಎಂದು ಅವರು ಕರ್ನಾಟಕದ ಕಾಂಗ್ರೆಸ್‌ ಸದಸ್ಯ ಅಜಯ್‌ ಮಾಕನ್‌ ಅವರ ಪ್ರಶ್ನೆಗೆ ಉತ್ತರಿಸಿದರು.

1962ರ ಆದಾಯ ತೆರಿಗೆ ನಿಯಮಗಳ ನಿಯಮಗಳ ಪ್ರಕಾರ ಮುಂಬೈ, ಕೋಲ್ಕತ್ತ, ದೆಹಲಿ, ಚೆನ್ನೈ ನಗರಗಳನ್ನು ಮಾತ್ರ ‘ಮೆಟ್ರೊ ನಗರಗಳು’ ಎಂದು ಪರಿಗಣಿಸಲಾಗುತ್ತದೆ. ಈ ನಗರಗಳಲ್ಲಿ ವಾಸಿಸುವವರು ತೆರಿಗೆ ಆಕರಿಸಬಹುದಾದ ತಮ್ಮ ವೈಯಕ್ತಿಕ ಆದಾಯದಲ್ಲಿ ಎಚ್‌ಆರ್‌ಎ ರೂಪದಲ್ಲಿ ಗರಿಷ್ಠ ಶೇಕಡ 50ರಷ್ಟು ವಿನಾಯಿತಿಯನ್ನು ಪಡೆಯಲು ಅವಕಾಶವಿದೆ. ಬೆಂಗಳೂರು ಸೇರಿದಂತೆ ಇತರ ನಗರಗಳಿಗೆ ಆ ವಿನಾಯಿತಿ ಮಿತಿ ಶೇ 40ರಷ್ಟಿದೆ ಎಂದು ಸಚಿವರು ತಿಳಿಸಿದರು.

ಮೆಟ್ರೊ ನಗರಗಳ ವ್ಯಾಪ್ತಿಗೆ ಬೆಂಗಳೂರನ್ನೂ ಸೇರಿಸಿದರೆ, ಇಲ್ಲಿನ ಆದಾಯ ತೆರಿಗೆದಾರರು ಇತರ ಮೆಟ್ರೊ ನಗರಗಳಂತೆಯೇ ಎಚ್‌ಆರ್‌ಎ (ಶೇ 50) ವಿನಾಯಿತಿ ಪಡೆಯಲು ಸಾಧ್ಯವಾಗುತ್ತದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಅವರು ಈ ವಿಷಯವನ್ನು  2022ರ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದರು. ಬೆಂಗಳೂರನ್ನು ಮೆಟ್ರೊ ನಗರಗಳ ಪಟ್ಟಿಗೆ ಸೇರಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಕೋರಿದ್ದರು.

ಬೆಂಗಳೂರು ದೇಶದ ಐಟಿ ರಾಜಧಾನಿಯಾಗಿದ್ದು, ಇತರ ನಗರಗಳಿಗೆ ಹೋಲಿಸಿದರೆ ವೇತನ ಪಡೆಯುವ ಹೆಚ್ಚಿನ ಉದ್ಯೋಗಿಗಳು ನೆಲೆಸಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡುವಂತೆ ಅವರು ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT