ಇಂಫಾಲ್: ನಿಷೇಧಿತ ಸಂಘಟನೆ ನ್ಯಾಷನಲ್ ರೆವಲ್ಯೂಷನರಿ ಫ್ರಂಟ್ ಆಫ್ ಮಣಿಪುರ ( ಎನ್‌ಆರ್‌ಎಫ್‌ಎಂ) ಕರೆ ನೀಡಿದ್ದ 18 ತಾಸು ಬಂದ್, ಇಂಫಾಲ್ ಸೇರಿದಂತೆ ಕಣಿವೆಯ ಇತರ ಜಿಲ್ಲೆಗಳ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು.
ಐದು ಜಿಲ್ಲೆಗಳಲ್ಲಿ ಮಾರುಕಟ್ಟೆ, ವಾಣಿಜ್ಯ ಮಳಿಗೆಗಳು, ಬ್ಯಾಂಕ್‌ಗಳು ಬಾಗಿಲು ಮುಚ್ಚಿದ್ದವು. ಸಾರ್ವಜನಿಕ ಸಾರಿಗೆಗಳ ಸಂಚಾರ ಸ್ಥಗಿತಗೊಂಡು, ಖಾಸಗಿ ವಾಹನಗಳು ಮಾತ್ರ ಅಲ್ಲಲ್ಲಿ ಸಂಚರಿಸಿದವು. ಅಗತ್ಯ ಸೇವೆಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿತ್ತು.
ಎನ್‌ಆರ್‌ಎಫ್‌ಎಂ ಸಂಘಟನೆಯು ಶನಿವಾರ ರಾತ್ರಿಯಿಂದ ಬಂದ್‌ಗೆ ಕರೆ ನೀಡಿತ್ತು.
ಕಣಿವೆ ರಾಜ್ಯದ ವಿಲೀನಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 21, 1949ರಂದು ಮಣಿಪುರದ ಮಹಾರಾಜ ಬೋಧಚಂದ್ರ ಮತ್ತು ಭಾರತ ಸರ್ಕಾರದ ನಡುವೆ ಒಪ್ಪಂದ ನಡೆದಿತ್ತು. ಒಪ್ಪಂದದ ನಂತರ ಮಣಿಪುರವು ಅಖಂಡ ಭಾರತ ಭಾಗವಾಗಿತ್ತು. ಈ ಒಪ್ಪಂದವನ್ನು ವಿರೋಧಿಸಿ ಎನ್‌ಆರ್‌ಎಫ್‌ಎಂ ಬಂದ್‌ಗೆ ಕರೆ ನೀಡಿತ್ತು.
ಸ್ಫೋಟಕಗಳು, ಶೆಲ್ ವಶಕ್ಕೆ:
ಮಣಿಪುರದ ಚುರಾಚಂದಪುರ ಜಿಲ್ಲೆಯಲ್ಲಿ ನಡೆದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಫೋಟಕಗಳು ಮತ್ತು ರಾಕೆಟ್ ಶೆಲ್ ಪತ್ತೆಯಾಗಿವೆ ಎಂದು ಪೊಲೀಸ್ ಹೇಳಿಕೆಯಲ್ಲಿ ಶನಿವಾರ ತಿಳಿಸಲಾಗಿದೆ.
ಮೂರು ಸಣ್ಣ ಫಿರಂಗಿಗಳು, ಗ್ರನೇಡ್ ಮತ್ತಿತರ ವಸ್ತುಗಳು ಸಹ ಪತ್ತೆಯಾಗಿವೆ ಎಂದು ತಿಳಿಸಲಾಗಿದೆ.