ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ರಿಂದ 17 ವರ್ಷದ ಮಕ್ಕಳಿಗೆ ನೋವಾವ್ಯಾಕ್ಸ್‌ ಲಸಿಕೆ ತುರ್ತು ಬಳಕೆಗೆ ಅನುಮತಿ

Last Updated 23 ಮಾರ್ಚ್ 2022, 1:44 IST
ಅಕ್ಷರ ಗಾತ್ರ

12 ರಿಂದ 17 ವರ್ಷದ ಮಕ್ಕಳಿಗೆ ಅಮೆರಿಕ ಮೂಲದ ಕಂಪನಿ ನೋವಾವ್ಯಾಕ್ಸ್‌ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದೆ ಎಂದು ಕಂಪನಿ ತಿಳಿಸಿದೆ.

ಈ ವಯೋಮಾನದವರಿಗೆ ಲಸಿಕೆಯ ತುರ್ತು ಬಳಕೆಗೆ ಜಾಗತಿಕವಾಗಿ ಮೊದಲ ಬಾರಿಗೆ ಅನುಮೋದನೆ ಪಡೆದುಕೊಂಡಿದೆ. ಈ ಲಸಿಕೆಯನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವೊವ್ಯಾಕ್ಸ್ ಎಂಬ ಬ್ರಾಂಡ್ ಹೆಸರಿನಡಿಯಲ್ಲಿ ತಯಾರಿಸುತ್ತದೆ ಮತ್ತು ಮಾರಾಟ ಮಾಡುತ್ತದೆ.

12 ರಿಂದ 17 ವರ್ಷದ 2,247 ಜನರನ್ನು ಲಸಿಕೆ ಟ್ರಯಲ್‌ಗೆ ಬಳಸಿಕೊಳ್ಳಲಾಗಿದ್ದು, ಈ ಪ್ರಯೋಗದಲ್ಲಿ ಈ ಲಸಿಕೆಯು ಕೋವಿಡ್-19 ವಿರುದ್ಧ ಶೇ 80ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಳೆದ ತಿಂಗಳು ನೋವಾವ್ಯಾಕ್ಸ್ ತಿಳಿಸಿತ್ತು.

460 ಭಾರತೀಯ ಮಕ್ಕಳನ್ನು ಒಳಗೊಂಡಿದ್ದ ಕೊನೆಯ ಹಂತದ ಅಧ್ಯಯನದಲ್ಲಿ ಕೂಡ ಅದೇ ವಯಸ್ಸಿನ ಮಕ್ಕಳಲ್ಲಿ ನೋವಾವ್ಯಾಕ್ಸ್‌ ಲಸಿಕೆಯು ಪ್ರತಿರಕ್ಷಣೆ ಪ್ರತಿಕ್ರಿಯೆ ಉಂಟು ಮಾಡಿದೆ ಎಂದು ಕಂಪನಿಯು ಮಂಗಳವಾರ ಹೇಳಿದೆ.

12 ರಿಂದ 17 ವರ್ಷದ ವಯೋಮಾನದವರಿಗೆ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿರುವ ಕೋವಿಡ್-19 ವಿರುದ್ಧದ ನಾಲ್ಕನೇ ಲಸಿಕೆ ಇದಾಗಿದೆ. ಈ ಮೊದಲು ಕಾರ್ಬೆವ್ಯಾಕ್ಸ್, ಝೈಕೋವ್-ಡಿ ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಈಗಾಗಲೇ ಭಾರತದಲ್ಲಿ ಬಳಕೆಗೆ ಅನುಮೋದನೆ ಪಡೆದುಕೊಂಡಿವೆ.

‘ಕೋವಿಡ್ ವಿರುದ್ಧ ನೋವಾವ್ಯಾಕ್ಸ್‌ನ ಲಸಿಕೆ ಶೇ 80ರಷ್ಟು ಪರಿಣಾಮ ಹೊಂದಿದೆ ಎಂಬುದು ಸಾಬೀತಾಗಿದೆ. ಭಾರತದಲ್ಲಿಯೂ ಲಸಿಕೆಯ ಟ್ರಯಲ್‌ಗೆ ಅರ್ಜಿ ಸಲ್ಲಿಸಿದ್ದೇವೆ’ ಸೀರಂ ಇನ್‌ಸ್ಟಿಟ್ಯೂಟ್ ಜನವರಿಯಲ್ಲಿ ಹೇಳಿಕೊಂಡಿತ್ತು.

ಭಾರತದಲ್ಲಿ ಈಗಾಗಲೇ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಬಯಾಲಾಜಿಕಲ್ ಸಂಸ್ಥೆ ತಯಾರಿಸಿದ ಕಾರ್ಬೆವ್ಯಾಕ್ಸ್ ಲಸಿಕೆಯನ್ನು 12 ರಿಂದ 14 ವರ್ಷದ ಮಕ್ಕಳಿಗೆ ನೀಡಲಾಗುತ್ತಿದೆ. ನೋವಾವ್ಯಾಕ್ಸ್ ಲಸಿಕೆಗೆ ಭಾರತೀಯ ಔಷಧ ನಿಯಂತ್ರಕರು ಕಳೆದ ಡಿಸೆಂಬರ್‌ನಲ್ಲಿ 18 ವರ್ಷ ಮೇಲ್ಪಟ್ಟವರ ಬಳಕೆಗೆ ಅನುಮೋದನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT