ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದ ತೆರಿಗೆಗಳಲ್ಲಿ ಶೇ 50ರಷ್ಟು ಪಾಲು: 5 ರಾಜ್ಯಗಳ ಪ್ರತಿಪಾದನೆ

ಬಿಜೆಪಿಯೇತರ ಸರ್ಕಾರವಿರುವ 5 ರಾಜ್ಯಗಳ ಪ್ರತಿಪಾದನೆ
Published : 12 ಸೆಪ್ಟೆಂಬರ್ 2024, 16:08 IST
Last Updated : 12 ಸೆಪ್ಟೆಂಬರ್ 2024, 16:08 IST
ಫಾಲೋ ಮಾಡಿ
Comments

ತಿರುವನಂತಪುರ: ಕೇಂದ್ರದ ವಿವಿಧ ತೆರಿಗೆಗಳಲ್ಲಿ ರಾಜ್ಯಗಳಿಗೆ ಶೇ 50ರಷ್ಟು ಪಾಲು ನೀಡಬೇಕು ಎಂದು ಬಿಜೆಪಿಯೇತರ ಸರ್ಕಾರವಿರುವ ಐದು ರಾಜ್ಯಗಳು ಗುರುವಾರ ಪ್ರತಿಪಾದಿಸಿವೆ.

ಸೆಸ್‌ ಮತ್ತು ಸರ್ಚಾರ್ಜ್‌ಗಳಲ್ಲಿ ಹೆಚ್ಚಳ ಮಾಡುವ ಕೇಂದ್ರ ಸರ್ಕಾರದ ನಡೆಯನ್ನು ಕೂಡ ಬಲವಾಗಿ ವಿರೋಧಿಸಿವೆ. 

ತೆರಿಗೆ ಪಾಲಿನಲ್ಲಿ ಆಗುತ್ತಿರುವ ತಾರತಮ್ಯ ವಿರೋಧಿಸಿ ಹಾಗೂ ರಾಜ್ಯಗಳ ಬೇಡಿಕೆಗಳ ಕುರಿತು 16ನೇ ಹಣಕಾಸು ಆಯೋಗದ ಮೇಲೆ ಒತ್ತಡ ಹೇರುವುದಕ್ಕಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಆಯೋಜಿಸಿದ್ದ ವಿಪಕ್ಷಗಳ ಆಡಳಿತವಿರುವ ರಾಜ್ಯಗಳ ಹಣಕಾಸು ಸಚಿವರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.

ತೆರಿಗೆ ಪಾಲಿನಲ್ಲಿನ ತಾರತಮ್ಯ ವಿಚಾರವಾಗಿ ಹಣಕಾಸು ಆಯೋಗ ಮೇಲೆ ಒತ್ತಡ ಹೇರುವ ಉದ್ದೇಶಕ್ಕಾಗಿ ‘ಸಂಯುಕ್ತ ರಂಗ’ ರಚಿಸುವ ಅಗತ್ಯತೆಯನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು ಪ್ರತಿಪಾದಿಸಿದರು.

ಕರ್ನಾಟಕ, ಕೇರಳ, ಪಂಜಾಬ್‌, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ವಿತ್ತ ಸಚಿವರು ಸಭೆಯಲ್ಲಿ ಪಾಲ್ಗೊಂಡಿದ್ದರು. 

ತೆರಿಗೆಯಲ್ಲಿ ರಾಜ್ಯಗಳಿಗೆ ಬರಬೇಕಾದ ಪಾಲು ಸೇರಿದಂತೆ ವಿವಿಧ ವಿಷಯಗಳ ಕುರಿತ ಹಣಕಾಸು ಆಯೋಗಕ್ಕೆ ಸಲ್ಲಿಸಬೇಕಾದ ಜಂಟಿ ಹೇಳಿಕೆಯ ಕರಡುವನ್ನು ಸಿದ್ಧಪಡಿಸುವ ಕುರಿತು ಸಹ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಕೇಂದ್ರ ವಿಧಿಸುವ ಸೆಸ್‌ಗಳು ಹಾಗೂ ಸರ್ಚಾರ್ಜ್‌ಗೆ ಸಂಬಂಧಿಸಿ ಶೇ 5ರಷ್ಟು ಮಿತಿ ಜಾರಿಗೊಳಿಸಬೇಕು’ ಎಂಬ ಸಲಹೆ ನೀಡಿದರು.

ಕೇಂದ್ರ ಸರ್ಕಾರ ಸೆಸ್‌ ಮತ್ತು ಸರ್ಚಾರ್ಜ್‌ ಸಂಗ್ರಹಿಸಿದ್ದರಿಂದಾಗಿ ಕಳೆದ ವರ್ಷ ಕರ್ನಾಟಕ ಅಂದಾಜು ₹53 ಸಾವಿರ ಕೋಟಿ ಕಳೆದುಕೊಂಡಿತು.
ಕೃಷ್ಣ ಬೈರೇಗೌಡ, ಕಂದಾಯ ಸಚಿವ

‘ಶೇ 5ಕ್ಕಿಂತ ಹೆಚ್ಚು ಸೆಸ್‌ ಮತ್ತು ಸರ್ಚಾರ್ಜ್‌ ಸಂಗ್ರಹಗೊಂಡಲ್ಲಿ, ಹೆಚ್ಚುವರಿ ಕರವನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಭಾಗವಾಗಿ ಪರಿಗಣಿಸಬೇಕು’ ಎಂಬ ಸಲಹೆಯನ್ನೂ ಮುಂದಿಟ್ಟರು.

ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡಲು, 2011ರಲ್ಲಿದ್ದ ಜನಸಂಖ್ಯೆಯನ್ನು ಆಧಾರವನ್ನಾಗಿ ಪರಿಗಣಿಸುವ ಹಣಕಾಸು ಆಯೋಗದ ಕ್ರಮವನ್ನು ದಕ್ಷಿಣದ ಎಲ್ಲ ರಾಜ್ಯಗಳು ವಿರೋಧಿಸಿದವು.

ಕೇಂದ್ರದ ಈ ಕ್ರಮವು, ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ ರಾಜ್ಯಗಳಿಗೆ ದಂಡ ವಿಧಿಸಿದಂತಿದೆ. ಈ ವಿಚಾರದಲ್ಲಿ ವಿಫಲವಾಗಿರುವ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಲು ಅವಕಾಶ ನೀಡಿದಂತಾಗಿದೆ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.

ತಮಿಳುನಾಡು ಹಣಕಾಸು ಸಚಿವ ತಂಗಂ ತೆನ್ನರಸು, ಕೇರಳದ ಕೆ.ಎನ್‌.ಬಾಲಗೋಪಾಲ, ಪಂಜಾಬ್‌ನ ಹರ್ಪಾಲ್ ಸಿಂಗ್‌ ಚೀಮಾ, ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT