ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಮನೆಯಲ್ಲೇ ಕಿರುಕುಳ

Published 6 ಸೆಪ್ಟೆಂಬರ್ 2023, 11:17 IST
Last Updated 6 ಸೆಪ್ಟೆಂಬರ್ 2023, 11:17 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದಲ್ಲಿ 2022ನೇ ಸಾಲಿನಲ್ಲಿ ವರದಿಯಾದ ಮಕ್ಕಳ ಮೇಲಿನ ದೌರ್ಜನ್ಯದ ಒಟ್ಟು ಪ್ರಕರಣಗಳಲ್ಲಿ ಬಹುತೇಕವು ಸಂತ್ರಸ್ತರ ಮನೆಗಳಲ್ಲೇ ನಡೆದಿವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಸಮಿತಿ ಸಂಗ್ರಹಿಸಿದ ವರದಿ ತಿಳಿಸಿದೆ.

ಇದರಲ್ಲಿನ ಅಂಕಿ–ಅಂಶಗಳು ಸಂತ್ರಸ್ತರಿಗೆ ಅವರ ಮನೆಗಳೇ ಸುರಕ್ಷಿತವಲ್ಲ ಎಂಬುದನ್ನು ಸೂಚಿಸಿವೆ.

ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವಾರ್ಷಿಕ ವರದಿ 2022–23ರ ಪ್ರಕಾರ, ‘2022ರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ವರದಿಯಾದ 4,582 ಪ್ರಕರಣಗಳ ಪೈಕಿ, 1,004 ಘಟನೆಗಳಲ್ಲಿ ಸಂತ್ರಸ್ತರ ಮನೆಗಳೇ ಅಪರಾಧ ನಡೆದ ಸ್ಥಳಗಳಾಗಿವೆ. 722 ಪ್ರಕರಣಗಳಲ್ಲಿ ಆರೋಪಿಗಳ ಮನೆಗಳೇ ಅಪರಾಧ ನಡೆದ ಜಾಗವಾಗಿದೆ. 648 ಪ್ರಕರಣಗಳು ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ನಡೆದವಾಗಿವೆ’.

‘ಅಪರಾಧ ನಡೆದ ಸ್ಥಳಗಳನ್ನು ವಿಶ್ಲೇಷಿಸಿದಾಗ, 1004 ಪ್ರಕರಣಗಳಲ್ಲಿ ಮಕ್ಕಳು ತಮ್ಮ ಮನೆಗಳಲ್ಲೇ ದೌರ್ಜನ್ಯಕ್ಕೆ ಒಳಗಾಗಿದ್ದಾರೆ’ ಎಂಬುದು ಕಂಡುಬಂದಿದೆ ಎಂದು ವರದಿಯಲ್ಲಿದೆ.

ಶಾಲೆಗಳಲ್ಲಿ (133 ಪ್ರಕರಣ), ವಾಹನಗಳಲ್ಲಿ (102 ಪ್ರಕರಣ), ಹೋಟೆಲ್‌/ಲಾಡ್ಜ್‌ಗಳಲ್ಲಿ (99 ಪ್ರಕರಣ), ಧಾರ್ಮಿಕ ಸಂಸ್ಥೆಗಳಲ್ಲಿ (60 ಪ್ರಕರಣ), ಆಸ್ಪತ್ರೆಗಳು (29 ಪ್ರಕರಣ) ಮತ್ತು ಇನ್ನಿತರೆಡೆಯೂ ಸೇರಿದಂತೆ ದಾಖಲಾದ 4,582 ಪೋಕ್ಸೊ ಪ್ರಕರಣಗಳಲ್ಲಿ 4,642 ಮಕ್ಕಳು ಕಿರುಕುಳಕ್ಕೊಳಗಾಗಿದ್ದಾರೆ. ಇವರಲ್ಲಿ 4,008 ಬಾಲಕಿಯರು, 578 ಬಾಲಕರು. ದೌರ್ಜನ್ಯಕ್ಕೊಳಗಾದ 2,563 ಸಂತ್ರಸ್ತ ಮಕ್ಕಳು 15–18 ವಯಸ್ಸಿನವರು. 55 ಮಕ್ಕಳು ನಾಲ್ಕು ವರ್ಷದೊಳಗಿನವರು ಎಂದು ವರದಿ ತಿಳಿಸಿದೆ.

ಆರೋಪಿಗಳ ಪೈಕಿ ಶೇ 16ರಷ್ಟು ಪ್ರೇಮಿಗಳಿದ್ದರೆ, ಶೇ 12ರಷ್ಟು ನೆರೆಹೊರೆಯವರು, ಶೇ 9ರಷ್ಟು ಕುಟುಂಬ ಸದಸ್ಯರು, ಶೇ 8ರಷ್ಟು ಸಂಬಂಧಿಕರು, ಶೇ 3ರಷ್ಟು ಶಿಕ್ಷಕರಿದ್ದಾರೆ. ಶೇ 93ರಷ್ಟು ಆರೋಪಿಗಳು ಪುರುಷರು, ಮಹಿಳಾ ಆರೋಪಿಗಳ ಪಾಲು ಶೇ 2ರಷ್ಟಿದೆ ಎಂಬುದನ್ನು ಆಯೋಗ ಪತ್ತೆಹಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT