ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನ ಭದ್ರತಾ ಲೋಪ ಪ್ರಕರಣ: ಭಗತ್ ಸಿಂಗ್ ಗ್ರೂಪ್‌ನಲ್ಲಿದ್ದ ಆರೋಪಿಗಳು

Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಆರು ಮಂದಿ ಆರೋಪಿಗಳು ಭಗತ್ ಸಿಂಗ್ ಮತ್ತು ಚಂದ್ರಶೇಖರ ಆಜಾದ್ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಸೃಷ್ಟಿಸಿದ್ದ ಅರ್ಧ ಡಜನ್ನಿಗೂ ಹೆಚ್ಚಿನ ಗ್ರೂಪ್‌ಗಳ ಸದಸ್ಯರಾಗಿದ್ದರು ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ.

ಆರೋಪಿಗಳು ಹಾಗೂ ಆ ಗ್ರೂಪ್‌ಗಳ ಇತರ ಸದಸ್ಯರು, ಸ್ವಾತಂತ್ರ್ಯ ಹೋರಾಟಗಾರರ ಆಲೋಚನೆಗಳ ಬಗ್ಗೆ ಮತ್ತು ಅವರ ಚಿಂತನೆಗಳ ಬಗ್ಗೆ ನಿರಂತರವಾಗಿ ಚರ್ಚಿಸುತ್ತಿದ್ದರು. ಅವುಗಳಿಗೆ ಸಂಬಂಧಿಸಿದ ವಿಡಿಯೊ ತುಣುಕುಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಮೂಲಗಳು ವಿವರಿಸಿವೆ.

ಆರೋಪಿಗಳು ಕ್ರಾಂತಿಕಾರಿಗಳಿಂದ ಬಹುವಾಗಿ ಪ್ರಭಾವಿತರಾಗಿದ್ದರು ಎಂಬುದನ್ನು ಅವರ ಸಾಮಾಜಿಕ ಜಾಲತಾಣ ಖಾತೆಗಳು ಹೇಳುತ್ತಿವೆ. ಹೀಗೆ ಪ್ರಭಾವಿತರಾಗಿದ್ದ ಕಾರಣ ಅವರು ಭಗತ್ ಸಿಂಗ್‌ನ ಕೃತ್ಯವನ್ನು ಸಂಸತ್ತಿನಲ್ಲಿ ಅನುಕರಿಸಲು ತೀರ್ಮಾನಿಸಿದ್ದರು.

ಆರೋಪಿಗಳು ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸುವ ಯೋಜನೆಯನ್ನು ಸಿಗ್ನಲ್ಸ್‌ ಆ್ಯಪ್‌ ಮೂಲಕ ಹಂಚಿಕೊಂಡಿದ್ದರು, ಮೈಸೂರಿನಲ್ಲಿ ಕಳೆದ ವರ್ಷ ಭೇಟಿ ಮಾಡಿದ್ದರು. ಆರೋಪಿ ಮನೋರಂಜನ್ ಅವರು ಇತರರ ಪ್ರಯಾಣದ ವೆಚ್ಚಗಳನ್ನು ಭರಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಲ್ಕು ಮಂದಿ ಆರೋಪಿಗಳ ಮೊಬೈಲ್‌ ಫೋನ್‌ನ ಡುಪ್ಲಿಕೇಟ್‌ ಸಿಮ್‌ ಕಾರ್ಡ್‌ ಪಡೆದುಕೊಳ್ಳಲು ಪೊಲೀಸರು ಯತ್ನಿಸುತ್ತಿದ್ದಾರೆ. ಈ ಫೋನ್‌ಗಳನ್ನು ಆರೋಪಿಗಳು ಸುಟ್ಟುಹಾಕಿದ್ದಾರೆ. ಫೋನ್‌ನ ಕೆಲವು ತುಣುಕುಗಳನ್ನು ಮಾತ್ರ ಪೊಲೀಸರು ಸುಪರ್ದಿಗೆ ತೆಗೆದುಕೊಂಡಿದ್ದಾರೆ.ಭದ್ರತಾ ಲೋಪ

ಹೇಳಿಕೆಗಳ ವಿಡಿಯೊ ಚಿತ್ರೀಕರಣ

ಮೈಸೂರು: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದ ಆರೋಪಿ ಡಿ.ಮನೋರಂಜನ್‌ ಹಾಗೂ ಆತನ ಪೋಷಕರ ಹೇಳಿಕೆಗಳ ನಡುವೆ ಸಾಮ್ಯತೆ ಕಂಡು ಬಾರದ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ಮಂಗಳವಾರದ ವಿಚಾರಣೆಯ ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಿಕೊಂಡರು. ‌ಆರೋಪಿಯ ತಂದೆ ದೇವರಾಜೇಗೌಡ ಅವರ ಮೊಬೈಲ್‌ ಫೋನ್ ವಶಕ್ಕೆ ಪಡೆದುಕೊಂಡರು ಎಂದು ತಿಳಿದುಬಂದಿದೆ.

ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಮಹಿಳಾ ಅಧಿಕಾರಿ ಸೇರಿ ನಾಲ್ವರು ಅಧಿಕಾರಿಗಳು ವಿಜಯನಗರ ಎರಡನೇ ಹಂತದಲ್ಲಿರುವ ಆರೋಪಿಯ ಮನೆಗೆ ಬಂದು, ಆತನ ತಂದೆ, ತಾಯಿಯನ್ನು ಪ್ರತ್ಯೇಕವಾಗಿ 2 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಅವರು ಮಗನಿಗೆ ನೀಡುತ್ತಿದ್ದ ಹಣದ ಜೊತೆಗೆ, ಆತನ ಇನ್ನಿತರ ಹಣದ ಮೂಲಗಳ ಬಗ್ಗೆಯೂ ಕೇಳಿದರು ಎಂದು ಮೂಲಗಳು ತಿಳಿಸಿವೆ.

ಪಾಲಕರ ಅಸಹಾಯಕತೆ: ‘ಊರಿನಿಂದ ಹೊರಗೆ ಹೋಗಬಾರದೆಂದು ಪೊಲೀಸರು ಸೂಚಿಸಿದ್ದಾರೆ. ಮಾಧ್ಯಮದವರೂ ನಿತ್ಯ ಮನೆ ಮುಂದೆಯೇ ನಿಂತಿರುತ್ತಾರೆ. ಹೊರಗೆ ಹೋಗಲಾಗದೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ’ ಎಂದು ದೇವರಾಜೇಗೌಡ ದೆಹಲಿ ಅಧಿಕಾರಿಗಳೊಂದಿಗೆ ಅಸಹಾಯಕತೆ ತೋಡಿಕೊಂಡರು.

‘ಮಗ ದೆಹಲಿಯಲ್ಲಿ ಕೆಲಸದಲ್ಲಿದ್ದಾನೆ. ಅಲ್ಲಿಂದ ಆಗಾಗ ಕರೆ ಬರುತ್ತಿತ್ತು. ಮೈಸೂರಿನಲ್ಲಿರಲು ಆತನಿಗೆ ಸಮಯವೇ ಸಿಗದಂತಾಗಿದೆ ಎಂದು ಆರೋಪಿಯ ತಾಯಿ ಶೈಲಜಾ ನೆರೆಹೊರೆಯವರೊಂದಿಗೆ ಹೇಳಿಕೊಂಡಿದ್ದರು’ ಎಂದು ತಿಳಿದುಬಂದಿದೆ.

ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರುವ ಡಿ.ಮನೋರಂಜನ್‌ ಮನೆಯಲ್ಲಿ ಮಂಗಳವಾರ ಪೊಲೀಸ್‌ ಅಧಿಕಾರಿಗಳು ವಿಚಾರಣೆ ನಡೆಸಿ ತೆರಳಿದರು.

ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರುವ ಡಿ.ಮನೋರಂಜನ್‌ ಮನೆಯಲ್ಲಿ ಮಂಗಳವಾರ ಪೊಲೀಸ್‌ ಅಧಿಕಾರಿಗಳು ವಿಚಾರಣೆ ನಡೆಸಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT