ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸತ್‌ ಭದ್ರತಾ ಲೋಪ: ಮೆಟಾಗೆ ಪತ್ರ, ಆರೋಪಿಗಳ ಜಾಲತಾಣ ಖಾತೆಗಳ ವಿವರಕ್ಕೆ ಮನವಿ

Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್‌ ಭದ್ರತಾ ಲೋಪ ಪ್ರಕರಣದ ಆರು ಆರೋಪಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೊಂದಿರುವ ಖಾತೆಗಳ ವಿವರ ಒದಗಿಸುವಂತೆ ದೆಹಲಿ ಪೊಲೀಸರು ಮೆಟಾ ಕಂಪನಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆ್ಯಪ್‌ನ ಒಡೆತನವನ್ನು ಮೆಟಾ ಹೊಂದಿದೆ. ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಪರಿಚಿತರಾಗಿ, ಸಂಚು ರೂಪಿಸಿದ್ದರು. ಇದಕ್ಕಾಗಿ ಫೇಸ್‌ಬುಕ್‌ನಲ್ಲಿ ‘ಭಗತ್‌ ಸಿಂಗ್‌ ಅಭಿಮಾನಿಗಳ ಪುಟ’ ಆರಂಭಿಸಿದ್ದರಲ್ಲದೆ, ಬಳಿಕ ಆ ಪುಟವನ್ನು ಅಳಿಸಿ ಹಾಕಿದ್ದರು.

ಆರೋಪಿಗಳ ಖಾತೆಗಳಲ್ಲಿರುವ ವಿವರಗಳು ಹಾಗೂ ಭಗತ್‌ ಸಿಂಗ್‌ ಅಭಿಮಾನಿಗಳ ಪುಟದ ಮಾಹಿತಿ ನೀಡುವಂತೆ ಪೊಲೀಸರು ಮೆಟಾ ಕಂಪನಿಯನ್ನು ಕೇಳಿಕೊಂಡಿದ್ದಾರೆ ಎಂದು ಮೂಲಗಳು ಸೋಮವಾರ ಹೇಳಿವೆ. ವಾಟ್ಸ್‌ಆ್ಯಪ್‌ ಚಾಟ್‌ನ ವಿವರಗಳನ್ನು ನೀಡುವಂತೆಯೂ ಕೋರಿದ್ದಾರೆ. 

ಪ್ರಮುಖ ಸಂಚುಕೋರ ಲಲಿತ್‌ ಝಾ, ತನ್ನ ಹಾಗೂ ಇತರ ಆರೋಪಿಗಳ ಮೊಬೈಲ್‌ ಫೋನ್‌ಗಳನ್ನು ರಾಜಸ್ಥಾನದ ನಾಗೌರ್‌ನಲ್ಲಿ ಸುಟ್ಟುಹಾಕಿರುವುದಾಗಿ ಪೊಲೀಸರು ಹೇಳಿದ್ದಾರೆ. ಮೊಬೈಲ್‌ ಫೋನ್‌ಗಳ ಕೆಲವು ಭಾಗಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಪೊಲೀಸ್‌ ಸುಪರ್ದಿಗೆ ಬ್ಯಾಂಕ್‌ ಪಾಸ್‌ ಬುಕ್‌: ಡಿಸೆಂಬರ್ 13ರ ಸಂಚನ್ನು ಕಾರ್ಯಗತಗೊಳಿಸಲು ಯಾರಿಂದಾ ದರೂ ಹಣ ಪಡೆದಿದ್ದಾರೆಯೇ ಎಂಬ ಮಾಹಿತಿ ಕಲೆಹಾಕಲು ಪೊಲೀಸರು ಎಲ್ಲಾ ಆರೋಪಿಗಳ ಬ್ಯಾಂಕ್ ಖಾತೆ ವಿವರಗಳನ್ನು ಕಲೆಹಾಕಿದ್ದಾರೆ.

ದೆಹಲಿ ಪೊಲೀಸ್‌ ವಿಶೇಷ ಘಟಕದ ಪ್ರತ್ಯೇಕ ತಂಡಗಳು, ಆರೋಪಿಗಳ ಕುಟುಂಬ ಸದಸ್ಯರನ್ನು ಭಾನುವಾರ ಭೇಟಿಯಾಗಿ ಬ್ಯಾಂಕ್‌ ಖಾತೆ ವಿವರಗಳನ್ನು ಪಡೆದಿವೆ. ನೀಲಂ ದೇವಿ ಮತ್ತು ಸಾಗರ್‌ ಶರ್ಮಾ ಅವರ ಬ್ಯಾಂಕ್‌ ಪಾಸ್‌ ಬುಕ್‌ಅನ್ನು ಕ್ರಮವಾಗಿ ಹರಿಯಾಣದ ಜೀಂದ್‌ ಮತ್ತು ಉತ್ತರ ಪ್ರದೇಶದ ಲಖನೌನಲ್ಲಿರುವ ಮನೆಗಳಿಂದ ಪೊಲೀಸರು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.

ನ್ಯಾಯಾಂಗ ತನಿಖೆಗೆ ಕೋರಿ ಅರ್ಜಿ

ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ವಕೀಲರೊಬ್ಬರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಭದ್ರತಾ ಲೋಪವು ಬಹಳ ಯೋಜನಾಬದ್ಧವಾಗಿ, ಸಮನ್ವಯದಿಂದ ನಡೆಸಿದ ಕೃತ್ಯ ಎಂದು ವಕೀಲ ಅಬು ಸೊಹೇಲ್ ಅವರು ಅರ್ಜಿಯಲ್ಲಿ ಹೇಳಿದ್ದಾರೆ. ‘ಭದ್ರತೆಯ ಸಂಪೂರ್ಣ ವೈಫಲ್ಯ ಇಲ್ಲಿ ಆಗಿದೆ. ಸಂಸತ್ತಿನ ಒಳಗೆ ಅಕ್ರಮವಾಗಿ ಪ್ರವೇಶಿಸಿದವರು ಅಲ್ಲಿ ವಿಷಾನಿಲ ಪ್ರಯೋಗಿಸುವ ಸಾಧ್ಯತೆ ಇತ್ತು. ಅಥವಾ ಅವರು ಜೀವ ತೆಗೆಯುವ ಸಾಮರ್ಥ್ಯದ ಶಸ್ತ್ರಾಸ್ತ್ರ ಕೊಂಡೊಯ್ಯುವ ಅಪಾಯವೂ ಇತ್ತು’ ಎಂದು ಹೇಳಿದ್ದಾರೆ. ದೇಶದ ಅತ್ಯಂತ ಮಹತ್ವದ ಸಂಸ್ಥೆಯ (ಸಂಸತ್ತು) ಕಟ್ಟಡಕ್ಕೆ ನೀಡಿರುವ ಭದ್ರತೆಯು ಸೂಕ್ತ ರೀತಿಯಲ್ಲಿ ಇಲ್ಲ ಎಂದಾದರೆ, ದೇಶದ ಜನರ  ಜೀವ ಮತ್ತು ಆಸ್ತಿಗೆ ಕೂಡ ರಕ್ಷಣೆ ಇಲ್ಲದಂತೆ ಆಗುತ್ತದೆ ಎಂದು ಸೊಹೇಲ್ ಅವರು ವಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT