ನವದೆಹಲಿ: ‘ಲೋಕಸಭೆ ಕಲಾಪ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಿಂದ ಸಂಸದರ ಆಸನಗಳ ಮುಂಭಾಗದ ಮೇಜಿನ ಮೇಲೆ ಜಿಗಿದ ಇಬ್ಬರು ಅಪರಿಚಿತರು, ಹೊರಗೆ ಘೋಷಣೆ ಕೂಗಿದ ಇಬ್ಬರು ಸೇರಿ ಒಟ್ಟು ನಾಲ್ಕು ಜನರನ್ನು ಬಂಧಿಸಲಾಗಿದೆ. ಭದ್ರತಾ ಲೋಪ ಕುರಿತಂತೆ ಸಂಜೆ ಸಂಸದರ ಸಭೆ ನಡೆಸಲಾಗುವುದು’ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಂಸತ್ತಿನಲ್ಲಿ ಬುಧವಾರ ಹೇಳಿದ್ದಾರೆ.
ಶೂನ್ಯ ವೇಳೆಯಲ್ಲಿ ವೀಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಅಪರಿಚಿತರು ಸದನದೊಳಗೆ ನುಗ್ಗಿದ್ದಾರೆ. ಜತೆಗೆ ಹಳದಿ ಬಣ್ಣದ ಹೊಗೆ ಸಿಂಪಡಿಸಿ, ’ಸರ್ವಾಧಿಕಾರ ನಡೆಯುವುದಿಲ್ಲ’ ಎಂದು ಘೋಷಣೆಯನ್ನೂ ಕೂಗಿದ್ದಾರೆ. ಇದೇ ವೇಳೆ ಮಹಿಳೆ ಸೇರಿದಂತೆ ಇತರ ಇಬ್ಬರು ಹೊರಗೆ ಘೋಷಣೆ ಕೂಗಿದ್ದಾರೆ. ಈ ನಾಲ್ಕೂ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸತ್ ಭವನದ ಮೇಲೆ ದಾಳಿ ನಡೆದ 22ನೇ ವರ್ಷ ಪೂರ್ಣವಾದ ದಿನವೇ ನಡೆದಿರುವ ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.
ಘಟನೆಯಿಂದ ಆತಂಕಗೊಂಡ ಸಂಸದರು ಸದನದಿಂದ ಹೊರಗೆ ಓಡಿದರು. ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ವಿವಿಧ ಪಕ್ಷಗಳ ನಾಯಕರು ಘಟನೆ ಕುರಿತು ತಮ್ಮ ಆತಂಕ ವ್ಯಕ್ತಪಡಿಸಿದರು. ಘೋಷಿತ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಇತ್ತೀಚೆಗೆ ಕಳುಹಿಸಿದ ಬೆದರಿಕೆ ವಿಡಿಯೊ ಕುರಿತೂ ಮಾತುಗಳು ಕೇಳಿಬಂದವು. ಆದರೆ ಈ ವಿಷಯವನ್ನು ಸದನದೊಳಗೆ ಚರ್ಚಿಸುವುದು ಬೇಡ ಎಂದು ಸಭಾಧ್ಯಕ್ಷರು ಸೂಚಿಸಿದರು. ಸಭೆಯನ್ನು ಸಂಜೆ 4ರವರೆಗೆ ಮುಂದೂಡಲಾಯಿತು.
‘ಭದ್ರತಾ ಲೋಪ ಕುರಿತು ಲೋಕಸಭೆಯೂ ತನಿಖೆ ನಡೆಸಲಿದೆ. ಘಟನೆ ಕುರಿತು ಪ್ರತ್ಯೇಕ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೂ ನಿರ್ದೇಶಿಸಲಾಗುವುದು. ಸಂಸತ್ ಒಳಗೆ ಹಾರಿಸಲಾದ ಹಳದಿ ಬಣ್ಣದ ಹೊಗೆ ಅಪಾಯಕಾರಿ ಅಲ್ಲ ಎಂದು ಪೊಲೀಸರು ತಮ್ಮ ಪ್ರಾಥಮಿಕ ತನಿಖೆ ನಡೆಸಿ ಹೇಳಿದ್ದಾರೆ. ಗಮನ ಸೆಳೆಯಲು ಇದನ್ನು ಅವರು ಬಳಸಿರುವ ಸಾಧ್ಯತೆ ಕುರಿತೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.
‘ಸಂಸದರೊಂದಿಗೆ ಸಂಜೆ ಮತ್ತೊಂದು ಸಭೆ ನಡೆಸಲಾಗುವುದು. ಅವರ ಮಾತುಗಳನ್ನೂ ಆಲಿಸಲಾಗುವುದು’ ಎಂದು ಸ್ಪೀಕರ್ ಹೇಳಿದ್ದಾರೆ.
VIDEO | Additional forces deployed at the Parliament following a security breach inside the House earlier today. pic.twitter.com/I6v3TE6u6J
— Press Trust of India (@PTI_News) December 13, 2023
The visitor, who jumped into LS chamber from gallery, was seen leaping over benches
— Press Trust of India (@PTI_News) December 13, 2023
ಬಂಧಿತರಲ್ಲಿ ನೀಲಂ (42), ಅಮೋಲ್ ಶಿಂದೆ (25) ಅವರ ಗುರುತು ಪತ್ತೆಯಾಗಿದೆ. ಇವರನ್ನು ಟ್ರಾನ್ಸ್‌ಪೋರ್ಟ್ ಭವನ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಸತ್ ಭವನಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಘಟನೆಯ ಕಾವು ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿತು. ಗೃಹ ಸಚಿವರು ಸಭೆಗೆ ಬಂದು ಘಟನೆಯ ಮಾಹಿತಿ ನೀಡಬೇಕು ಎಂದು ಸದಸ್ಯರು ಪಟ್ಟು ಹಿಡಿದರು.
2001ರ ಇದೇ ದಿನ ಪಾಕಿಸ್ತಾನ ಮೂಲದ ಲಷ್ಕರ್ ಎ ತಯ್ಯಬಾ ಹಾಗೂ ಜೈಷ್ ಎ ಮೊಹಮ್ಮದ್ ಸಂಘಟನೆಯ ಭಯೋತ್ಪಾದಕರು ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಘಟನೆಯಲ್ಲಿ 9 ಜನ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.