ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಯಲ್ ಆತ್ಯಹತ್ಯೆಗೆ ರ‍್ಯಾಗಿಂಗ್‌ ಕಾರಣ; ಜಾತಿ ನಿಂದನೆಗೆ ಸಾಕ್ಷ್ಯವಿಲ್ಲ

Last Updated 11 ಜೂನ್ 2019, 7:24 IST
ಅಕ್ಷರ ಗಾತ್ರ

ಮುಂಬೈ: ಮುಂಬೈನ ಮೆಡಿಕಲ್‌ ವಿದ್ಯಾರ್ಥಿನಿ ಪಾಯಲ್‌ ತಡ್ವಿ ಅವರ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸುತ್ತಿರುವವಿಶೇಷ ತನಿಖಾ ತಂಡ 16 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ‘ರ‍್ಯಾಗಿಂಗ್‌ ನಡೆದಿರುವುದಕ್ಕೆ ಸಾಕ್ಷಿ ಇದೆಯೇ ಹೊರತು, ಜಾತಿ ನಿಂದನೆ ಮಾಡಿದ್ದಕ್ಕೆ ಸಾಕ್ಷ್ಯವಿಲ್ಲ,’ ಎಂದಿದೆ.

ವಿಪರೀತ ಒತ್ತಡ, ಹೆಚ್ಚಿನ ಅವಧಿಯ ಕೆಲಸ, ವಿಭಾಗದ ಮುಖ್ಯಸ್ಥರ ನಿರ್ಲಕ್ಷ್ಯಪಾಯಲ್‌ ಅವರ ಸಾವಿಗೆ ಕಾರಣ ಎಂದು ತನಿಖಾ ತಂಡ ಬೊಟ್ಟು ಮಾಡಿದೆ. ಈ ವರದಿಯಲ್ಲಿ ವೈದ್ಯರು, ಹಾಸ್ಟೇಲ್‌ ಒಡನಾಡಿಗಳು, ಪಾಯಲ್‌ ಅವರ ಕುಟುಂಬಸ್ಥರು ಮತ್ತು ಮೂವರು ಆರೋಪಿಗಳೂ ಸೇರಿದಂತೆ ಒಟ್ಟು 32 ಮಂದಿಯ ಹೇಳಿಕೆಗಳನ್ನು ತನಿಖಾ ತಂಡ ದಾಖಲಿಸಿದೆ.

ಪಾಯಲ್‌ ಅವರ ವಿಚಾರದಲ್ಲಿ ಅವರ ವಿಭಾಗದ ಮುಖ್ಯಸ್ಥರು ವಹಿಸಿದ ನಿರ್ಲಕ್ಷ್ಯವು ಅಕೆಯನ್ನು ಆತ್ಮಹತ್ಯೆಗೆ ದೂಡಿತು ಎಂದೂ ಹೇಳಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಹೀಗಾಗದಂತೆ ಎಚ್ಚರ ವಹಿಸುವ ಸಂಬಂಧ ತನಿಖಾ ತಂಡವು ಹಲವು ಶಿಫಾರಸುಗಳನ್ನೂ ನೀಡಿದೆ ಎಂದು ರಾಷ್ಟ್ರ ಮಟ್ಟದ ಆಂಗ್ಲ ಪತ್ರಿಕೆ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಮುಂಬೈನ ಟಿಎನ್‌ ಟೋಪಿವಾಲ ನ್ಯಾಷನಲ್‌ ಮೆಡಿಕಲ್‌ ಕಾಲೇಜಿನಲ್ಲಿ ದ್ವೀತಿಯಾ ವರ್ಷದ ಗರ್ಭಶಾಸ್ತ್ರದ ವಿದ್ಯಾರ್ಥಿನಿಯಾಗಿದ್ದ ಪಾಯಲ್‌ ತಡ್ವಿ ಅವರು ಕಾಲೇಜಿಗೆ ಹೊಂದಿಕೊಂಡೇ ಇರುವ ಬಿವೈಎಲ್‌ ನಾಯರ್‌ ವಸತಿ ಗೃಹದಲ್ಲಿಮೇ 22ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದ ಪಾಯಲ್‌ ತಾಯಿ ಕಾಲೇಜಿನ ಮೂವರು ಆಕೆಗೆ ಜಾತಿ ನಿಂದನೆ ಮಾಡಿದ್ದರು, ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು.

ಪಾಯಲ್‌ ಸಾವಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ಸಾಮಾಜಿಕ ತಾಣಗಳಲ್ಲಿ ಆಂದೋಲನ ನಡೆದಿತ್ತು. ಇದೇ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT