ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪಿ.ಸಿ.ಜಾರ್ಜ್‌ಗೆ ಜಾಮೀನು

Last Updated 1 ಮೇ 2022, 12:31 IST
ಅಕ್ಷರ ಗಾತ್ರ

ತಿರುವನಂತಪುರ: ಮುಸ್ಲಿಮರ ಕುರಿತುವಿವಾದಾತ್ಮಕ ಹೇಳಿಕೆ ನೀಡಿ ಭಾನುವಾರ ಬಂಧನಕ್ಕೆ ಒಳಗಾಗಿದ್ದ ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್‌ ಅವರಿಗೆ ಅದೇ ದಿನ ಇಲ್ಲಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಜಾಮೀನು ನೀಡಿದೆ.‌

ಜಾರ್ಜ್‌ ಅವರನ್ನು ಸ್ವಗೃಹದಲ್ಲಿ ಬಂಧಿಸಿದ ಬಳಿಕ ತಿರುವನಂತಪುರಕ್ಕೆ ಕರೆತಂದು ಹೇಳಿಕೆ ದಾಖಲಿಸಲಾಯಿತು. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಅವರಿಗೆ ಮ್ಯಾಜಿಸ್ಟ್ರೇಟ್‌ ಅವರು ಜಾಮೀನು ನೀಡಿದರು.

ಬಳಿಕ ನ್ಯಾಯಾಲಯ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಾರ್ಜ್‌, ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ದ್ವೇಷ ಭಾಷಣ ಮಾಡ ಕೂಡದು ಹಾಗೂ ಯಾವ ವಿವಾದದಲ್ಲಿ ಭಾಗಿಯಾಗಬಾರದೆಂದು ಹೇಳಿ ಕೋರ್ಟ್‌ ಜಾಮೀನು ನೀಡಿದೆ ಎಂದು ತಿಳಿಸಿದರು.

'ನನ್ನ ಹೇಳಿಕೆ ಹೇಗೆ ಒಂದು ಧರ್ಮದ ವಿರುದ್ಧ ಆಗುತ್ತದೆ' ಎಂದು ಪ್ರಶ್ನಿಸಿದ ಅವರು, ‘ನನ್ನನ್ನು ಬಂಧಿಸುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮುಸ್ಲಿಂ ಮೂಲಭೂತವಾದಿಗಳಿಗೆ ರಂಜಾನ್‌ ಹಬ್ಬದ ಉಡುಗೊರೆ ನೀಡಿದ್ದಾರೆ’ ಎಂದು ಆರೋಪಿಸಿದರು.

ದೇಶವನ್ನು ಪ್ರೀತಿಸದ ಯಾವ ಧರ್ಮದ ಮೂಲಭೂತವಾದಿಗಳ ಬೆಂಬಲ ಅಥವಾ ಮತಗಳು ಬೇಕಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಜಾರ್ಜ್‌ ಭಾಷಣವೊಂದರಲ್ಲಿ ಹೇಳಿದ್ದರು.

ವಿವಿಧ ಧರ್ಮಗಳ ನಡುವೆ ದ್ವೇಷ ಬಿತ್ತಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ 153ಎ ಅಡಿಯಲ್ಲಿ ತಿರುವನಂತಪುರದ ಪೊಲೀಸರು ಪೊಲೀಸ್‌ ಮಹಾನಿರ್ದೇಶಕ ಅನಿಲ್‌ ಕಾಂತ್‌ ಅವರ ನಿರ್ದೇಶನದ ಮೇರಗೆ ಬಂಧಿಸಿದ್ದರು. ಶನಿವಾರ ಎಫ್‌ಐಆರ್‌ ದಾಖಲಾಗಿತ್ತು. ಜಾರ್ಜ್‌ ಅವರನ್ನು ಬಂಧಿಸಿದ ಬಳಿಕ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಪೊಲೀಸ್‌ ವಾಹನದಲ್ಲಿ ಸಾಗುತ್ತಿದ್ದ ಜಾರ್ಜ್‌ಗೆ ಹಲವು ಸ್ಥಳಗಳಲ್ಲಿ ಬಿಜೆಪಿ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದರು. ಇದೇ ವೇಳೆಯಲ್ಲಿ ಡೆಮಾಕ್ರೆಟಿಕ್‌ ಯೂತ್‌ ಫೆಡರೇಷನ್‌ ಆಫ್‌ ಇಂಡಿಯಾ(ಡಿಐಎಫ್‌ಐ) ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಜಾರ್ಜ್‌ ಅವರನ್ನು ಇರಿಸಲಾಗಿದ್ದ ಪೊಲೀಸ್‌ ಮೀಸಲು ಪಡೆ ಆವರಣವನ್ನು ಡಿಐಎಫ್‌ಐ ಕಾರ್ಯಕರ್ತರು ಪ್ರವೇಶಿಸುವುದಕ್ಕೆ ಅನುಮತಿ ನಿರಾಕರಿಸಲಾಯಿತು. ಪ್ರತಿಭಟನಕಾರರ ಗುಂಪೊಂದು ಜಾರ್ಜ್‌ ಅವರನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಮೊಟ್ಟೆ ಎಸೆದ ವಿಡಿಯೊವನ್ನು ವಿದ್ಯುನ್ಮಾನ ಮಾಧ್ಯಮಗಳು ಪ್ರಸಾರ ಮಾಡಿವೆ.

ಅನಂತಪುರಿ ಹಿಂದೂ ಮಹಾ ಸಮ್ಮೇಳನದಲ್ಲಿ ಜಾರ್ಜ್‌ ಅವರು, ಕೇರಳದಲ್ಲಿ ಮುಸ್ಲಿಮರು ನಡೆಸುತ್ತಿರುವ ರೆಸ್ಟೋರೆಂಟ್‌ಗಳಿಗೆ ಮುಸ್ಲಿಮೇತರರು ಹೋಗಬಾರದು ಎಂದು ಹೇಳಿದ್ದು ವಿವಾದದ ಕಿಡಿ ಹೊತ್ತಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT