ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಕೋರ್ಟ್‌ ಸೇವೆ ವಿಸ್ತರಣೆಗೆ ಹೊಸ ಕಟ್ಟಡ: ಸಿಜೆಐ ಚಂದ್ರಚೂಡ್‌

ಜನರ ನಂಬಿಕೆಗೆ ಅನುಸಾರ ನ್ಯಾಯ ಕಲ್ಪಿಸಲು ಒತ್ತು: ಸಿಜೆಐ ಚಂದ್ರಚೂಡ್‌
Published 15 ಆಗಸ್ಟ್ 2023, 16:23 IST
Last Updated 15 ಆಗಸ್ಟ್ 2023, 16:23 IST
ಅಕ್ಷರ ಗಾತ್ರ

ನವದೆಹಲಿ: ‘ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸುಪ್ರೀಂ ಕೋರ್ಟ್‌ನ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಲು ಹೊಸ ಕಟ್ಟಡ ನಿರ್ಮಿಸಲಾಗುತ್ತದೆ. ಈ ಕಟ್ಟಡದಲ್ಲಿ 27 ಹೆಚ್ಚುವರಿ ನ್ಯಾಯಾಲಯದ ಕೊಠಡಿಗಳು, ರಿಜಿಸ್ಟ್ರಾರ್‌ ಕೊಠಡಿಗಳು ಸೇರಿದಂತೆ ವಕೀಲರು ಮತ್ತು ದಾವೆದಾರರಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ವಕೀಲರ ಸಂಘವು ಮಂಗಳವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನೂತನ ಕಟ್ಟಡವು ಸಾಂವಿಧಾನಿಕ ಆಶಯವನ್ನು ಪ್ರತಿಬಿಂಬಿಸಲಿದೆ. ಭಾರತೀಯ ನಾಗರಿಕರ ನಂಬಿಕೆ ಮತ್ತು ಆದ್ಯತೆಗೆ ಅನುಗುಣವಾಗಿ ನ್ಯಾಯ ಪಡೆಯಲು ಈ ಕಟ್ಟಡದ ಮೂಲಕ ಹೆಚ್ಚುವರಿ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು.

ಎರಡು ಹಂತದಲ್ಲಿ ಕಟ್ಟಡ ನಿರ್ಮಾಣ ಪ್ರಕ್ರಿಯೆಯು ನಡೆಯಲಿದೆ. ಮೊದಲ ಹಂತದಲ್ಲಿ ಮ್ಯೂಸಿಯಂ ಮತ್ತು ಅದಕ್ಕೆ ಹೊಂದಿಕೊಂಡಿರುವ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗುತ್ತದೆ. ಇದರಲ್ಲಿ 15 ಹೆಚ್ಚುವರಿ ನ್ಯಾಯಾಲಯದ ಕೊಠಡಿಗಳು ಇರಲಿವೆ. ಜೊತೆಗೆ, ಸುಪ್ರೀಂ ಕೋರ್ಟ್‌ನ ವಕೀಲರ ಸಂಘಕ್ಕೆ ಗ್ರಂಥಾಲಯ, ಸಂಘದ ಅಧಿಕಾರಿಗಳ ಕಚೇರಿ, ವಕೀಲರು ಮತ್ತು ದಾವೆದಾರರಿಗೆ ಕ್ಯಾಂಟೀನ್‌ ಹಾಗೂ ವಕೀಲೆಯರ ಸಂಘದ ಕೊಠಡಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.

ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದ ಪ್ರಸ್ತಾವಕ್ಕೆ ಅನುಗುಣವಾಗಿ ವಿಸ್ತೃತ ಯೋಜನೆ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಎರಡನೇ ಹಂತದಲ್ಲಿ 12 ಹೆಚ್ಚುವರಿ ನ್ಯಾಯಾಲಯದ ಕೊಠಡಿಗಳು ಮತ್ತು ರಿಜಿಸ್ಟ್ರಾರ್‌ ಕೊಠಡಿಗಳು, ವಕೀಲರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಲಾಗುತ್ತದೆ ಎಂದರು.

ನ್ಯಾಯಾಂಗ ವ್ಯವಸ್ಥೆಯ ಪ್ರಕ್ರಿಯೆಯನ್ನು ಸುತ್ತುವರಿದಿರುವ ಅಸಮರ್ಥತೆ ಹಾಗೂ ಅಸ್ಪಷ್ಟತೆಯನ್ನು ಹೋಗಲಾಡಿಸಲು ತಂತ್ರಜ್ಞಾನ ಬಹುಮುಖ್ಯ ಸಾಧನವಾಗಿದೆ. ಮೂರನೇ ಹಂತದಲ್ಲಿ ಇ–ಕೋರ್ಟ್‌ ಯೋಜನೆ ಮೂಲಕ ಇದನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ತಿಳಿಸಿದರು.

ದೇಶದ ಎಲ್ಲಾ ನ್ಯಾಯಾಲಯಗಳನ್ನು ಒಂದೇ ವೇದಿಕೆಯಡಿ ಜೋಡಿಸುವ ಈ ಕ್ರಾಂತಿಕಾರಿ ಯೋಜನೆಗೆ ₹ 7 ಸಾವಿರ ಕೋಟಿ ವೆಚ್ಚವಾಗಲಿದೆ. ಕೋರ್ಟ್‌ಗಳಲ್ಲಿ ಕಾಗದರಹಿತ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ನ್ಯಾಯಾಂಗ ದಾಖಲೆಗಳ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುವುದು. ಜೊತೆಗೆ, ಇ–ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ವಿವರಿಸಿದರು.

‘ದೇಶದ ಜನಸಾಮಾನ್ಯರ ದೈನಂದಿನ ಹೋರಾಟದ ಚರಿತ್ರೆಯೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಇತಿಹಾಸವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸುಲಭವಾಗಿ ನ್ಯಾಯ ಪಡೆಯಲು ಇರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವುದೇ ನ್ಯಾಯಾಂಗ ವ್ಯವಸ್ಥೆಯ ಮುಂದಿರುವ ದೊಡ್ಡ ಸವಾಲಾಗಿದೆ’ ಎಂದ ಅವರು, ‘ಪತ್ರಗಳು, ಸಾಮಾಜಿಕ ಮಾಧ್ಯಮಗಳ ಮೂಲಕ ಸಲ್ಲಿಕೆಯಾಗುವ ದೂರುಗಳನ್ನು ಖುದ್ದಾಗಿ ಆಲಿಸುತ್ತೇನೆ’ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌, ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಇದ್ದರು.

ಸುಪ್ರೀಂ ಕೋರ್ಟ್‌ನಿಂದ ಇಲ್ಲಿಯವರೆಗೆ 35 ಸಾವಿರ ತೀರ್ಪುಗಳು ಪ್ರಕಟಗೊಂಡಿವೆ. ಎಲ್ಲವೂ ಪ್ರಾದೇಶಿಕ ಭಾಷೆಗಳಲ್ಲಿ ಜನರಿಗೆ ದೊರೆಯುವಂತೆ ಕ್ರಮವಹಿಸಲಾಗುವುದು
ಡಿ.ವೈ. ಚಂದ್ರಚೂಡ್‌ ಸಿಜೆಐ ಸುಪ್ರೀಂ ಕೋರ್ಟ್‌

ಪ್ರಾದೇಶಿಕ ಭಾಷೆಗಳಿಗೆ 9423 ತೀರ್ಪು ಭಾಷಾಂತರ

‘ಇಲ್ಲಿಯವರೆಗೂ ಸುಪ್ರೀಂ ಕೋರ್ಟ್‌ನ 9423 ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲಾಗಿದೆ’ ಎಂದು ಸಿಜೆಐ ಚಂದ್ರಚೂಡ್‌ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ಸಂದೇಶದಲ್ಲಿ ಸ್ಥಳೀಯ ಭಾಷೆಗಳಿಗೆ ತೀರ್ಪುಗಳನ್ನು ಭಾಷಾಂತರಿಸುವ ಸುಪ್ರೀಂ ಕೋರ್ಟ್‌ನ ನಡೆಯನ್ನು ಶ್ಲಾಘಿಸಿದ್ದನ್ನು ಉಲ್ಲೇಖಿಸಿದ ಚಂದ್ರಚೂಡ್ ಅವರು ‘ಸುಪ್ರೀಂ ಕೋರ್ಟ್‌ನ ಎಲ್ಲಾ ತೀರ್ಪುಗಳನ್ನು ದೇಶದ 15 ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲಾಗುತ್ತಿದೆ’ ಎಂದರು. ಸದ್ಯ ಹಿಂದಿಯಲ್ಲಿ 8977 ತಮಿಳು 128 ಗುಜರಾತಿ 86 ಮಲಯಾಳ 50 ಒಡಿಯಾ 50 ತೆಲುಗು 33 ಬೆಂಗಾಳಿ 31 ಕನ್ನಡ 24 ಮರಾಠಿ 20 ಪಂಜಾಬಿ 20 ಅಸ್ಸಾಮಿ 4 ನೇಪಾಳಿ 4 ಉರ್ದು 3 ಸೇರಿದಂತೆ ಗಾರೋ ಮತ್ತು ಖಾಸಿ ಭಾಷೆಯಲ್ಲಿ ತಲಾ ಒಂದು ತೀರ್ಪು ಲಭ್ಯವಿದೆ ಎಂದು ವಿವರಿಸಿದರು.

- ಕಟ್ಟಡ ನೆಲಸಮಕ್ಕೆ ಸಿಜೆಐ ಆಕ್ಷೇಪ

ನವದೆಹಲಿ: ‘ಸ್ವೇಚ್ಛೆಯಾಗಿ ವ್ಯಕ್ತಿಗಳನ್ನು ಬಂಧಿಸುವುದು ಹಾಗೂ ಕಾನೂನುಬಾಹಿರವಾಗಿ ಕಟ್ಟಡಗಳನ್ನು ನೆಲಸಮಗೊಳಿಸುವವರ ವಿರುದ್ಧ ನ್ಯಾಯಾಧೀಶರು ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳುವ ಮೂಲಕ ನೊಂದವರ ಧ್ವನಿಯಾಗಿ ಕೆಲಸ ಮಾಡಬೇಕಿದೆ’ ಎಂದು ಸಿಜೆಐ ಚಂದ್ರಚೂಡ್‌ ಸೂಚಿಸಿದ್ದಾರೆ. ‘ಇಂತಹ ಯಾವುದೇ ಪ್ರಕರಣವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಸಂತ್ರಸ್ತರ ನೋವಿಗೆ ಸ್ಪಂದಿಸುವುದೇ ನ್ಯಾಯಾಂಗದ ಶ್ರೇಷ್ಠತೆಯಾಗಿದೆ’ ಎಂದರು. ಈ ವೇಳೆ ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಉತ್ತರ ಪ್ರದೇಶ ಮಧ್ಯಪ್ರದೇಶದಲ್ಲಿ ಅಲ್ಲಿನ ಸ್ಥಳೀಯ ಆಡಳಿತವು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಸಂಬಂಧಿಸಿದ ಸ್ವತ್ತುಗಳನ್ನು ನೆಲಸಮಗೊಳಿಸಿದೆ. ಹರಿಯಾಣದ ನೂಹ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪ ಸಂಬಂಧ ಬಂಧಿಸಿದ್ದ ಆರೋಪಿಗಳ ಸ್ವತ್ತುಗಳನ್ನೂ ಕೆಡವಲಾಗಿದೆ. ಬಿಜೆಪಿ ನೇತೃತ್ವದ ಸರ್ಕಾರಗಳಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಇಂತಹ ಧೋರಣೆ ತಳೆಯಲಾಗುತ್ತಿದೆ ಎನ್ನಲಾಗಿದೆ. ಈ ನಡುವೆಯೇ ಸಿಜೆಐ ಅವರ ಈ ಸೂಚನೆಯು ಮಹತ್ವ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT