ಬ್ಲ್ಯಾಕ್ಸ್ ಬಾಕ್ಸ್ ಪತ್ತೆ: ತನಿಖೆಗೆ ನೆರವು
ನವದೆಹಲಿ: ಪತನಗೊಂಡಿದ್ದ ಏರ್ ಇಂಡಿಯಾ ಬೋಯಿಂಗ್ 787–8 ವಿಮಾನದ ಬ್ಲ್ಯಾಕ್ ಬಾಕ್ಸ್ ‘ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್’ (ಸಿವಿಆರ್) ಮತ್ತು ‘ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್’ (ಡಿಎಫ್‌ಡಿಆರ್) ಪತ್ತೆಯಾಗಿರುವುದು ದುರಂತದ ಕಾರಣ ಪತ್ತೆಗೆ ತನಿಖಾಧಿಕಾರಿಗಳಿಗೆ ಮತ್ತಷ್ಟು ನೆರವಾಗಿದೆ. ಕೆಲವೊಮ್ಮೆ ಒಂದೇ ಬ್ಲ್ಯಾಕ್‌ಬಾಕ್ಸ್‌ನಲ್ಲಿ ಸಿವಿಆರ್ ಮತ್ತು ಡಿಎಫ್‌ಡಿಆರ್ ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ಸಿವಿಆರ್ ಮತ್ತು ಡಿಎಫ್‌ಡಿಆರ್ ಪ್ರತ್ಯೇಕವಾಗಿರುತ್ತವೆ. ಸಿವಿಆರ್‌ನಲ್ಲಿ ಕಾಕ್‌ಪಿಟ್ ಮತ್ತು ಪೈಲಟ್‌ಗಳ ಸಂವಹನವು ರೆಕಾರ್ಡ್ ಆಗಿರುತ್ತದೆ. ಡಿಎಫ್‌ಡಿಆರ್‌ನಲ್ಲಿ ವಿಮಾನ ಹಾರಾಟದ ಎತ್ತರ ಗಾಳಿಯ ವೇಗ ಸೇರಿದಂತೆ 80 ರೀತಿಯ ಮಾಹಿತಿ ಸಂಗ್ರಹವಾಗಿರುತ್ತದೆ. ಬ್ಲ್ಯಾಕ್ ಬಾಕ್ಸ್ ಎಂದು ಕರೆದರೂ ಇದು ಕಿತ್ತಳೆ ಅಥವಾ ಹಳದಿ ಬಣ್ಣದಲ್ಲಿರುತ್ತದೆ. ತಜ್ಞರಿಗೆ ಇದರಲ್ಲಿರುವ ಮಾಹಿತಿಯನ್ನು ಕಲೆಹಾಕಲು ಅಂದಾಜು ಎರಡು ವಾರಗಳು ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.