ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಐದು ವಂದೇ ಭಾರತ್ ರೈಲುಗಳಿಗೆ ಭೋಪಾಲ್‌ನಿಂದ ಒಮ್ಮೆಲೆ ಚಾಲನೆ ನೀಡಿದ ಪ್ರಧಾನಿ ಮೋದಿ

ಧಾರವಾಡದಿಂದಲೂ ಕರ್ನಾಟಕದ ಎರಡನೇ ವಂದೇ ಭಾರತ್ ರೈಲಿಗೆ ಇಂದು ಚಾಲನೆ ನೀಡಲಾಯಿತು.
Published 27 ಜೂನ್ 2023, 6:00 IST
Last Updated 27 ಜೂನ್ 2023, 6:00 IST
ಅಕ್ಷರ ಗಾತ್ರ

ಭೋಪಾಲ್ : ಧಾರವಾಡ–ಬೆಂಗಳೂರು ಮಧ್ಯೆ ಸಂಚರಿಸಲಿರುವ ಕರ್ನಾಟಕದ ಎರಡನೇ ವಂದೇ ಭಾರತ್ ರೈಲು ಸೇರಿದಂತೆ ದೇಶದ ಪ್ರಮುಖ ಸ್ಥಳಗಳ ನಡುವೆ ಸಂಪರ್ಕ ಬೆಸೆಯುವ ಐದು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ದಕ್ಷಿಣ ಭಾರತದ ಮೊಟ್ಟ ಮೊದಲ ವಂದೇ ಭಾರತ್‌ ರೈಲು ಮೈಸೂರು-ಚೆನ್ನೈ ಮಾರ್ಗದಲ್ಲಿ ಈಗಾಗಲೇ ಸಂಚರಿಸುತ್ತಿದೆ.  

ಮಧ್ಯಪ್ರದೇಶದ ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ಮೋದಿ ಅವರು ಎರಡು ರೈಲುಗಳಿಗೆ ಹಸಿರು ನಿಶಾನೆ ತೋರಿದರೆ ಉಳಿದ ಮೂರು ಎಕ್ಸ್‌ಪ್ರೆಸ್‌ಗಳಿಗೆ ವರ್ಚುವಲ್‌ ಆಗಿ ಚಾಲನೆ ನೀಡಿದರು. 

ಇಲ್ಲಿನ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆಯೇ ಆಗಮಿಸಿದ ಅವರನ್ನು ಹೆಲಿಕಾಪ್ಟರ್‌ ಮೂಲಕ  ಉದ್ಘಾಟನಾ ಸ್ಥಳಕ್ಕೆ ಕರೆದೊಯ್ಯಲು ಉದ್ದೇಶಿಸಲಾಗಿತ್ತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಅವರು ರಸ್ತೆ ಮೂಲಕವೇ ತೆರಳಿದರು.

‘ಈ ಐದೂ ರೈಲುಗಳು ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಬಿಹಾರ ಮತ್ತು ಜಾರ್ಖಂಡ್‌ನ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸುತ್ತವೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ. 

ಒಂದೇ ದಿನದಲ್ಲಿ ಐದು ರೈಲುಗಳ ಸೇವೆಗೆ ಮೋದಿ ಚಾಲನೆ ನೀಡಿದ್ದು, ಇದೇ ಮೊದಲು. ಈ ವರ್ಷಾಂತ್ಯದಲ್ಲಿ, ಮಧ್ಯಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ರಾಜ್ಯಕ್ಕೆ ಎರಡು ವಂದೇ ಭಾರತ್‌ ರೈಲುಗಳ ಸೇವೆ ಒದಗಿಸಲಾಗಿದೆ.

ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಕೈಗಾರಿಕೋದ್ಯಮಿಗಳನ್ನು ಗಮನದಲ್ಲಿಟ್ಟುಕೊಂಡು ಧಾರವಾಡ–ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭಿಸಲಾಗಿದೆ. ಈ ಮಾರ್ಗದಲ್ಲಿ ಹಾಲಿ ಚಲಿಸುತ್ತಿರುವ ಅತಿವೇಗದ ರೈಲುಗಿಂತ 30 ನಿಮಿಷ ಇದು ಬೇಗ ತಲುಪುತ್ತದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ. 

ಈ ವೇಳೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮಧ್ರಪ್ರದೇಶದ ರಾಜ್ಯಪಾಲ ಮಂಗೂಭಾಯಿ ಪಟೇಲ್, ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಕೇಂದ್ರ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌, ಜ್ಯೋತಿರಾದಿತ್ಯ ಸಿಂಧಿಯಾ ಹಾಜರಿದ್ದರು.

ಚಾಲನೆಗೊಂಡ ಐದು ರೈಲುಗಳು 

  • ರಾಣಿ ಕಮಲಾಪತಿ(ಭೋಪಾಲ್)–ಜಬಲ್‌ಪುರ್‌ ಎಕ್ಸ್‌ಪ್ರೆಸ್‌

  • ಖಜುರಾಹೊ–ಭೋಪಾಲ್–ಇಂಧೋರ್‌ ಎಕ್ಸ್‌ಪ್ರೆಸ್‌

  • ಮಡಗಾಂವ್(ಗೋವಾ)–ಮುಂಬೈ ಎಕ್ಸ್‌ಪ್ರೆಸ್‌

  • ಧಾರವಾಡ–ಬೆಂಗಳೂರು ಎಕ್ಸ್‌ಪ್ರೆಸ್‌

  • ಹಾಥಿಯಾ–ಪಟ್ನಾ ಎಕ್ಸ್‌ಪ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT