ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೂರತ್ ಡೈಮಂಡ್‌ ಬೂರ್ಸ್: ಜಗತ್ತಿನ ಬೃಹತ್‌ ವಜ್ರಾಭರಣ ವಹಿವಾಟು ಕೇಂದ್ರ ಆರಂಭ

Published 17 ಡಿಸೆಂಬರ್ 2023, 15:17 IST
Last Updated 17 ಡಿಸೆಂಬರ್ 2023, 15:17 IST
ಅಕ್ಷರ ಗಾತ್ರ

ಸೂರತ್‌ : ವಿಶ್ವದಲ್ಲಿಯೇ ಅತಿದೊಡ್ಡದಾದ, ಆಧುನಿಕ ಶೈಲಿಯ ಅಂತರರಾಷ್ಟ್ರೀಯ ವಜ್ರ ಮತ್ತು ಚಿನ್ನ ವಹಿವಾಟು ಕೇಂದ್ರ ‘ಸೂರತ್ ಡೈಮಂಡ್‌ ಬೂರ್ಸ್’ (ಎಸ್‌ಡಿಬಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಇಲ್ಲಿ ಉದ್ಘಾಟಿಸಿದರು. 

ಸೂರತ್‌ನ ಖಾಜೊದ್‌ ಗ್ರಾಮದಲ್ಲಿ ಎಸ್‌ಡಿಬಿ ನಿರ್ಮಾಣವಾಗಿದೆ. ಕಟ್ಟಡದ ಒಟ್ಟು ನಿರ್ಮಾಣ ವಿಸ್ತೀರ್ಣ 67 ಲಕ್ಷ ಚದರ ಅಡಿ. 4,500 ಮಳಿಗೆಗಳಿವೆ. ಇದು ಕಚ್ಚಾ, ಸಿದ್ಧ ವಜ್ರ ಮತ್ತು ಚಿನ್ನಾಭರಣಗಳ ವಹಿವಾಟು ಕೇಂದ್ರವಾಗಿರಲಿದೆ.

ಎಸ್‌ಡಿಬಿ ಉದ್ಘಾಟಿಸಿದ ಪ್ರಧಾನಿಯವರು, ‘ಸೂರತ್‌ನ ಹಿರಿಮೆಗೆ ಹೊಸ ವಜ್ರವೊಂದು ಸೇರ್ಪಡೆಯಾಗಿದೆ. ಆದರೆ, ಇದು ಸಾಮಾನ್ಯವಾದುದಲ್ಲ. ವಿಶ್ವದಲ್ಲಿಯೇ ಅತ್ಯುತ್ತಮವಾದುದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಲಾ 15 ಮಹಡಿಗಳ ಒಟ್ಟು 9 ಸಂಕೀರ್ಣಗಳಿವೆ. ಪ್ರತಿ ಕಚೇರಿಯ ವಿಸ್ತೀರ್ಣವು ಕನಿಷ್ಠ 300 ಚದರ ಅಡಿಯಿಂದ 1 ಲಕ್ಷ ಚದರ ಅಡಿಯವರೆಗೂ ಇದೆ. ಡ್ರೀಮ್‌ ಸಿಟಿ ಯೋಜನೆಯಡಿ 35.54 ಎಕರೆ ಭೂಮಿಯಲ್ಲಿ ಈ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. 

ಆಭರಣಗಳ ಆಮದು– ರಫ್ತು ವಹಿವಾಟಿಗೆ ನೆರವಾಗಲು ಅತ್ಯಾಧುನಿಕ ಕಸ್ಟಮ್ಸ್‌ ಕ್ರಿಯರೆನ್ಸ್ ಹೌಸ್‌ ಇದೆ. ಆಭರಣಗಳ ಬಿಡಿ ಮಾರಾಟಕ್ಕೆ ಜ್ಯುವೆಲ್ಲರಿ ಮಾಲ್‌ ಇದೆ. ಸುರಕ್ಷತಾ ಕ್ರಮಗಳಿರುವ ಅಂತರರಾಷ್ಟ್ರೀಯ ಬ್ಯಾಂಕಿಂಗ್ ವಹಿವಾಟು ಸೌಲಭ್ಯವಿದೆ.

ಹಿಂದೆ ಮುಂಬೈನಲ್ಲಿ ನೆಲೆಹೊಂದಿದ್ದ ವ್ಯಾಪಾರಿಗಳು ಸೇರಿದಂತೆ ಹಲವು ಪ್ರಮುಖ ವಜ್ರದ ವ್ಯಾಪಾರಿಗಳು ಈಗಾಗಲೇ ಎಸ್‌ಡಿಬಿಯಲ್ಲಿ ಮಳಿಗೆ ಹೊಂದಿದ್ದು, ವಹಿವಾಟು ಆರಂಭಿಸಿದ್ದಾರೆ ಎಂದು ಎಸ್‌ಡಿಬಿಯ ಮಾಧ್ಯಮ ಸಂಯೋಜಕ ದಿನೇಶ್‌ ನವದೀಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಸ್‌ಡಿಬಿ ಅನ್ನು ‘ಡ್ರೀಮ್’ ಸಿಟಿ (ಡೈಮಂಡ್‌ ರೀಸರ್ಚ್ ಅಂಡ್‌ ಮರ್ಸಂಟೈಲ್) ಯೋಜನೆಯ ಭಾಗವಾಗಿ ನಿರ್ಮಿಸಲಾಗಿದೆ. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್‌ ಪಟೇಲ್‌ ಅವರು ಫೆಬ್ರುವರಿ 2015ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

‘ನವಭಾರತದ ಶಕ್ತಿಯ ದ್ಯೋತಕ’ 

‘ಸೂರತ್‌ ಡೈಮಂಡ್ ಬೂರ್ಸ್’ (ಎಸ್‌ಡಿಬಿ) ಅಂತರರಾಷ್ಟ್ರೀಯ ವಜ್ರಾಭರಣಗಳ ವಹಿವಾಟು ಕೇಂದ್ರವು ನವಭಾರತದ ಶಕ್ತಿ ಮತ್ತು ಬದ್ಧತೆಯ ದ್ಯೋತಕವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸೂರತ್‌ನ ವಜ್ರಾಭರಣ ಉದ್ಯಮವು ಈಗಾಗಲೇ 8 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಈಗ ಎಸ್‌ಡಿಬಿ ನಿರ್ಮಾಣದಿಂದ ಹೆಚ್ಚುವರಿಯಾಗಿ 1.5 ಲಕ್ಷ ಜನರಿಗೆ ಉದ್ಯೋಗಾವಕಾಶಗಳು ಸಿಗಲಿವೆ ಎಂದು ಹೇಳಿದರು. ತಮ್ಮ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತವು ಜಗತ್ತಿನ ಮೂರು ಅತಿದೊಡ್ಡ ಆರ್ಥಿಕತೆಯ ದೇಶಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ‘ಮೋದಿ ಗ್ಯಾರಂಟಿ’ ಹೆಚ್ಚಾಗಿ ಚರ್ಚೆಗೆ ಒಳಪಡುತ್ತಿದೆ. ಈಚೆಗೆ ನಡೆದ ವಿಧಾನಸಭೆಗಳ ಚುನಾವಣಾ ಫಲಿತಾಂಶದ ಬಳಿಕ ಈ ಕುರಿತ ಚರ್ಚೆ ಇನ್ನಷ್ಟು ಹೆಚ್ಚಾಗಿದೆ ಎಂದು ಮೋದಿ ಹೇಳಿದರು. ಇದೇ ವೇಳೆ ಪ್ರಧಾನಿಯವರು ಸೂರತ್‌ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಆಧುನಿಕ ಟರ್ಮಿನಲ್‌ ಅನ್ನೂ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT