ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌| ಸಿ-295 ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ

Last Updated 30 ಅಕ್ಟೋಬರ್ 2022, 10:56 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿರುವ ಸಿ–295 ಸರಕು ಸಾಗಣೆ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ವಡೋದರಾದಲ್ಲಿ ಇಂದು (ಅ.30) ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ' ಈ ಘಟಕದ ಮೂಲಕ ಭಾರತದಲ್ಲಿ ವಿಮಾನಗಳನ್ನು ತಯಾರಿಸುವ ಹೊಸ ಪರಿಸರ ವ್ಯವಸ್ಥೆ ಸೃಷ್ಟಿಯಾಗಲಿದೆ.ಶೀಘ್ರದಲ್ಲೇ, 'ಮೇಕ್ ಇನ್ ಇಂಡಿಯಾ' ಎಂಬ ಟ್ಯಾಗ್‌ನೊಂದಿಗೆ ಪ್ರಯಾಣಿಕ ವಿಮಾನಗಳ ತಯಾರಿಕೆಗೂಭಾರತ ಸಾಕ್ಷಿಯಾಗಲಿದೆ’ ಎಂದು ಅವರು ಹೇಳಿದರು.

‘ವಾಯುಯಾನ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿರುವರಾಷ್ಟ್ರಗಳಲ್ಲಿಭಾರತವು ಒಂದು.ಮುಂಬರುವ 10-15 ವರ್ಷಗಳಲ್ಲಿ, ಭಾರತಕ್ಕೆ 2,000 ಪ್ರಯಾಣಿಕ ಮತ್ತು ಸರಕು ಸಾಗಣೆ ವಿಮಾನಗಳು ಬೇಕಾಗುತ್ತವೆ. ನಾವು ಎಷ್ಟು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದೇವೆ ಎಂಬುದನ್ನು ಇದು ಪ್ರತಿಬಿಂಬಿಸುತ್ತಿದೆ’ ಎಂದು ಅವರು ತಿಳಿಸಿದರು.

‘ಭಾರತವನ್ನು ಸ್ವಾವಲಂಬಿಯನ್ನಾಗಿ (ಆತ್ಮನಿರ್ಭರ) ಮಾಡಲು ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಗಳು ಭವಿಷ್ಯದಲ್ಲಿ ಎರಡು ಪ್ರಮುಖ ಆಧಾರಸ್ತಂಭಗಳಾಗಿ ನಿಲ್ಲಲಿವೆ. 2025ರ ವೇಳೆಗೆ, ನಮ್ಮ ರಕ್ಷಣಾ ಉತ್ಪಾದನಾ ಪ್ರಮಾಣವು 25 ಬಿಲಿಯನ್ (₹2 ಲಕ್ಷ ಕೋಟಿ) ದಾಟಲಿದೆ. ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಸ್ಥಾಪಿಸಲಾಗುತ್ತಿರುವ ರಕ್ಷಣಾ ಕಾರಿಡಾರ್‌ಗಳು ಅದಕ್ಕೆ ಶಕ್ತಿ ತುಂಬಲಿವೆ’ ಎಂದು ಹೇಳಿದ್ದಾರೆ.

ಯುರೋಪ್‌ನ ಏರ್‌ಬಸ್‌ ಸಂಸ್ಥೆ ಹಾಗೂ ಭಾರತದ ಟಾಟಾ ಸಂಸ್ಥೆಯ ಪಾಲುದಾರಿಕೆಯಲ್ಲಿ ವಿಮಾನವನ್ನು ತಯಾರಿಸಲಾಗುತ್ತದೆ

ಘಟಕದ ನಿರ್ಮಾಣಕ್ಕಾಗಿ ಏರ್‌ಬಸ್‌ನೊಂದಿಗೆ ₹21,935 ಕೋಟಿ ಮೊತ್ತದ ಒಪ್ಪಂದವನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಮಾಡಿಕೊಳ್ಳಲಾಗಿತ್ತು. ಯೋಜನೆ ಅಡಿ ಒಟ್ಟು 56 ವಿಮಾನಗಳನ್ನು ತಯಾರಿಸಲಾಗುತ್ತದೆ.

ಉದ್ಯೋಗ ಸೃಷ್ಟಿ

ವಿಮಾನಯಾನ ಕ್ಷೇತ್ರದ ಉದ್ಯೋಗ ಸೃಷ್ಟಿಯಲ್ಲಿ ಈ ಘಟಕವು ವೇಗವರ್ಧಕದಂತೆ ಕೆಲಸ ಮಾಡಲಿದೆ. 600ಕ್ಕೂ ಹೆಚ್ಚು ನುರಿತ ನೇರ ಉದ್ಯೋಗ, 3,000 ಪರೋಕ್ಷ ಉದ್ಯೋಗ ಹಾಗೂ 3,000 ಮಧ್ಯಮ ನುರಿತ ಉದ್ಯೋಗ ಅವಕಾಶಗಳನ್ನು ಘಟಕ ಸೃಷ್ಟಿಸಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ವಿಮಾನದ ವೈಶಿಷ್ಟ್ಯ

lಕನಿಷ್ಠ ತಾಪಮಾನ ಮತ್ತು ಗರಿಷ್ಠ ಉಷ್ಣಾಂಶದಲ್ಲೂ ಕೆಲಸ ಮಾಡುವ ಕ್ಷಮತೆ

lಆಗಸದಲ್ಲಿಯೇ ಬೇರೆ ವಿಮಾನಗಳಿಗೆ ಇಂಧನ ಭರ್ತಿ ಮಾಡುತ್ತದೆ. 6,000 ಲೀಟರ್‌ ಇಂಧನ ಹೊತ್ತೊಯ್ಯುವ ಸಾಮರ್ಥ್ಯ

lರನ್‌ವೇ ಇಲ್ಲದ ಸ್ಥಳದಿಂದಲೂ ಹಾರಾಟ ನಡೆಸುವ ಮತ್ತು ಇಳಿಯುವ ಸಾಮರ್ಥ್ಯ

l40–45 ಶಸ್ತ್ರಸಜ್ಜಿತ ಸೈನಿಕರು ಅಥವಾ ಸುಮಾರು 70 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ

l56 ವಿಮಾನಗಳಲ್ಲೂ ದೇಶೀಯವಾಗಿ ಅಭಿವೃದ್ಧಿಪಡಿಸಿದ ವಿದ್ಯುನ್ಮಾನ ರಕ್ಷಣಾ ಮತ್ತು ದಾಳಿ ವ್ಯವಸ್ಥೆ ಇರಲಿದೆ. ಈ ವ್ಯವಸ್ಥೆಯನ್ನು ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಹಾಗೂ ಭಾರತ್‌ ಡೈನಮಿಕ್ಸ್‌ ಲಿ. ಅಭಿವೃದ್ಧಿಪಡಿಸಿದೆ

l5ರಿಂದ 9 ಟನ್‌ ಭಾರ ಹೊರುವ ಸಾಮರ್ಥ್ಯ

lಸೈನಿಕರನ್ನು, ಸರಕುಗಳನ್ನು ಸುಲಭವಾಗಿ ಮತ್ತು ಕ್ಷಿಪ್ರವಾಗಿ ಏರ್‌ಡ್ರಾಪ್‌ ಮಾಡುವಂಥ ರ್‍ಯಾಂಪ್‌ ವ್ಯವಸ್ಥೆ

2025ರ ವೇಳೆಗೆ ಹಾರಾಟಕ್ಕೆ ಸಿದ್ಧ

l 2025 ಆಗಸ್ಟ್‌ ಒಳಗಾಗಿ ಹಾರಾಟಕ್ಕೆ ಸಿದ್ಧವಿರುವ 16 ವಿಮಾನಗಳನ್ನು ಏರ್‌ಬಸ್‌ ಪೂರೈಸಲಿದೆ

l ಭಾರತದಲ್ಲೇ ಸಂಪೂರ್ಣ ನಿರ್ಮಾಣವಾಗುವ ಮೊದಲ ವಿಮಾನವು 2026ರ ಸೆಪ್ಟೆಂಬರ್‌ ಹೊತ್ತಿಗೆ ಸಿದ್ಧ

l ಸ್ಪೇನ್‌ನಲ್ಲಿರುವ ಏರ್‌ಬಸ್‌ ಸಂಸ್ಥೆಯ ತಯಾರಿಕಾ ಘಟಕದಲ್ಲಿ ಭಾರತದ 240 ಎಂಜಿನಿಯರ್‌ಗಳಿಗೆ ತರಬೇತಿ

l ಅವ್ರೋ ವಿಮಾನದ ಬದಲಾಗಿ ಸಿ–295 ವಿಮಾನವನ್ನು ತಯಾರಿಸಲಾಗುತ್ತಿದೆ

l ಬಿಡಿಭಾಗಗಳ ಪೂರೈಕೆಗೆ ದೇಶದ ಏಳು ರಾಜ್ಯಗಳ ಒಟ್ಟು 125 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಟಾಟಾ ಸಂಸ್ಥೆ ಗುರುತಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT