ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಬಾಂಗ್ಲಾ ಸಂಪರ್ಕ ರೈಲು ಯೋಜನೆ ಉದ್ಘಾಟಿಸಿದ ಮೋದಿ, ಹಸೀನಾ

Published 1 ನವೆಂಬರ್ 2023, 12:56 IST
Last Updated 1 ನವೆಂಬರ್ 2023, 12:56 IST
ಅಕ್ಷರ ಗಾತ್ರ

ಅಗರ್ತಲಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ತ್ರಿಪುರಾದ ನಿಶ್ಚಿಂತಪುರ ಮತ್ತು ನೆರೆಯ ದೇಶದ ಗಂಗಾಸಾಗರ್ ನಡುವಿನ ಪ್ರಮುಖ ರೈಲು ಸಂಪರ್ಕವೂ ಸೇರಿ ಮೂರು ಯೋಜನೆಗಳನ್ನು ಬುಧವಾರ ವರ್ಚುವಲ್ ಮೂಲಕ ಜಂಟಿಯಾಗಿ ಉದ್ಘಾಟಿಸಿದರು.

65-ಕಿ.ಮೀ. ಅಂತರದ ಖುಲ್ನಾ-ಮೊಂಗ್ಲಾ ಬಂದರು ರೈಲು ಮಾರ್ಗ ಮತ್ತು ಬಾಂಗ್ಲಾದೇಶದ ರಾಂಪಾಲ್‌ನಲ್ಲಿರುವ ಮೈತ್ರಿ ಸೂಪರ್ ಥರ್ಮಲ್ ಪವರ್ ಪ್ಲಾಂಟ್‌ನ 2ನೇ ಘಟಕ ಉದ್ಘಾಟನೆಯಾದ ಉಳಿದೆರಡು ಯೋಜನೆಗಳು.

ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಇದು ಐತಿಹಾಸಿಕ ಕ್ಷಣ. ಈಶಾನ್ಯ ರಾಜ್ಯ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ರೈಲು ಸಂಪರ್ಕವೂ ಆಗಿದೆ’ ಎಂದು ಹೇಳಿದರು.

‘ಉಭಯ ದೇಶಗಳ ಸಹಕಾರದ ಯಶಸ್ಸನ್ನು ಸಂಭ್ರಮಿಸಲು ನಾವು ಮತ್ತೊಮ್ಮೆ ಸೇರಿರುವುದು ಸಂತಸದ ಸಂಗತಿ. ಕಳೆದ ಒಂಬತ್ತು ವರ್ಷಗಳಲ್ಲಿ ನಾವು ಒಟ್ಟಿಗೆ ಕೈಗೊಂಡ ಕೆಲಸಗಳು ದಶಕಗಳಲ್ಲಿ ನಡೆದಿರಲಿಲ್ಲ’ ಎಂದು ಮೋದಿ ಅವರು ಹಸೀನಾ ಅವರೊಂದಿಗೆ ನಡೆಸಿದ ವರ್ಚುವಲ್‌ ಸಂವಾದದಲ್ಲಿ ಅಭಿಪ್ರಾಯಪಟ್ಟರು.

‘ಈ ಮೂರು ಯೋಜನೆಗಳೂ ಉಭಯ ದೇಶಗಳ ನಡುವೆ ಮೂಲಸೌಕರ್ಯ ಅಭಿವೃದ್ಧಿಯ ಸಹಯೋಗಕ್ಕೆ ಮತ್ತಷ್ಟು ಬಲ ತುಂಬಲಿದೆ. ನಾವು ಸ್ನೇಹ ಮತ್ತು ಸಹಯೋಗದ ಗಟ್ಟಿಯಾದ ಸಂಬಂಧ ಹೊಂದಿರುವುದನ್ನು ಜಂಟಿಯಾಗಿ ಚಾಲನೆ ನೀಡಿರುವುದು ತೋರಿಸುತ್ತದೆ. ಜಿ20 ಶೃಂಗಸಭೆಯ ಭೇಟಿ ವೇಳೆ ಮೋದಿಯವರು ನೀಡಿದ ಆತಿಥ್ಯಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಶೇಖ್‌ ಹಸೀನಾ ಹೇಳಿದರು.

ಭಾರತದ ನೆರವಿನ ಯೋಜನೆಗಳು

ಈ ಎಲ್ಲ ಮೂರು ಯೋಜನೆಗಳು ಭಾರತದ ನೆರವಿನಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಉಪಕ್ರಮಗಳಾಗಿವೆ. ಅಗರ್ತಲಾ-ಅಖೌರಾ ಗಡಿಯಾಚೆಗಿನ ರೈಲು ಸಂಪರ್ಕಕ್ಕಾಗಿ ಭಾರತವು ₹392.52 ಕೋಟಿ ಅನುದಾನವನ್ನು ಬಾಂಗ್ಲಾದೇಶಕ್ಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಶ್ಚಿಂತಪುರ ಮತ್ತು ಗಂಗಾಸಾಗರ್ ನಡುವಿನ 12.24 ಕಿ.ಮೀ. ರೈಲು ಯೋಜನೆ (ತ್ರಿಪುರಾದಲ್ಲಿ 5.46 ಕಿ.ಮೀ. ಮತ್ತು ಬಾಂಗ್ಲಾದೇಶದಲ್ಲಿ 6.78 ಕಿ.ಮೀ. ಜೋಡಿ ಮಾರ್ಗ) ಢಾಕಾ ಮೂಲಕ ಅಗರ್ತಲಾ ಮತ್ತು ಕೋಲ್ಕತ್ತ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ತಗ್ಗಿಸಲಿದೆ. ಅಲ್ಲದೆ, ಗಡಿಯಾಚೆಗಿನ ವ್ಯಾಪಾರ ಕೂಡ ಉತ್ತೇಜಿಸುವ ನಿರೀಕ್ಷೆ ಇದೆ.

ಇನ್ನು ಖುಲ್ನಾ-ಮೊಂಗ್ಲಾ ಬಂದರು ರೈಲು ಮಾರ್ಗದ ಭಾಗವಾಗಿ, ಬಾಂಗ್ಲಾದೇಶದ ಮೊಂಗ್ಲಾ ಬಂದರು ಮತ್ತು ಖುಲ್ನಾದಲ್ಲಿ ಅಸ್ತಿತ್ವದಲ್ಲಿರುವ ರೈಲು ಜಾಲದ ನಡುವೆ 65 ಕಿ.ಮೀ. ಬ್ರಾಡ್ ಗೇಜ್ ಮಾರ್ಗ ನಿರ್ಮಿಸಲಾಗಿದೆ.

1,320 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಮೈತ್ರಿ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ಅನ್ನು ಬಾಂಗ್ಲಾದೇಶ- ಇಂಡಿಯಾ ಫ್ರೆಂಡ್‌ಶಿಪ್ ಪವರ್ ಕಂಪನಿ ಲಿಮಿಟೆಡ್, ಭಾರತದ ಎನ್‌ಟಿಪಿಸಿ ಮತ್ತು ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿಯು 50:50 ಪಾಲುದಾರಿಕೆಯ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT