ನವದೆಹಲಿ: ಎಎಪಿ ಸಂಸದೆ ಸ್ವಾತಿ ಮಾಲಿವಾಲ್ ಮೇಲಿನ ಹಲ್ಲೆಯು ‘ಕ್ರೂರ ಘಟನೆ’ ಎಂದು ಹೇಳಿರುವ ದೆಹಲಿ ಪೊಲೀಸರು, ಈ ಪ್ರಕರಣದ ಆರೋಪಿ ಬಿಭವ್ ಕುಮಾರ್ ಜಾಮೀನು ಕೋರಿ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಬಿಭವ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ದೆಹಲಿ ಪೊಲೀಸ್, ಈ ಪ್ರಕರಣದಲ್ಲಿ ಮಾಲಿವಾಲ್ ಅವರ ವಾದವನ್ನು ಆಲಿಸುವಂತೆಯೂ ಕೇಳಿಕೊಂಡಿತು.
‘ದೆಹಲಿಯ ಆಡಳಿತ ಪಕ್ಷದ ಹಾಲಿ ಸಂಸದೆಯೊಬ್ಬರ ಮೇಲೆ ಮುಖ್ಯಮಂತ್ರಿಗಳ ನಿವಾಸದಲ್ಲಿ ‘ಕ್ರೂರ ಹಲ್ಲೆ’ ನಡೆದಿರುವುದರಿಂದ ಇದೊಂದು ಅತ್ಯಂತ ಗಂಭೀರ ಪ್ರಕರಣ’ ಎಂದು ಪೊಲೀಸರು ಹೇಳಿದ್ದಾರೆ.
ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಮಾಲಿವಾಲ್ ಅವರ ವಿರುದ್ಧ ಮೇ 13ರಂದು ಹಲ್ಲೆ ನಡೆಸಿದ್ದ ಆರೋಪವನ್ನು ಎದುರಿಸುತ್ತಿರುವ ಬಿಭವ್ ಕುಮಾರ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.