ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Delhi Metro: ಮೆಟ್ರೊ ನಿಲ್ದಾಣದ ಗೋಡೆ ಕುಸಿದು ವ್ಯಕ್ತಿ ಸಾವು, 4 ಮಂದಿಗೆ ಗಾಯ

Published 8 ಫೆಬ್ರುವರಿ 2024, 10:53 IST
Last Updated 8 ಫೆಬ್ರುವರಿ 2024, 10:53 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಮೆಟ್ರೊ ರೈಲು ನಿಗಮದ (ಡಿಎಂಆರ್‌ಸಿ) ಗುಲಾಬಿ ಮಾರ್ಗದಲ್ಲಿರುವ ಗೋಕುಲಪುರಿ ಮೆಟ್ರೊ ನಿಲ್ದಾಣದ ಗೋಡೆಯ ಒಂದು ಭಾಗ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಟ್ರೊ ನಿಲ್ದಾಣದ ಗೋಡೆ ಕುಸಿಯುವ ಸಂದರ್ಭದಲ್ಲಿ ವ್ಯಕ್ತಿಯು ತಮ್ಮ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಮೃತ ವ್ಯಕ್ತಿಯು ಕರವಾಲ್ ನಗರ ಪ್ರದೇಶ ಸಮೀಪದ ಶಹೀದ್‌ ಭಗತ್‌ ಸಿಂಗ್‌ ಕಾಲೋನಿಯ ನಿವಾಸಿ ವಿನೋದ್ ಕುಮಾರ್‌ (53 ವರ್ಷ) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ನಗರದ ದಿಲ್ಶಾದ್‌ ಗಾರ್ಡನ್‌ನ ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಘಡದಲ್ಲಿ ಎರಡು ಮೋಟಾರ್‌ ಸೈಕಲ್‌ಗಳು ಮತ್ತು ಎರಡು ಸ್ಕೂಟರ್‌ಗಳು ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯು ಬೆಳಿಗ್ಗೆ 11ಕ್ಕೆ ನಡೆದಿದ್ದು, ಮೆಟ್ರೊ ನಿಲ್ದಾಣದ ಪೂರ್ವ ಭಾಗದಲ್ಲಿರುವ ತಡೆಗೋಡೆ ಹಾಗೂ ಎತ್ತರಿಸಿದ ಪ್ಲಾಟ್‌ಫಾರ್ಮ್‌ನ ಒಂದು ಭಾಗದ ಮೇಲ್ಛಾವಣಿ ಕುಸಿದು ರಸ್ತೆ ಮೇಲೆ ಬಿದ್ದಿದೆ. ಮೇಲ್ಛಾವಣಿಯ ಒಂದು ಭಾಗ ಈಗಲೂ ನೇತಾಡುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ ಮೆಟ್ರೊದ ಗುಲಾಬಿ ಮಾರ್ಗವು ಮಜ್ಲಿಸ್ ಪಾರ್ಕ್‌ ಮತ್ತು ಶಿವ ವಿಹಾರ ಮೆಟ್ರೊ ನಿಲ್ದಾಣಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.

ಸದ್ಯಕ್ಕೆ ಮೆಟ್ರೊ ನಿಲ್ದಾಣವನ್ನು ಮುಚ್ಚಲಾಗಿದೆ. ದುರಸ್ತಿ ಕಾರ್ಯ ಕೈಗೊಳ್ಳುವ ಮುನ್ನ ತಜ್ಞರ ತಂಡದಿಂದ ತಪಾಸಣೆ ನಡೆಸಲಾಗುವುದು. ಅವಘಡ ಕುರಿತು ಸಂಬಂಧ ಪಟ್ಟ ಕಾನೂನಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವಘಡದಲ್ಲಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ₹25 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₹5 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ₹1 ಲಕ್ಷ ಪರಿಹಾರವನ್ನು ದೆಹಲಿ ಮೆಟ್ರೊ ರೈಲು ನಿಗಮ ಘೋಷಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಡಿಎಂಆರ್‌ಸಿ ಅಧಿಕಾರಿಗಳು, ಸಿವಿಲ್‌ ವಿಭಾಗದ ಮ್ಯಾನೇಜರ್‌ ಮತ್ತು ಜೂನಿಯರ್‌ ಎಂಜಿನಿಯರ್‌ಗಳನ್ನು ತಕ್ಷಣ ಅಮಾನತುಗೊಳಿಸಲಾಗಿದೆ. ಭವಿಷ್ಯದಲ್ಲಿ ಇಂತಹ ದುರದೃಷ್ಟಕರ ಘಟನೆಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಘಟನೆಯ ಕಾರಣ ‌ತಿಳಿಯಲು ತನಿಖೆ ನಡೆಸಲಾಗುವುದು ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT