ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌‌‌‌ದೇಶದ ಅಭಿವೃದ್ಧಿಗೆ, ಸಂಪನ್ಮೂಲ ಸದ್ಬಳಕೆಗೆ ಯುವ ಶಕ್ತಿ ಅತ್ಯಗತ್ಯ: ಪ್ರಧಾನಿ

ಕೌಶಲ್ ದೀಕ್ಷಾಂತ್ ಸಮರೋಹ್ 2023 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ.
Published 12 ಅಕ್ಟೋಬರ್ 2023, 10:35 IST
Last Updated 12 ಅಕ್ಟೋಬರ್ 2023, 10:35 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಯುವಕರ ಶಕ್ತಿ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೌಶಲ್ ದೀಕ್ಷಾಂತ್ ಸಮರೋಹ್ 2023ಅನ್ನು ಉದ್ದೇಶಿಸಿ ಮಾತನಾಡಿದ ಅವರು, 'ಯಾವುದೇ ದೇಶದ ನೈಸರ್ಗಿಕ ಅಥವಾ ಖನಿಜ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯುವಕರ ಶಕ್ತಿ ಮಹತ್ವದ್ದಾಗಿದೆ. ಬಲವಾದ ಯುವ ಶಕ್ತಿಯೊಂದಿಗೆ ದೇಶ ಹೆಚ್ಚು ಅಭಿವೃದ್ಧಿ ಹೊಂದುತ್ತದೆ. ಇದರಿಂದ ರಾಷ್ಟ್ರದ ಸಂಪನ್ಮೂಲಗಳ ಸದ್ಭಳಕೆಯಾಗುತ್ತದೆ' ಎಂದರು.

‘ಈ ಕಾರ್ಯಕ್ರಮದಲ್ಲಿ, ಸಾವಿರಾರು ಯುವಕರು ತಂತ್ರಜ್ಞಾನದ ಮೂಲಕ ಸಂಪರ್ಕ ಹೊಂದಿದ್ದಾರೆ. ಪ್ರತಿಯೊಂದು ದೇಶ ‌ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿದೆ. ಆದರೆ ಇವುಗಳನ್ನು ಬಳಸಿಕೊಳ್ಳಲು ಯುವ ಶಕ್ತಿ ಮುಖ್ಯ' ಎಂದು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ಪ್ರಧಾನಿ ಮೋದಿ ಹೇಳಿದರು.

ಹೊಸ ಅವಕಾಶಗಳ ಸೃಷ್ಟಿ:

ಯುವಕರ ಸಬಲೀಕರಣಕ್ಕಾಗಿ ತಮ್ಮ ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, "ನಾವು ಎನ್‌ಇಪಿ ಜಾರಿಗೆ ತಂದಿದ್ದೇವೆ. ನಾವು ಹೊಸ ಸಂಸ್ಥೆಗಳನ್ನು ತೆರೆದಿದ್ದೇವೆ. ಉದ್ಯೋಗವನ್ನು ಒದಗಿಸಲು ಸಾಂಪ್ರದಾಯಿಕ ಕ್ಷೇತ್ರಗಳನ್ನು ಬಲಪಡಿಸುತ್ತಿದ್ದೇವೆ. ಕೋಟಿಗಟ್ಟಲೆ ಭಾರತೀಯರಿಗೆ ಉದ್ಯೋಗವನ್ನು ಒದಗಿಸುವ ಹೊಸ ಕ್ಷೇತ್ರಗಳನ್ನು ಉತ್ತೇಜಿಸುತ್ತಿದ್ದೇವೆ. ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ" ಎಂದರು.

ಜಗತ್ತು ಭಾರತದತ್ತ ನೋಡುತ್ತಿದೆ:

ಭಾರತದ ಜಾಗತಿಕ ಮನ್ನಣೆಗಾಗಿ ಯುವಕರನ್ನು ಶ್ಲಾಘಿಸಿದ ಅವರು, "ಪ್ರತಿಯೊಂದು ದೇಶವು ಈ ಶತಮಾನದ ಭಾರತವನ್ನು ಒಪ್ಪಿಕೊಳ್ಳುತ್ತದೆ. ಇದರ ಶ್ರೇಯಸ್ಸು ಯುವಕರಿಗೆ ಸಲ್ಲುತ್ತದೆ. ನುರಿತ ಉದ್ಯೋಗಿಗಳಿಗಾಗಿ ಜಗತ್ತು ಭಾರತದತ್ತ ನೋಡುತ್ತಿದೆ" ಎಂದರು.

ನಿರಂತರ ಕೌಶಲ ಅಗತ್ಯ:

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಹಿಂದಿನ ಸರ್ಕಾರಗಳು ಯುವಕರನ್ನು ಕೌಶಲಗೊಳಿಸುವ ಮಹತ್ವವನ್ನು ಅರ್ಥಮಾಡಿಕೊಳ್ಳಲಿಲ್ಲ. ಆದರೆ ಮೋದಿ ಸರ್ಕಾರ ನಿಮ್ಮೊಂದಿಗಿದೆ. ನಾವು ಹೊಸ ಕೌಶಲ ಸಚಿವಾಲಯವನ್ನು ಸಹ ರಚಿಸಿದ್ದೇವೆ. ಜಗತ್ತು ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ನಮ್ಮನ್ನು ನಾವು ಮಾರ್ಪಡಿಸಿಕೊಳ್ಳಬೇಕು ಎಂದು ಬದಲಾಗುತ್ತಿರುವ ಜಗತ್ತಿನಲ್ಲಿ ನಿರಂತರ ಕೌಶಲದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ನಿರುದ್ಯೋಗ ದರ ಇಳಿಮುಖ:

ದೇಶದಲ್ಲಿ ನಿರುದ್ಯೋಗ ದರದ ಕುರಿತು ಮಾತನಾಡಿದ ಪ್ರಧಾನಿ ಮೋದಿ, "ಕಳೆದ ಒಂಬತ್ತು ವರ್ಷಗಳಲ್ಲಿ 5 ಸಾವಿರ ಐಟಿಐಗಳನ್ನು ನಿರ್ಮಿಸಲಾಗಿದೆ. ಸಮೀಕ್ಷೆಯ ಪ್ರಕಾರ, ಕಳೆದ 6 ವರ್ಷಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರ ವೇಗವಾಗಿ ಕಡಿಮೆಯಾಗುತ್ತಿದೆ. ದೇಶವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಜತೆಗೆ ವಿಶ್ವದ ಅತಿದೊಡ್ಡ ಕೌಶಲ ಕೇಂದ್ರವಾಗಿ ಹೊರಹೊಮ್ಮಬೇಕು ಎಂದರು.

ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ:

ಮುಂಬರುವ ದಿನಗಳಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿದೆ ಎಂದು ಐಎಂಎಫ್‌ ಹೇಳಿದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಭಾರತ ಅಗ್ರ ಮೂರು ಆರ್ಥಿಕತೆಗಳ ಭಾಗವಾಗಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಜಗತ್ತಿಗೆ ನಾವು ಭಾರತವನ್ನು ಅತಿದೊಡ್ಡ ಕೌಶಲ ಕೇಂದ್ರವನ್ನಾಗಿ ಮಾಡಬೇಕಾಗಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT