ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
ಕಳೆದ ಭಾನುವಾರ ಪ್ರವಾಸಕ್ಕೆಂದು ಸ್ನೇಹಿತನೊಂದಿಗೆ ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತಕ್ಕೆ ಬಂದು ವೀಕ್ಷಣೆ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಕೆ.ಎಚ್. ನಗರ ಸುಣ್ಣದ ಹಳ್ಳಿ ನಿವಾಸಿ ಶರತ್ ಕುಮಾರ್(23) ಮೃತದೇಹ ವಾರದ ಬಳಿಕ ಜಲಪಾತದ ಸಮೀಪದ ಮರದ ಪೊಟರೆಯ ಸಮೀಪ ಪತ್ತೆಯಾಗಿದೆ.
ಬಾಂಬೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT-B) ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ‘ ಸಸ್ಯಹಾರಿಗಳಿಗೆ ಮಾತ್ರ’ ಎಂದು ಫಲಕ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಆಹಾರ ತಾರತಮ್ಯ ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಎಂಬಲ್ಲಿ ಇಸ್ಲಾಮಿಕ್ ರಾಜಕೀಯ ಪಕ್ಷದ ಸಭೆ ನಡೆಯುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ ಪರಿಣಾಮ 40 ಜನರು ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದಾರೆ.
ಇಂಗ್ಲೆಂಡ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಪ್ರಕಟಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಬಳಿಕ ತಮ್ಮ ನಿರ್ಧಾರ ಪ್ರಕಟಿಸಿದ್ದರು. ಆ್ಯಷಸ್ ಟೆಸ್ಟ್ ಸರಣಿಯ ಬಳಿಕ ನಿವೃತ್ತಿಯಾಗುವುದಾಗಿ ಬ್ರಾಡ್ ಶನಿವಾರ ಹೇಳಿದ್ದರು.
ಮಂಗಳವಾರ ಆಗಸ್ಟ್1 ರಂದು ಪುಣೆಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಲೋಕಮಾನ್ಯ ತಿಲಕ್ ರಾಷ್ಟ್ರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಇದೇ ದಿನ ಅವರು ದಗ್ದುಶೇತ್ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದು, ಬಳಿಕ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ದೊಕ್ಸುರಿ ಚಂಡಮಾರುತ ಅಪ್ಪಳಿಸಿದ ಪರಿಣಾಮ ಉತ್ತರ ಚೀನಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಬೀಜಿಂಗ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ 20 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಯೋಧರೊಬ್ಬರು ನಾಪತ್ತೆಯಾಗಿದ್ದು ಅವರ ಪತ್ತೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ.
‘ರಾಜ್ಯದಲ್ಲಿ ಅತಿವೃಷ್ಟಿಯಿಂದ ಮನೆಗಳಿಗೆ ಹಾನಿಯಾಗಿದೆ. ದೊಡ್ಡ ಪ್ರಮಾಣದಲ್ಲಿ ಪ್ರಾಣಹಾನಿಯೂ ಆಗಿದೆ. ಸುಮಾರು 11 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದರೆ, ಉಳಿದೆಡೆ ಬರದ ಛಾಯೆ ಆವರಿಸಿದೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಿದ್ದ ವಿಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಸಂಸದರು ಅಲ್ಲಿನ ರಾಜ್ಯಪಾಲರಾದ ಅನುಸೂಯ ಉಯಿಕೆಯವರನ್ನು ಭೇಟಿ ಮಾಡಿ ತಮ್ಮ ಅವಲೋಕನ ಕುರಿತ ಜ್ಞಾಪನಾಪತ್ರ ಸಲ್ಲಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭಾನುವಾರ ವಾಣಿಜ್ಯ ಮಿಷನ್‌ನ ಪಿಎಸ್‌ಎಲ್‌ವಿ-ಸಿ 56/ಡಿಎಸ್-ಎಸ್‌ಎಆರ್ ರಾಕೆಟ್ ಉಡ್ಡಯನವನ್ನು ಯಶಸ್ವಿಯಾಗಿ ನಡೆಸಿದೆ. ಎಲ್ಲ ಏಳು ಉಪಗ್ರಹಗಳನ್ನು ನಿಖರವಾಗಿ ಅವುಗಳ ಉದ್ದೇಶಿತ ಕಕ್ಷೆಗೆ ಸೇರಿಸಿದೆ.